ADVERTISEMENT

ಆ ಥಾಲಿ... ಬಡಿಸಿದ ಎಲೆ ಬೇರೆ

ವಿಶಾಖ ಎನ್.
Published 28 ಅಕ್ಟೋಬರ್ 2016, 11:30 IST
Last Updated 28 ಅಕ್ಟೋಬರ್ 2016, 11:30 IST
ಮುಕುಂದ ಮುರಾರಿ
ಮುಕುಂದ ಮುರಾರಿ   

ಚಿತ್ರ: ಮುಕುಂದ ಮುರಾರಿ
ನಿರ್ಮಾಣ: ಎನ್. ಕುಮಾರ್
ನಿರ್ದೇಶನ: ನಂದ ಕಿಶೋರ್
ತಾರಾಗಣ: ಉಪೇಂದ್ರ, ಸುದೀಪ್, ರವಿಶಂಕರ್, ಅವಿನಾಶ್, ನಿಖಿತಾ ತುಕ್ರಾಲ್

ನಾಲ್ಕು ವರ್ಷಗಳಾದವು; ‘ಒಎಂಜಿ – ಓ ಮೈ ಗಾಡ್’ ಹಿಂದಿ ಸಿನಿಮಾ ತೆರೆಕಂಡು. ಅದಾದ ಮೇಲೆ ತೆಲುಗಿನಲ್ಲಿ ‘ಗೋವಿಂದ ಗೋವಿಂದ’ ಬಂತು. ಎರಡೂ ಸಿನಿಮಾಗಳು ಗೆದ್ದವು. ಹದಿನೈದು ವರ್ಷ ಹಿಂದಕ್ಕೆ ಹೋದರೆ, ಆಸ್ಟ್ರೇಲಿಯನ್ ಚಿತ್ರ ‘ದಿ ಮ್ಯಾನ್ ಹೂ ಸ್ಯೂಡ್ ಗಾಡ್’ ನೆನಪಿಗೆ ಬರುತ್ತದೆ. ಅದೂ ಗೆದ್ದಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆ ಸಿನಿಮಾ ಆಧರಿಸಿಯೇ ಗುಜರಾತಿ ನಾಟಕ ‘ಕಾಂಜಿ ವಿರುದ್ಧ್ ಕಾಂಜಿ’ ರೂಪುಗೊಂಡಿತೆನ್ನಬೇಕು. ಹಾಸ್ಯ ಬೆರೆತ ಸಾಮಾಜಿಕ ಡ್ರಾಮಾ ಇದು. ಸಿನಿಮಾದಲ್ಲಿಯೂ ಇದೇ ರಸಗಳು ತುಳುಕಿದ ಕಾರಣಕ್ಕೆ ಗೆಲುವು ಸಂದಿತ್ತು.

ಪ್ರಕೃತಿ ವಿಕೋಪದಿಂದ ಅಂಗಡಿ ಕುಸಿದುಬೀಳುತ್ತದೆ. ಅದರ ಮಾಲೀಕ ವಿಮಾ ಮೊತ್ತ ಪಡೆಯಲು ಹೋಗುತ್ತಾನೆ. ‘ದಿ ಆಕ್ಟ್ ಆಫ್ ಗಾಡ್’ (ದೇವರ ಚಟುವಟಿಕೆ) ಕಾರಣದಿಂದ ಆಸ್ತಿಪಾಸ್ತಿ ಹಾಳಾದರೆ ವಿಮೆ ಸಂದಾಯವಾಗುವುದಿಲ್ಲ. ಅಂಗಡಿ ಕಳೆದುಕೊಂಡವನು ದೇವರ ವಿರುದ್ಧವೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಂಧೆಗಳನ್ನು ಒರೆಗೆಹಚ್ಚುತ್ತಾನೆ. ಇವೆಲ್ಲವೂ ತರ್ಕಬದ್ಧವಾಗಿ ನಡೆಯುತ್ತವಾದರೂ, ಆಧುನಿಕ ಪೋಷಾಕಿನಲ್ಲಿ ದೇವರೇ  ಪಾತ್ರವಾಗುವುದು ವ್ಯಂಗ್ಯ. ನಾಟಕದಲ್ಲಿ ಇದನ್ನು ತಂತ್ರ ಎಂದು ಪರಿಭಾವಿಸಬಹುದು. ಸಿನಿಮಾದಲ್ಲಿ ಈ ‘ಮ್ಯಾಜಿಕಲ್ ರಿಯಾಲಿಸಂ’, ಧರ್ಮ ಸಂಪ್ರದಾಯದ ಹಂಗಿಗೇ ಸಿನಿಮಾ ನಿರ್ದೇಶಕ ಒಳಪಡುವುದರ ಸೀಮಿತತೆಗೂ ಕನ್ನಡಿ ಹಿಡಿಯುತ್ತದೆ. ಹಿಂದಿಯಲ್ಲಿ ಉಮೇಶ್ ಶುಕ್ಲ ಸಿದ್ಧಪಡಿಸಿಕೊಟ್ಟ ಥಾಲಿಯನ್ನು ತೆಲುಗಿನಲ್ಲಿ ಬಡಿಸಿ ಆಗಿತ್ತು. ಕನ್ನಡದಲ್ಲಿ ಈಗ ನಂದಕಿಶೋರ್ ಅದನ್ನೇ ಉಣಬಡಿಸಿದ್ದಾರೆ; ಬಡಿಸಲು ಅವರು ಹಾಕಿರುವ ಬಾಳೆ ಎಲೆ ಮಾತ್ರ ಬೇರೆ. ಕೆಲವು ತಿನಿಸುಗಳಿಗೆ ಉಪ್ಪು ಜಾಸ್ತಿಯಾಗಿದೆ.

ADVERTISEMENT

ಮೂಲ ಚಿತ್ರದ ಜತೆಗೆ ಇದನ್ನು ಹೋಲಿಸಿ ನೋಡದೆ ವಿಧಿಯಿಲ್ಲ. ಅಲ್ಲಿ ಪರೇಶ್ ರಾವಲ್ ಮಾಡಿದ ಪಾತ್ರವನ್ನು ಇಲ್ಲಿ ಉಪೇಂದ್ರ ನಿರ್ವಹಿಸಿದ್ದಾರೆ. ಅದರಲ್ಲೇ ಹಾವಭಾವದ ಅಜಗಜಾಂತರ ಕಾಣುತ್ತದೆ. ಕೃಷ್ಣನಾಗಿ ಅಲ್ಲಿ ಅಕ್ಷಯ್ ಕುಮಾರ್ ‘ಬಿಲ್ಡಪ್’ ಇಲ್ಲದೆ ಕಾಣಿಸಿಕೊಂಡಿದ್ದರು. ಇಲ್ಲಿ ಸುದೀಪ್ ಆ ಜಾಗದಲ್ಲಿ ಹೆಚ್ಚೇ ಪ್ರಭಾವಳಿಗಳೊಂದಿಗೆ ಅಭಿನಯಿಸಿದ್ದಾರೆ. ಮೂಲ ಚಿತ್ರದಲ್ಲಿ ಕೋರ್ಟ್ ಸನ್ನಿವೇಶಗಳಿಗೆ ಮಹತ್ವ ಸಿಕ್ಕಿತ್ತು. ಕನ್ನಡದಲ್ಲಿ ಕಿರುತೆರೆ ಮಟ್ಟಿಗೆ ಟಿ.ಎನ್. ಸೀತಾರಾಂ ಆ ವೇದಿಕೆಯನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಂಡು ಜನಪ್ರಿಯರಾಗಿರುವುದರಿಂದಲೋ ಏನೋ, ನಂದಕಿಶೋರ್ ಚಿತ್ರಕಥೆಯನ್ನು ಬದಲಾಯಿಸಿ ವಾಗ್ವಾದಕ್ಕೇ ಹೆಚ್ಚಿನ ಒತ್ತು ನೀಡಿದ್ದಾರೆ.

ಮಾತೇ ಹೆಚ್ಚಾಗಿರುವ ಚಿತ್ರ ಸಾವಧಾನ ವಿಮುಖಿ. ಉಪೇಂದ್ರ ಇದ್ದಾರೆಂಬ ಕಾರಣಕ್ಕೆ ಓತಪ್ರೋತ ಸಂಭಾಷಣೆಗಳು, ಸುದೀಪ್ ಎಂದಮೇಲೆ ಪ್ರಭಾವಳಿಗಳ ಹಂಗಿಲ್ಲದಿದ್ದರೆ ಹೇಗೆ? ತೆಲುಗಿನಲ್ಲಿ ವೆಂಕಟೇಶ್–ಪವನ್ ಕಲ್ಯಾನ್ ‘ಕಾಂಬಿನೇಷನ್’ ಕೂಡ ಅವರ ಈ ಚಿಂತನೆಯ ಮೇಲೆ ಪರಿಣಾಮ ಬೀರಿರಬಹುದು.

ತಾಂತ್ರಿಕವಾಗಿ ಹೆಚ್ಚೇನೂ ಉಲ್ಲೇಖಾರ್ಹವಾದುದನ್ನು ಒಳಗೊಂಡಿರದ ಈ ಸಿನಿಮಾದ ಅಭಿನಯದಲ್ಲಿ ರವಿಶಂಕರ್ ಉಳಿದೆಲ್ಲರಿಗಿಂತ ಹೆಚ್ಚು ಗಮನ ಸೆಳೆಯುತ್ತಾರೆ. ನಿಖಿತಾ ಗೃಹಿಣಿ ಪಾತ್ರದಲ್ಲಿ ನಟಿಸಿರುವುದನ್ನು ಬದಲಾವಣೆ ಎನ್ನಬಹುದು.

ಹೊಸ ವಿನ್ಯಾಸದ ಸೂಟ್ ಹಾಕಿಕೊಂಡ ಸುದೀಪ್ ಕೊಳಲು ಊದತೊಡಗಿದಾಗ ಅದರ ಮೇಲೆ ಗ್ರಾಫಿಕ್ ಚಿಟ್ಟೆ ಬಂದು ಕೂರುತ್ತದೆ. ಇದನ್ನು ತಮಾಷೆಯಾಗಿ ಸ್ವೀಕರಿಸಬಹುದು. ಇಂಥ ಹಾಸ್ಯ ಸನ್ನಿವೇಶಗಳು ಚಿತ್ರದಲ್ಲಿ ಎಣಿಸುವಷ್ಟಿವೆ. ದೊಡ್ಡದೊಂದು ಭಾಷಣ ಕೇಳಿದಾಗ ಆಗುವಂಥದ್ದೇ ಪರಿಣಾಮ ಚಿತ್ರ ನೋಡಿದ ಮೇಲೂ ಆಗುತ್ತದಷ್ಟೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.