ADVERTISEMENT

ಸಂಯುಕ್ತ 2: ಹಾರರ್‌ ಕಥೆಯಿಂದ ಸೈನಿಕರವರೆಗೆ

ನಾವು ನೋಡಿದ ಸಿನಿಮಾ

ವಿಜಯ್ ಜೋಷಿ
Published 10 ನವೆಂಬರ್ 2017, 14:34 IST
Last Updated 10 ನವೆಂಬರ್ 2017, 14:34 IST
‘ಸಂಯುಕ್ತ 2’ ಚಿತ್ರದ ಒಂದು ದೃಶ್ಯ
‘ಸಂಯುಕ್ತ 2’ ಚಿತ್ರದ ಒಂದು ದೃಶ್ಯ   

ಸಿನಿಮಾ: ಸಂಯುಕ್ತ 2

ನಿರ್ದೇಶನ: ಅಭಿರಾಮ್

ನಿರ್ಮಾಣ: ಮಂಜುನಾಥ ಡಿ.ಎಸ್.

ADVERTISEMENT

ಸಂಗೀತ: ಕೆ.ವಿ. ರವಿಚಂದ್ರ

ತಾರಾಗಣ: ಪ್ರಭು ಸೂರ್ಯ, ಚೇತನ್ ಚಂದ್ರ, ಐಶ್ವರ್ಯಾ ಸಿಂಧೋಗಿ, ನೇಹಾ ಪಾಟೀಲ್, ದೇವರಾಜ್

**

ಅಭಿರಾಮ್‌ ನಿರ್ದೇಶನದ ಚಿತ್ರ ‘ಸಂಯುಕ್ತ–2’. ಚಿತ್ರದ ಪೋಸ್ಟರ್‌ಗಳನ್ನು ಗಮನಿಸಿದರೆ ಇದೊಂದು ಹಾರರ್‌ ಹಾಗೂ ಆ್ಯಕ್ಷನ್‌ ಇರುವ ಸಿನಿಮಾ ಎಂದು ಅನಿಸದಿರದು. ಪೋಸ್ಟರ್‌ ನೋಡಿ, ಸಿನಿಮಾ ವೀಕ್ಷಿಸಿದರೆ ಇದು ಹಾರರ್‌ ಹಾಗೂ ಆ್ಯಕ್ಷನ್‌ ಇರುವ ಸಿನಿಮಾ ಹೌದು ಎಂಬುದು ಖಚಿತವಾಗುತ್ತದೆ.

ಆದರೆ, ಈ ಸಿನಿಮಾ ಮೂಲಕ ಅಭಿರಾಮ್‌ ಹೇಳುತ್ತಿರುವುದು ಒಂದು ಹಾರರ್ ಹಾಗೂ ಆ್ಯಕ್ಷನ್‌ ಕಥೆಯನ್ನಷ್ಟೇ ಅಲ್ಲ.

‘ಸಂಯುಕ್ತ’ ಎಂಬುದು ಒಂದು ವೈದ್ಯಕೀಯ ಕಾಲೇಜು. ಆ ಕಾಲೇಜಿಗೆ ಒಬ್ಬ ಅಧ್ಯಕ್ಷ, ಪ್ರಾಂಶುಪಾಲ, ಮನಃಶಾಸ್ತ್ರವನ್ನು ಬೋಧಿಸುವ ಒಬ್ಬ ಪ್ರಾಧ್ಯಾಪಕ... ಹೀಗೆ ಅಗತ್ಯ ಇರುವ ಎಲ್ಲ ಸಿಬ್ಬಂದಿಯೂ ಇರುತ್ತಾರೆ. ಪ್ರತಿ ವರ್ಷ ನವೆಂಬರ್‌ ತಿಂಗಳ ನಿರ್ದಿಷ್ಟ ದಿನ ಆ ಕಾಲೇಜಿನ ಒಬ್ಬ ವಿದ್ಯಾರ್ಥಿ ಕಾಣೆಯಾಗುತ್ತಿರುತ್ತಾರೆ. ಆರೇಳು ವರ್ಷಗಳಿಂದ ಹೀಗೇ ಆಗುತ್ತಿರುತ್ತದೆ.

ಕಾಣೆಯಾದವರ ದೇಹ ಸಿಗುವುದಿಲ್ಲ. ಅವರು ಎಲ್ಲಿದ್ದಾರೆ ಎಂಬುದು ಪತ್ತೆಯೂ ಆಗುವುದಿಲ್ಲ. ಹಾಗಾಗಿ ಅವರು ಕೊಲೆಯಾಗಿದ್ದಾರೋ, ಕಾಲೇಜು ಬಿಟ್ಟು ಇನ್ನೆಲ್ಲೋ ಹೋಗಿಬಿಟ್ಟಿದ್ದಾರೋ ಎಂಬುದೂ ತಿಳಿಯುವುದಿಲ್ಲ. ಸಿನಿಮಾ ಬಗ್ಗೆ ಕುತೂಹಲ ಮೂಡುವುದು ಇಲ್ಲಿಂದ ಮುಂದೆ.

ಪೊಲೀಸ್‌ ಸೂಪರಿಂಟೆಂಡೆಂಟ್‌ ಒಬ್ಬ (ಚೇತನ್ ಚಂದ್ರ) ವಿದ್ಯಾರ್ಥಿಯ ಸೋಗಿನಲ್ಲಿ ಈ ಕಾಲೇಜು ಸೇರಿಕೊಂಡು, ವಿದ್ಯಾರ್ಥಿಗಳು ಕಣ್ಮರೆಯಾಗಿರುವುದರ ಹಿಂದಿನ ನಿಗೂಢ ಏನು ಎಂಬುದರ ತನಿಖೆ ನಡೆಸುತ್ತಿರುತ್ತಾನೆ. ಕಣ್ಮರೆಯ ಕಥೆ, ಆ ಪ್ರಕರಣಗಳನ್ನು ಭೇದಿಸುವ ಕಥೆಗಳನ್ನು ಸಿನಿಮಾ ನೋಡಿ ತಿಳಿದುಕೊಳ್ಳಬಹುದು.

ಕೊನೆಯ ಹದಿನೈದು– ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಸಿನಿಮಾ ಬಹು ವಿಚಿತ್ರವಾದ ತಿರುವೊಂದನ್ನು ಪಡೆದುಕೊಳ್ಳುತ್ತದೆ. ‘ಬಹಳ ಒಳ್ಳೆಯವನು’ ಎಂದು ವೀಕ್ಷಕರು ಭಾವಿಸಿದ್ದ ವ್ಯಕ್ತಿಯೊಬ್ಬ ಅತ್ಯಂತ ವಿಚಿತ್ರವಾದ ಮನುಷ್ಯನೂ ಹೌದು ಎಂಬುದು ಗೊತ್ತಾಗುತ್ತದೆ. ಆ ಪಾತ್ರ ನಿಭಾಯಿಸಿರುವವರು ನಿರ್ಮಾಪಕ ಮಂಜುನಾಥ ಡಿ.ಎಸ್. ಭಗತ್ ಎಂಬುದು ಅವರು ನಿಭಾಯಿಸಿರುವ ಪಾತ್ರದ ಹೆಸರು.

‘ದೇಶಕ್ಕೆ ಸೈನಿಕರ ಅಗತ್ಯ ಎಷ್ಟು, ಸೈನಿಕರು ದೇಶವಾಸಿಗಳಿಗಾಗಿ ಮಾಡುವ ತ್ಯಾಗ ಯಾವ ಮಟ್ಟದ್ದು, ತ್ಯಾಗಿ ಸೈನಿಕರು ಪಡುವ ಕಷ್ಟಗಳು ಯಾವ ಬಗೆಯವು, ಅವರು ಅನುಭವಿಸುವ ಕಷ್ಟಗಳನ್ನು ತುಸುವಾದರೂ ನೀಗಿಸಲು ದೇಶದ ಪ್ರಜೆಗಳು ಮಾಡಬೇಕಿರುವ ಕೆಲಸ ಏನು’ ಎಂಬುದನ್ನು ಭಗತ್ ಪಾತ್ರ ಹೇಳುತ್ತದೆ.

ಸಿನಿಮಾ ಮೂಲಕ ದೇಶಪ್ರೇಮ ಹಾಗೂ ಸೈನಿಕರ ಸಂಕಟಗಳನ್ನು ಹೇಳಿರುವ ಮಾದರಿ ಕೆಲವರಿಗೆ ಇಷ್ಟವಾದರೆ, ಹಾರರ್ ಅನಿಸುವ ಸಿನಿಮಾವೊಂದನ್ನು ಥಟ್ಟನೆ ‘ದೇಶಪ್ರೇಮದ ಪಾಠ ಹೇಳುವ’ ಸಿನಿಮಾ ಆಗಿ ಪರಿವರ್ತಿಸಿಬಿಡುವಲ್ಲಿನ ಸೂಕ್ಷ್ಮತೆಯ ಕೊರತೆ ಕೆಲವರಿಗೆ ಇಷ್ಟವಾಗದೆಯೂ ಇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.