ADVERTISEMENT

ಫೆ.16ರಿಂದ 4 ಧಾರಾವಾಹಿಗಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2015, 19:30 IST
Last Updated 12 ಫೆಬ್ರುವರಿ 2015, 19:30 IST

ಹೆಣ್ಣಿನ ಕಥೆಗಳು...
ಹೆಣ್ಣಿನ ಅಂತರಾಳದ ಆತಂಕ, ಖುಷಿ, ಸಂತಸಗಳನ್ನು ಬಿಂಬಿಸುವ ‘ದೇವತೆ’ ಹಾಗೂ ‘ಸೌಭಾಗ್ಯವತಿ’ ಎಂಬ ಎರಡು ಹೊಸ ಧಾರಾವಾಹಿಗಳು ‘ಈ ಟಿವಿ’ ಕನ್ನಡ ವಾಹಿನಿಯಲ್ಲಿ ಫೆಬ್ರುವರಿ 16ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿವೆ. ಗೃಹಿಣಿಯರನ್ನು ಗಮನದಲ್ಲಿರಿಸಿಕೊಂಡು ಈ ಧಾರಾವಾಹಿಗಳನ್ನು ಹೆಣೆಯಲಾಗಿದೆ.

ದೇವತೆ: ಸತ್ಯಜಿತ್ ನಿರ್ಮಿಸುತ್ತಿರುವ ‘ದೇವತೆ’ ಮಧ್ಯಾಹ್ನ 1.30ಕ್ಕೆ ಪ್ರಸಾರವಾಗಲಿದೆ. ಶ್ರವಣದೋಷವಿರುವ ಶ್ರಾವ್ಯ ತನ್ನ ತಂಗಿ ಲಾಸ್ಯಳ ಜೀವನ ಹಸನುಗೊಳಿಸಲು ತನ್ನ ಸುಖವನ್ನು ತ್ಯಾಗಮಾಡಲು ಸಿದ್ಧಳಾಗುತ್ತಾಳೆ. ಒಟ್ಟಾರೆಯಾಗಿ ಹೇಳುವುದಾದರೆ ಇದು ಶ್ರಾವ್ಯಳ ಬದುಕಿನ ಕಥೆ. ಶ್ರಾವ್ಯ ಪಾತ್ರದಲ್ಲಿ ದಿವ್ಯಶ್ರೀ, ಲಾಸ್ಯಳ ಪಾತ್ರದಲ್ಲಿ ದಿವ್ಯಾ ಕಾರಂತ್ ನಟಿಸುತ್ತಿದ್ದು, ಎಸ್. ವೆಂಕಟೇಶ್ ಕೊಟ್ಟೂರ್ ಈ ಧಾರವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.  

ಸೌಭಾಗ್ಯವತಿ:

ಇದು- ಬುದ್ಧಿವಂತ ಹಳ್ಳಿ ಹುಡುಗಿ ಅರುಂಧತಿಯ ಕತೆ. ಪ್ರೀತಿಸಿದ ಹುಡುಗನೇ ತನ್ನ ಪ್ರೀತಿಯನ್ನು ಪ್ರಶ್ನಿಸುವ ಕಥಾವಸ್ತುವಿಗೆ ಒಂದಿಷ್ಟು ಹೊಸ ಸ್ಪರ್ಶನ ನೀಡಿ ‘ಸೌಭಾಗ್ಯವತಿ’ಯನ್ನಾಗಿಸಲಾಗಿದೆ. ರವಿಕಿರಣ್ ಈ ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಅರುಂಧತಿ ಪಾತ್ರದಲ್ಲಿ ತೇಜಸ್ವಿನಿ ಕಾಣಿಸಿಕೊಳ್ಳುತ್ತಿದ್ದು ಆ ಮೂಲಕ ಕಿರುತೆರೆಗೆ ಪರಿಚಿತರಾಗುತ್ತಿದ್ದಾರೆ. ಇದು ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ. ‘ಮಧ್ಯಾಹ್ನದ ಕಾರ್ಯಕ್ರಮಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನದ ಫಲ ಈ ಎರಡು ಧಾರಾವಾಹಿಗಳು. ಗೃಹಿಣಿಯರ ಮಧ್ಯಾಹ್ನಗಳನ್ನು ಹೆಚ್ಚು ಆನಂದಮಯಗೊಳಿಸುತ್ತಿದ್ದೇವೆ’ ಎಂದು ಧಾರಾವಾಹಿಗಳ ವಿವರ ನೀಡುತ್ತಾರೆ ವಾಹಿನಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌. 

ಗರಣಿಯ ಡಬ್ಬಲ್ ಸೀರಿಯಲ್...
ಕಿರುತೆರೆಯ ಸ್ಟಾರ್ ನಿರ್ದೇಶಕ ಎನಿಸಿದ ರವಿ ಆರ್.ಗರಣಿ ‘ಜೀ ಕನ್ನಡ’ ವಾಹಿನಿಗೆ ಎರಡು ಧಾರಾವಾಹಿಗಳನ್ನು ನಿರ್ದೇಶಿಸಿದ್ದು ಸೋಮವಾರ (ಫೆ.16)ದಿಂದ ಇವು ಪ್ರೇಕ್ಷಕನ ಎದುರು ಬರಲಿವೆ. ಸೋಮವಾರದಿಂದ ಶುಕ್ರವಾರದವರೆಗೆ  ‘ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ’ ರಾತ್ರಿ 8ರಿಂದ 8.30ರ ವರೆಗೆ ಮತ್ತು ‘ಒಂದೂರ್‌ನಲ್ಲಿ ರಾಜರಾಣಿ’ 8.30ರಿಂದ 9 ಗಂಟೆಯವರೆಗೆ ಪ್ರೇಕ್ಷಕರನ್ನು ರಂಜಿಸಲಿವೆ.

ಒಂದೂರ್‌ನಲ್ಲಿ ರಾಜರಾಣಿ:

ತಾಯಿ ಬದುಕಿದ್ದರೂ ತಂದೆ ಹೇಳಿದ ಸುಳ್ಳನ್ನು ನಂಬಿ, ಅಪ್ಪನಿಗೆ ಮರು ಮದುವೆ ಮಾಡಿಸಲು ಯತ್ನಿಸುವ ಹುಡುಗಿ ಇಶಾರಾಣಿಯ ಕಥೆ ಇದು. ನಾಯಕ ರಾಜ್‌ ದೇವ್ ಒಬ್ಬ ಶ್ರೀಮಂತ. ಹಲವು ವರ್ಷಗಳ ಹಿಂದೆ ದೂರವಾಗಿರುವ ಅತ್ತೆಯ ಗಂಡ ಹಾಗೂ ಮಗಳನ್ನು ರಾಜ್‌ದೇವ್ ಹುಡುಕುತ್ತಿರು ತ್ತಾನೆ. ಈ ಹುಡುಕಾಟದ ಸಂದರ್ಭದಲ್ಲಿ ಅವರಿಬ್ಬರ ಭೇಟಿ ಜಗಳದಿಂದಲೇ ಆಗುತ್ತದೆ.  ಇಶಾರಾಣಿಯ ತಂದೆ ಹಾಗೂ ರಾಜ್‌ದೇವನ ಅತ್ತೆ ಗಂಡ–ಹೆಂಡತಿ ಎಂಬ ಸತ್ಯ ಇಬ್ಬರಿಗೂ ತಿಳಿದಾಗ ಮುಂದೆ ನಡೆಯುವ ಸಂಬಂಧಗಳ ತೊಳಲಾಟ, ತಾಕಲಾಟದ ಕಥೆ ಧಾರಾವಾಹಿಯಲ್ಲಿದೆ. ಪ್ರಮುಖ ಪಾತ್ರದಲ್ಲಿ ಅಭಿ ಮತ್ತು ಪ್ರಿನ್ಸಿ ಇದ್ದಾರೆ. 

ADVERTISEMENT

ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ:

ಹಳ್ಳಿ ಸೊಗಡಿನ ಕಥೆ. ನಾಯಕ ರಂಗೇಗೌಡ ಅವಿದ್ಯಾವಂತ. ಆದರೆ ಊರಿನ ಮುಖ್ಯಸ್ಥ, ನ್ಯಾಯ ಹೇಳುವ ಧೀಮಂತ. ಮಲತಾಯಿಯನ್ನು ದೇವರೆಂದು ನಂಬಿರುವ ರಂಗೇಗೌಡನಿಗೆ ಆಕೆಯ ಮಾತು ಲಕ್ಷ್ಮಣ ರೇಖೆ. ಮಲತಾಯಿ ಗೋಮುಖ ವ್ಯಾಘ್ರದವಳು. ರಂಗೇಗೌಡನನ್ನು ಮಮತೆಯ ಮಡಿಲಲ್ಲಿ ಬಂಧಿಸಿಟ್ಟಿರುತ್ತಾಳೆ. ಕಥಾನಾಯಕಿ ಐಶ್ವರ್ಯಾ ನಗರದಲ್ಲಿ ಬೆಳೆದಿರುವ ಮಾರ್ಡನ್ ಹುಡುಗಿ.  ರಂಗೇಗೌಡ ಹಾಗೂ ಐಶ್ವರ್ಯಾ ಇಬ್ಬರಿಗೂ ಒಂದು ವಿಶೇಷ ಸಂದರ್ಭದಲ್ಲಿ ಪರಿಚಯವಾಗಿ ಮದುವೆಯಾಗಿರುತ್ತದೆ. ಐಶ್ವರ್ಯಾ ಹಳ್ಳಿ ಜೀವನಕ್ಕೆ ಒಗ್ಗಿಕೊಳ್ಳುವಳೆ? ರಂಗೇಗೌಡನ ಮಲತಾಯಿಯ ದುರುದ್ದೇಶವನ್ನು ಗಂಡನಿಗೆ ಅರ್ಥ ಮಾಡಿಸುವಲ್ಲಿ ಸಫಲಳಾಗುವಳೇ? ಎಂಬುದು ಕಥೆಯ ಎಳೆ. ರಂಗೇಗೌಡನಾಗಿ ರಘು ಮತ್ತು ಐಶ್ವರ್ಯಾ ಪಾತ್ರದಲ್ಲಿ ಕಾವ್ಯ ಗೌಡ  ನಟಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.