ADVERTISEMENT

3 ಗಂಟೆ, 30 ದಿನ, 30 ಸೆಕೆಂಡ್: ಭಿನ್ನ ಹೆಸರಿನ ಹೊಸ ಚಿತ್ರ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಕಾವ್ಯಾ ಶೆಟ್ಟಿ
ಕಾವ್ಯಾ ಶೆಟ್ಟಿ   

ಅದು ಬೆಂಗಳೂರಿನ ಪ್ರಸಿದ್ಧ ಚೌಡಯ್ಯ ಹಾಲ್‌. ಪಿಟೀಲಿನ ಆಕಾರದಲ್ಲಿ ಇರುವ ಆ ಕಟ್ಟಡದಲ್ಲಿ ಅಂದು ಆಯೋಜನೆ ಆಗಿದ್ದು ವಿಭಿನ್ನ ರೀತಿಯ ಹೆಸರು ಹೊಂದಿರುವ ಒಂದು ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಆ ಕಾರ್ಯಕ್ರಮಕ್ಕೆ ಬಂದವರು ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ಭಗವಾನ್, ಮಹರ್ಷಿ ಆನಂದ ಗುರೂಜಿ ಅವರಂತಹ ಪ್ರಮುಖರು.

ಆ ಸಿನಿಮಾದ ಹೆಸರು ‘3 ಗಂಟೆ 30 ದಿನ 30 ಸೆಕೆಂಡ್’! ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಸಭಾಂಗಣದ ಹೊರಗಡೆ ಚಳಿಗಾಳಿ ಬೀಸಲು ಆರಂಭವಾಗಿತ್ತು. ಹಾಡುಗಳ ಬೆಚ್ಚನೆಯ ಹೊದಿಕೆಯನ್ನು ವೀಕ್ಷಕರ ಮೇಲೆ ಹೊದಿಸಲು ಸಿನಿಮಾ ತಂಡ ಒಳಗಡೆ ಸಜ್ಜಾಗಿತ್ತು.

ಕಾರ್ಯಕ್ರಮದಲ್ಲಿ ಮೊದಲ ಮಾತು ಆಡಿದವರು ಮಹರ್ಷಿ ಆನಂದ ಗುರೂಜಿ. ‘ದೇಶದ ಗಡಿ ಕಾಯುವ ಯೋಧರ ಸಂಕಷ್ಟಗಳನ್ನು ತೋರಿಸುವ ಸಿನಿಮಾವನ್ನು ಕನ್ನಡದಲ್ಲಿ ಯಾರಾದರೂ ಮಾಡಬೇಕು. ಅಂತಹ ಒಂದು ಸಿನಿಮಾ ಮಾಡಲು ಮುಂದಾಗುವವರ ಜೊತೆ ನಾವಿರುತ್ತೇವೆ’ ಎಂದರು ಗುರೂಜಿ.

ADVERTISEMENT

ಈ ಸಿನಿಮಾ ನಿರ್ಮಾಣ ಮಾಡಿರುವವರು ಚಂದ್ರಶೇಖರ್ ಆರ್. ಪದ್ಮಶಾಲಿ. ಇವರ ಜೊತೆ 12 ಜನ ಸಹ ನಿರ್ಮಾಪಕರು ಇದ್ದಾರೆ. ಸಿನಿಮಾ ನಿರ್ದೇಶನ ಮಾಡಿದ್ದು ಜಿ.ಕೆ. ಮಧುಸೂದನ್. ಈ ಸಿನಿಮಾದ ಮಾರ್ಕೆಟಿಂಗ್‌ಗೆ ವಿನೂತನ ಮಾದರಿಯನ್ನು ಅನುಸರಿಸಲು ಚಿತ್ರತಂಡ ತೀರ್ಮಾನಿಸಿದೆಯಂತೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆಯಂತೆ.

ನಿರ್ದೇಶಕ ಮಧುಸೂದನ್ ಅವರು ಬೆಂಗಳೂರಿನ ಮಲ್ಲೇಶ್ವರ ಪರಿಸರದಲ್ಲಿ ಆಡಿ ಬೆಳೆದವರಂತೆ. ‘ನಾನು ಚಿಕ್ಕವನಾಗಿದ್ದಾಗ ಚೌಡಯ್ಯ ಹಾಲ್‌ಗೆ ಆಗಾಗ ಬರುತ್ತಿದ್ದೆ. ಆದರೆ, ನಾನು ನಿರ್ದೇಶಿಸುವ ಸಿನಿಮಾ ಹಾಡುಗಳನ್ನು ಇದೇ ವೇದಿಕೆಯಲ್ಲಿ ಬಿಡುಗಡೆ ಮಾಡುವ ದಿನವೊಂದು ಬರುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ’ ಎಂದರು ಮಧುಸೂದನ್.

ತಮ್ಮ ಸಿನಿಮಾಕ್ಕೆ ಹೀಗೊಂದು ಹೆಸರು ಇಟ್ಟಿದ್ದು ಏಕೆ ಎಂಬುದನ್ನೂ ಅವರು ತಿಳಿಸಿದರು. ‘ಎಲ್ಲರ ಬುದ್ಧಿಗೆ ಮೇವು ನೀಡುವ ಟ್ವಿಸ್ಟ್ ಇರಬೇಕು ಎಂಬ ಉದ್ದೇಶದಿಂದ ಈ ಶೀರ್ಷಿಕೆ ಇಟ್ಟಿದ್ದೇವೆ’ ಎಂದರು. ಈ ಸಿನಿಮಾದ ಕಥೆ ಹೊಸೆಯಲು ಅವರು ಒಂದು ವರ್ಷ ಸಮಯ ತೆಗೆದುಕೊಂಡರಂತೆ.

ಮೊದಲ ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಂಸಲೇಖ, ‘ಸಿನಿಮಾ ಶೀರ್ಷಿಕೆ ಚೆನ್ನಾಗಿದೆ’ ಎಂದು ಮೆಚ್ಚುಗೆಯ ಮಾತು ಆಡಿದರು. ಹಾಗೆಯೇ ಸಿನಿಮಾ ಹಾಡು ಬರೆದಿರುವ ಜಯಂತ ಕಾಯ್ಕಿಣಿ ಅವರ ಬಗ್ಗೆ ಹೊಗಳಿಕೆಯ ಮಾತು ಹೇಳಿದ ಹಂಸಲೇಖ, ‘ಸಾಹಿತ್ಯದ ಮಾಧುರ್ಯ ಕಾಪಾಡುವ ಕೆಲಸವನ್ನು ಕಾಯ್ಕಿಣಿ ಮಾಡುತ್ತಿದ್ದಾರೆ’ ಎಂದರು.

ಸಿನಿಮಾದ ನಾಯಕನ ಹೆಸರು ಅರುಣ್ ಗೌಡ. ನಾಯಕಿಯ ಪಾತ್ರದಲ್ಲಿ ಮಂಗಳೂರಿನ ಕಾವ್ಯಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.