ADVERTISEMENT

ತಾರಾ ಹೋಟೆಲ್‌ನಲ್ಲಿ ಬೀದಿ ಸೆಟ್‌ ತಿನಿಸು!

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಟ್ವೆಲ್ತ್‌ ಮೈನ್‌ಗೆ ಬಂದಿಳಿದಾಗ ಗಡಿಯಾರದ ಮುಳ್ಳು ಎಂಟು ತೋರುತ್ತಿತ್ತು. ಪಕ್ಕಕ್ಕೆ ಕತ್ತು ಹೊರಳಿಸಿದಾಗ ಚೆನ್ನೈ ಎಕ್ಸ್‌ಪ್ರೆಸ್‌, ರೌಡಿ ರಾಥೋಡ್‌, ಧೂಮ್‌ ಹಿಂದಿ ಚಿತ್ರಗಳ ಪೋಸ್ಟರ್‌ಗಳು ಕಂಡವು. ಒಂದೆರೆಡು ಹೆಜ್ಜೆ ಮುಂದಿಟ್ಟಾಗ ಚಟ್‌ಪಟ್‌, ಚುರ್ರ್‌sss... ಎನ್ನುವ ಸದ್ದು ಕಿವಿಗೆ ಬಿತ್ತು. ಸದ್ದು ಬರುತ್ತಿದ್ದ ಕಡೆಗೆ ಕತ್ತು ತಿರುಗಿಸಿದಾಗ ಪಾವ್‌ ಭಾಜಿ, ವಡಾ ಪಾವ್‌, ಸಮೋಸಾ, ಫಿಶ್‌ ಟಿಕ್ಕಾ ಘಮಲು ಮೂಗಿಗೆ ಅಡರಿತು. ರುಚಿಯ ಪ್ರಚೋದನೆಗೆ ಒಳಗಾದ ಕಾಲುಗಳು ಆಗ ತಂತಾನೇ ಅತ್ತ ಹೆಜ್ಜೆ ಬೆಳೆಸಿದವು.

ಈರುಳ್ಳಿ ಮೂಟೆ, ತೆಂಗಿನಕಾಯಿಗಳನ್ನು ಮುಂದಿಟ್ಟುಕೊಂಡಿದ್ದ ತಳ್ಳುವ ಗಾಡಿಯೊಳಗಿಂದ ಪಾವ್‌ ಭಾಜಿ ಮತ್ತು ಕಚೋರಿ ಘಮ ಹೊಮ್ಮಿತು. ಅದನ್ನು ದಾಟಿ ನಡೆಯುತ್ತಿದ್ದಾಗ ನಮ್ಮದೇ ನಾಡಿನ ಮೈಸೂರು ಮಲ್ಲಿಗೆ ಇಡ್ಲಿ ಮತ್ತು ಪೇಪರ್‌ ಮಸಾಲ ದೋಸೆಯ ಪರಿಮಳ ಟೇಬಲ್‌ ಹತ್ತಿರಕ್ಕೆ ತಂದು ಕೂರಿಸಿತು.

ಕುಳಿತ ತಕ್ಷಣ ವೈಟರ್‌ ಒಬ್ಬ ಮಜ್ಜಿಗೆ ತಂದುಕೊಟ್ಟ. ಮಸಾಲ ಮಜ್ಜಿಗೆ ಕುಡಿದು ಮುಗಿಸುವಷ್ಟರಲ್ಲಿ ಪಾವ್‌ ಭಾಜಿ ಬಂತು. ಭಾಜಿ ಮೇಲೆ ನಿಂಬೆ ರಸ ಹಿಂಡಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಉದುರಿಸಿ ಪಾವ್‌ ಸವಿದಾಗ ದೆಹಲಿಯದ್ದೇ ರುಚಿ ಸಿಕ್ಕಿತು. ಹಳೆ ದಿಲ್ಲಿಯ ಜನಪ್ರಿಯ ತಿನಿಸುಗಳಾದ ಮೂಂಗ್‌ದಾಲ್‌ ಪಕೋಡಾ, ಚೋಲೆ ಬಟೂರಾ, ಸಮೋಸ ಮತ್ತು ಆಲೂಪುರಿಯ ಸವಿ ನಮಗೆ ರುಚಿಯ ಬ್ರಹ್ಮಾಂಡ ದರ್ಶನ ಮಾಡಿಸಿದವು. 

ಆನಂತರ, ಜುಹು ಪ್ರಾಂತ್ಯದ ವಡಾ ಪಾವ್‌, ಲಖನೌ ಫಿಶ್‌ ಟಿಕ್ಕಾ, ತಮಿಳು ನಾಡು ಶೈಲಿಯ ಮಸಾಲ ದೋಸೆ ರುಚಿ ನೋಡಿದ್ದಾಯಿತು. ಎಲ್ಲದರ ರುಚಿಯೂ ಸೊಗಸಾಗಿತ್ತು. ಇಲ್ಲಿ ನಡೆಯುತ್ತಿರುವ ಸ್ಟ್ರೀಟ್‌ಫುಡ್‌ ಫೆಸ್ಟಿವಲ್‌ನಲ್ಲಿ ದೇಶದ ಜನಪ್ರಿಯ ಚಾಟ್ಸ್‌ ಹಾಗೂ ತಿನಿಸುಗಳನ್ನು ಒಂದೆಡೆ ಸವಿಯುವ ಅವಕಾಶ ಇದೆ.

‘ಈ ಆಹಾರೋತ್ಸವದಲ್ಲಿ ದೆಹಲಿ, ಮುಂಬೈ, ರಾಜಸ್ತಾನ, ಲಖನೌ ಮೊದಲಾದ ನಗರಗಳ ಜನಪ್ರಿಯ ಬೀದಿಬದಿಯ ತಿನಿಸುಗಳನ್ನು ಪರಿಚಯಿಸಿದ್ದೇವೆ. ಅಲ್ಲಿಯದೇ ರುಚಿಯಲ್ಲಿ, ಅದೇ ಬಗೆಯ ವಾತಾವರಣದಲ್ಲಿ ಸ್ಟ್ರೀಟ್‌ಫುಡ್‌ ದೊರಕಿಸಿಕೊಡಬೇಕು ಎಂಬ ಆಶಯದಿಂದ ಇಡೀ ರೆಸ್ಟೋರೆಂಟ್‌ನ್ನು ಸ್ಟ್ರೀಟ್ ರೀತಿ ಸಿಂಗರಿಸಲಾಗಿದೆ.

ಜನಪ್ರಿಯ ಚಾಟ್ಸ್‌ ಜೊತೆಗೆ ವಿವಿಧ ಬಗೆಯ ಸಲಾಡ್‌ ಫ್ರೂಟ್‌ ಚಾಟ್ಸ್‌, ಕೋಳಿ ಬಿರಿಯಾನಿ, ಮದ್ರಾಸ್‌ ಮೀನು ಕರಿ, ಟೊಮೊಟೊ ಪಪ್ಪು ಖಾದ್ಯಗಳ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿದ್ದೇವೆ. ಈ ಆಹಾರೋತ್ಸವದ ವಿಶೇಷ ತಿನಿಸುಗಳೆಂದರೆ ಡೆಸರ್ಟ್ಸ್‌ ಮತ್ತು ಚಾಟ್ಸ್‌. ಡೆಸರ್ಟ್‌ ವಿಭಾಗದಲ್ಲಿ ಗುಲಾಬ್‌ ಜಾಮೂನ್‌, ಚೀಸ್‌ ಕೇಕ್‌, ಲಡ್ಡೂವಿನ ರುಚಿಯನ್ನು ತಪ್ಪದೇ ನೋಡಬೇಕು’ ಎನ್ನುತ್ತಾರೆ ಮುಖ್ಯ ಬಾಣಸಿಗ ವಿಜಯ್‌ ಡೇವಿಡ್‌. 

ಸ್ಟ್ರೀಟ್‌ಫುಡ್‌ಗಳನ್ನು ಸ್ಟಾರ್‌ ಹೋಟೆಲ್‌ನಲ್ಲಿ ಕುಳಿತು ಸವಿಯುವಾಗಿನ ಗಮ್ಮತ್ತೇ ಬೇರೆ. ಕುಟುಂಬದವರೊಂದಿಗೆ ಅಥವಾ ಗೆಳೆಯ/ಗೆಳತಿಯರೊಂದಿಗೆ ಹಳೆ ದಿಲ್ಲಿಯ ಚಾಟ್ಸ್‌ ಸವಿದು ಮನೆಗೆ ಹಿಂತಿರುಗುವಾಗ ಅವುಗಳ ರುಚಿಯ ಜೊತೆಗೆ ದಿಲ್ಲಿ ಓಣಿಯ ನೆನಪುಗಳು ನಿಮ್ಮ ಜೊತೆಯಾಗುತ್ತವೆ. 

ಸ್ಥಳ: ಟ್ವೆಲ್ತ್‌ ಮೈನ್‌ ರೆಸ್ಟೋರೆಂಟ್‌, ಗ್ರ್ಯಾಂಡ್‌ ಮರ್ಕ್ಯುರಿ, 3ನೇ ಬ್ಲಾಕ್‌, ಕೋರಮಂಗಲ. ಟೇಬಲ್‌ ಕಾಯ್ದಿರಿಸಲು: 080 4512 1212.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.