ADVERTISEMENT

ನನ್ನತ್ತಿಗೆಯ ಎದೆಯಾಳ...

ಕ್ಯಾನ್ಸರ್‌ ಗೆದ್ದ ಕತೆ

ಎಸ್.ವಿಜಯ ಗುರುರಾಜ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ನನ್ನತ್ತಿಗೆಯ ಎದೆಯಾಳ...
ನನ್ನತ್ತಿಗೆಯ ಎದೆಯಾಳ...   

ತವರು ಮನೆಯಲ್ಲಿ ಬಾಣಂತನ ಮುಗಿಸಿ  ಮುದ್ದಾದ ಐದು ತಿಂಗಳ ಮಗುವಿನೊಂದಿಗೆ  ಅತ್ತೆ ಮನೆಗೆ ಅಮ್ಮ ಅಪ್ಪನೊಡನೆ ಬಂದೆ. ಮರುದಿನ  ಅಮ್ಮ , ಅಪ್ಪ ಊಟ ಮುಗಿಸಿ ತಮ್ಮ ಮನೆಗೆ ಹೊರಟುಹೋದರು.

ಆದರೆ ಮನೆಯಲ್ಲಿ ಒಂದು ರೀತಿಯ ಮೌನವಿತ್ತು.  ಎಲ್ಲರೂ ದುಗುಡದಲ್ಲಿದ್ದರು. ಯಾರಲ್ಲಿ ಕೇಳುವುದು? ಎಂಬ ಚಿಂತೆ ಕಾಡುತ್ತಿತ್ತು.ಮಗುವನ್ನು ಮಲಗಿಸಿ ಅತ್ತೆಯವರ ಬಳಿ ‘ಅತ್ತೇ, ಅತ್ತಿಗೆ ಎಲ್ಲಿ ತೌರಿಗೆ ಹೋಗಿದ್ದಾರೆಯೇ?’ ಎಂದೆ. ನಮ್ಮ ಯಜಮಾನರ ಅಣ್ಣನ ಹೆಂಡತಿಯನ್ನು ನಮ್ಮವರು ಅತ್ತಿಗೆ ಎಂದು ಕರೆಯುತ್ತಿದ್ದಂತೆ ನಾನೂ ಸಹ ಅವರನ್ನು ಅತ್ತಿಗೆ ಎನ್ನುತ್ತಿದ್ದೆ. ಅಷ್ಟೇ ಸಾಕಾಗಿತ್ತು ಅತ್ತೆಯವರು ದುಃಖದಿಂದ ಉಮ್ಮಳಿಸಹತ್ತಿದ್ದರು. ‘ಅವಳಿಗೆ ಎದೆಯ ಕ್ಯಾನ್ಸರ್ ಆಗಿದೆಯಂತೆ ಅದಕ್ಕೆ ಟೆಸ್ಟ್ ಮಾಡಿಸಲು ಆಸ್ಪತ್ರೆಯಲ್ಲಿದ್ದಾಳೆ’ ಎಂದು ಹೇಳಿದಾಗ ಪರಿಸ್ಥಿತಿ ಅರಿವಾಯ್ತು.

ಕೆಲ ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಬಂದ ಅತ್ತಿಗೆಯ ಮುಖದಲ್ಲಿ ಆಯಾಸ ಕಾಣಿಸುತ್ತಿದ್ದರೂ ನಗು ಮುಖದಿಂದಲೇ ‘ಆಸ್ಪತ್ರೆಯಲ್ಲಿ  ಎಲ್ಲಾ ಪರೀಕ್ಷೆಗಳನ್ನೂ ಮಾಡಿದ್ದಾರೆ ಇನ್ನೊಂದು ವಾರಕ್ಕೆ ರಿಪೋರ್ಟಗಳೆಲ್ಲ ಬರುತ್ತೆ. ನನಗೆ ಏನೂ ಆಗಿಲ್ಲಪ್ಪ ಸುಮ್ಮನೆ ನೀವೆಲ್ಲ ಅತಂಕ ಪಡುತ್ತಿರುವಿರಿ... ನೋಡು ನನ್ನ ತಲೆ ದಿಂಬಿನಡಿಯಲ್ಲಿ ರಾಮ ರಕ್ಷಾ ಸ್ತ್ರೋತ್ರವಿದೆ. ಏನೂ ಆಗುವುದಿಲ್ಲ’ ಎಂದು ನಮ್ಮಲ್ಲಿ ಧೈರ್ಯ ತುಂಬಿದರು   ಏನೂ ಆಗಲಾರದು ಎಂದು ನಿರಾಳವಾದೆವು. ಮಿಡಲ್ ಸ್ಕೂಲ್ನಲ್ಲಿ ನಲ್ಲಿ ಓದುತ್ತಿದ್ದ ಎರಡು ಗಂಡು ಮಕ್ಕಳು ಅಮ್ಮನ ಬಳಿಯಲ್ಲಿ ಕುಳಿತು ಎಂದಿನಂತೆ ಓದಿಕೊಳ್ಳುತ್ತಿದ್ದರು. ಹೆಣ್ಣು ಮಗಳು ಮೂರನೆ ಕ್ಲಾಸಿನಲ್ಲಿದ್ದಳು. ಆದರೆ ಭಾವ ಮಾತ್ರ ಗಂಭೀರವಾಗಿರುತ್ತಿದ್ದರು.

ಆಸ್ಪತ್ರೆಯ ರಿಪೋರ್ಟಿಗೆ ಹೃದಯವಿರಲಿಲ್ಲ. ಅದು ‘ಬ್ರೆಸ್ಟ್ ಕ್ಯಾನ್ಸರ್’ ಎಂದು ನಿಷ್ಕರುಣೆಯಿಂದ ಹೇಳಿತ್ತು. ಒಂದು ಸ್ತನವನ್ನು ತೆಗೆಯಲೇ ಬೇಕೆಂದು ಅದರಲ್ಲಿ ಬರೆದಿತ್ತು.

ಅತ್ತೆಯವರು ಚಿಕ್ಕ ಪುಟ್ಟ ಮಕ್ಕಳ ತಾಯಿಗೇನಾಗುವುದೋ ಎಂದು ಅಳುತ್ತಿದ್ದರು. ನಾವೆಲ್ಲ ‘ಏನೂ ಆಗುವುದಿಲ್ಲ ಒಂದು ಸಣ್ಣ ಆಪರೇಶನ್ ಅಷ್ಟೇ’ ಎಂದು ಹೇಳಿ ಆಸ್ಪತ್ರೆಗೆ ಹೋದೆವು. ಅಲ್ಲಿ ಅತ್ತಿಗೆಯ ಮಾತೃತ್ವದ ದ್ಯೋತಕವಾದ ಮೊಲೆಯೊಂದನ್ನು ತೆಗೆಯಲಾಯಿತು. ಎಲ್ಲಾ  ಆದನಂತರ ಮನೆಗೆ ಬಂದು ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳಲು ತೊಡಗಿದರು. ಆಗಾಗ ಕೀಮೋ ಥೆರಪಿ, ರೇಡಿಯೊ ಥೆರಪಿ, ಇನ್ನೂ ಏನೇನೊ ಎಂದು ಭಾವನೊಟ್ಟಿಗೆ ಹೋಗಿಬರುತ್ತಿದ್ದರು. ಅಂದು ಬಹಳ ಸುಸ್ತಾದಂತೆ ಕಂಡರೂ ಮರುದಿನಕ್ಕೆಲ್ಲಾ ನಗುನಗುತ್ತಾ ಕೆಲಸಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು  ಸಮಚಿತ್ತದಿಂದ ಇರುತ್ತಿದ್ದರು. ಮಕ್ಕಳಿಗೆ ಅದರ ಬಿಸಿಯೇ ತಟ್ಟದಂತೆ ಬೆಳೆಯುತ್ತಿದ್ದರು.

ಆಶ್ಚರ್ಯವೆಂದರೆ ಅತ್ತಿಗೆಯ ಕೂದಲು ಮೂರು ಮಕ್ಕಳಾಗಿದ್ದರೂ ಉದುರದೆ ದಪ್ಪ ಜಡೆಯಿತ್ತು. ಸಮಾನ್ಯವಾಗಿ ಕ್ಯಾನ್ಸರ್ ಆದನಂತರ ಕೂದಲು ಉದುರಿ ತಲೆ ಬೋಳಾಗಿ ಅನೇಕರು ವಿಗ್ ಧರಿಸುತ್ತಾರಲ್ಲವೆ ಆದರೆ ಅವರ ಮನೋಧೈರ್ಯಕ್ಕೆ ಹೆದರಿ ಮಾರುದ್ದ ಜಡೆಯು ಅವರ ಹಿಂಭಾಗದಲ್ಲಿ ಓಲಾಡುತ್ತಿತ್ತು. ಅತ್ತಿಗೆಯ ಮುಖದಲ್ಲಿ ಮೊದಲಿನ ಕಳೆ ಕಾಣುತ್ತಿತ್ತು. ಅವರ ಮೂಗಿನ ವಜ್ರದ ನತ್ತು ಫಳ್ ಎಂದು ಹೊಳೆಯುತ್ತಿತ್ತು. ಮದುವೆ, ಮುಂಜಿ ಹೀಗೆ ಎಲ್ಲಾ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಒಂದು ದಿನ ಅವರು ಬಟ್ಟೆ ಧರಿಸುತ್ತಿದ್ದಾಗ ನಾನು ಒಳಗೆ ನುಗ್ಗಿದ್ದೆ. ಅವರು ಸಾವಕಾಶವಾಗಿ ಬ್ಲೌಸ್ ಹಾಕಿಕೊಳ್ಳುತ್ತಿದ್ದರು. ಒಂದು ಬಿಳಿಯ ಬಟ್ಟೆಯ ಉಂಡೆಯನ್ನು ಎದೆಯ ಖಾಲಿಯಾಗಿದ್ದ ಮೊಲೆಯ ಭಾಗಕ್ಕಿಟ್ಟು ಬ್ರಾ ಧರಿಸಿಕೊಂಡು ಬ್ಲೌಸ್ ತೊಟ್ಟು ಸೀರೆಯುಟ್ಟಾಗ ಮೊದಲಿನಂತೆಯೇ ಎದೆಯ ಆಕಾರವಿದ್ದುದನ್ನು ಕಂಡು ಅವಕ್ಕಾದೆ.

ಅದರ ಬಗ್ಗೆ ನಾನು ಯೋಚಿಸಿರಲೇ ಇಲ್ಲ. ಆಗ ಅತ್ತಿಗೆ ನನ್ನನ್ನು ನೋಡಿ ನಗುತ್ತಾ ‘ಇದೆಲ್ಲಾ ಇದ್ದರೆ ಚಂದ ಅಲ್ಲವೇನೆ ಎಂದು ಬಾ ಹೋಗೋಣ’ ಎಂದಾಗ ಎಚ್ಚೆತ್ತಿದ್ದೆ. ದಾರಿಯುದ್ದಕ್ಕೂ ಹೆಣ್ಣಿನ ಸೌಂದರ್ಯದ ಅಂಗವಾದ ಒಂದಂಶವನ್ನು ಕಳೆದುಕೊಂಡಿದ್ದರೂ ಬದುಕನ್ನು ಹೇಗೆ ಸಕಾರಾತ್ಮಕವಾಗಿ ಕಳೆಯುತ್ತಿದ್ದಾರಲ್ಲ ಎನಿಸಿ ಅವರ ಆತ್ಮ ಸ್ಥೈರ್ಯಕ್ಕೆ ಹೆಮ್ಮೆ ಎನಿಸಿತು.

ನಂತರದ ದಿನಗಳಲ್ಲಿ  ಮಕ್ಕಳು ದೊಡ್ಡವರಾದರು ಮಗನಿಗೆ ಮದುವೆಯಾಯಿತು.  ಅತ್ತಿಗೆಯನ್ನು ಕ್ಯಾನ್ಸರ್ ರಾಕ್ಷಸನು ನೇರವಾಗಿ ಅವರ ಗರ್ಭಕೋಶವನ್ನೇ ಹೊಕ್ಕಿದ್ದ. ಎಲ್ಲವೂ ಅಭ್ಯಾಸವಾಗಿದ್ದ ಅತ್ತಿಗೆ  ಎಂದಿನಂತೆ ಆಸ್ಪತ್ರಿಗೆ ದಾಖಲಾದರು. ಈ ಬಾರಿ ಇಡಿಯಾಗಿ ಮಾತೃತ್ವದ ಸಂಕೇತವನ್ನು ಕಳೆದುಕೊಂಡಿದ್ದರು. ಆದರೆ ಮೊದಲಿಗಿಂತಲೂ ಬೇಗ ಚೇತರಿಸಿಕೊಂಡರು.


ಕಾಲೇಜಿನಲ್ಲಿ ಓದುತ್ತಿದ್ದ ಮಗಳಿಗೆ ಒಳ್ಳೆಯ ಗಂಡನ್ನು ಹುಡುಕಿ ತಾನೇ ಎಲ್ಲಾ ಮದುವೆಕಾರ್ಯಗಳನ್ನೂ ನಿರ್ವಹಿಸಿದರಲ್ಲದೆ  ಅತ್ತೆಯ ಸಹಾಯದೊಡನೆ ಮಗಳ ಬಾಣಂತನವನ್ನೂ ಮಾಡಿ ತನ್ನ ಕರ್ತವ್ಯಗಳಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿಗೆ ಸವಾಲೆಸೆಯುತ್ತಿದ್ದರು.  ಭಾವನ ನಿವೃತ್ತಿಯ ನಂತರ ಸ್ವಂತ ಮನೆ ಕಟ್ಟಿ  ಗೃಹಪ್ರವೇಶವೂ ನಡೆದುಹೋಗಿತ್ತು. ಅತ್ತಿಗೆಯ ಮನೋಬಲದ ಮುಂದೆ ವರ್ಷಗಳು ಉರುಳಿಹೋದವು.


ಕೊನೆಯ ಮಗ ಇಂಜಿನಿಯರ್ ಓದುತ್ತಿದ್ದು ಅವನು ಮುಂದಿನ ವಿಧ್ಯಾಭ್ಯಾಸಕ್ಕಾಗಿ  ವಿದೇಶಕ್ಕೆ ಹೊರಟಾಗ ತಾಯಿ ಮಗನ ಮೌನದಲ್ಲಿ ಅಪಾರ ಮಾತಿತ್ತು.
ಈಗ ಗಂಡ ಹೆಂಡತಿ ಜೀವನದ ಕರ್ತವ್ಯಗಳನ್ನು ಮುಗಿಸಿ ನಿರಾಳರಾಗಿದ್ದರು. ಆದರೆ  ಜವರಾಯ ಕ್ಯಾನ್ಸರ್ ರೂಪದಲ್ಲಿ ನೇರವಾಗಿ ಅವರ ಶ್ವಾಸಕೋಶವನ್ನೇ ಹೊಕ್ಕಿದ್ದ. ಸದ್ದಿಲ್ಲದಂತೆ ಅವರನ್ನು ಕರೆದೊಯ್ದಿದ್ದ. ದಶಕಗಳಷ್ಟು ಕಾಲ ಅದನ್ನು ಎದುರಿಸುತ್ತಾ ಬದುಕು ನಡೆಸಿದ್ದು ನಮಗೆಲ್ಲಾ ಏನೇ ಕಷ್ಟ ಬಂದರೂ ಎದುರಿಸುವ ಪಾಠ ಕಲಿಸಿದೆ.
 
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.