ADVERTISEMENT

ಬಿಳಿ ಸ್ರಾವದ ಹಿಂದಿದೆ ಗರ್ಭದ ವಿಶ್ಲೇಷಣೆ

ಡಾ.ಬೀನಾ ವಾಸನ್
Published 18 ಆಗಸ್ಟ್ 2017, 19:30 IST
Last Updated 18 ಆಗಸ್ಟ್ 2017, 19:30 IST
ಬಿಳಿ ಸ್ರಾವದ ಹಿಂದಿದೆ ಗರ್ಭದ ವಿಶ್ಲೇಷಣೆ
ಬಿಳಿ ಸ್ರಾವದ ಹಿಂದಿದೆ ಗರ್ಭದ ವಿಶ್ಲೇಷಣೆ   

ಮಹಿಳೆಯರ ಸಂತಾನೋತ್ಪತ್ತಿಯ ದೈಹಿಕ ವ್ಯವಸ್ಥೆಯಲ್ಲಿ ಬಿಳಿಸ್ರಾವ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಯೋನಿ ಹಾಗೂ ಗರ್ಭಕಂಠದ ಗ್ರಂಥಿಗಳಿಂದ ಉಂಟಾಗುವ ಈ ದ್ರವವು ಸತ್ತಕೋಶಗಳನ್ನು ಹಾಗೂ ಬ್ಯಾಕ್ಟೀರಿಯಾಗಳನ್ನು ಹೊರಗೆ ಹಾಕುವ ವಿಧಾನವೂ ಹೌದು. ಈ ಸ್ರವಿಸುವಿಕೆ ಯೋನಿ ಶುದ್ಧವಾಗಿರಲು ಹಾಗೂ ಸೋಂಕನ್ನು ತಡೆಯುವಲ್ಲಿ ಸಹಾಯಕ.

ಆದರೆ ಹಲವು ಸಂದರ್ಭಗಳಲ್ಲಿ ಈ ಬಿಳಿ ದ್ರವದ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಪ್ರಮಾಣ, ವಾಸನೆ ಹಾಗೂ ಬಣ್ಣದಲ್ಲೂ ವ್ಯತ್ಯಾಸವಾಗಬಹುದು. ಇದು ಕೆಲವೊಮ್ಮೆ ಋತುಚಕ್ರದ ಸಮಯದ ಮೇಲೆ ಅವಲಂಬಿತವಾಗಿರುತ್ತದೆ. ಅಂಡೋತ್ಪತ್ತಿ ಸಮಯದಲ್ಲಿ, ಸ್ತನ್ಯಪಾನ ಮಾಡುತ್ತಿದ್ದರೆ ಅಥವಾ ಲೈಂಗಿಕ ಪ್ರಚೋದನೆ ಸಮಯದಲ್ಲಿ ಹೆಚ್ಚು ಸ್ರಾವವಾಗುತ್ತದೆ. ಗರ್ಭ ಧರಿಸಿದ ಸಮಯದಲ್ಲಿ ವಾಸನೆಯು ಬೇರೆ ರೀತಿಯಿರುತ್ತದೆ. ಇವೆಲ್ಲವುಗಳ ಹೊರತಾಗಿ ವೈಯಕ್ತಿಕ ನೈರ್ಮಲ್ಯದ ಕುರಿತು ನಿರ್ಲಕ್ಷ್ಯ ವಹಿಸಿದ್ದರೆ ಹೀಗೆ ವ್ಯತ್ಯಾಸ ಕಂಡುಬರಬಹುದು.

ಈ ರೀತಿಯ ಬದಲಾವಣೆಗಳು ಆತಂಕ ತರುವಂಥದ್ದೇನೂ ಅಲ್ಲ. ಆದರೆ ಬಣ್ಣ, ವಾಸನೆ ಅಥವಾ ಸ್ರವಿಸುವಿಕೆಯ ಸಮಯ, ಪ್ರಮಾಣದಲ್ಲಿ ಗಮನಾರ್ಹವಾಗಿ ಅಸಹಜತೆ ಕಂಡುಬಂದರೆ, ಅದರಲ್ಲೂ ಈ ಎಲ್ಲಾ ಲಕ್ಷಣಗಳೊಂದಿಗೆ ಯೋನಿಯ ಉರಿಯೂತವೂ ಅನುಭವಕ್ಕೆ ಬಂದರೆ ಇದು ಗಮನಿಸಲೇಬೇಕಾದ ವಿಷಯವೂ ಹೌದೆನ್ನುವುದರಲ್ಲಿ ಸಂಶಯವಿಲ್ಲ. ಯೋನಿಯ ಸೋಂಕು ಅಥವಾ ಇನ್ನಿತರ ಸೋಂಕಿನ ಸೂಚಕವೂ ಆಗಿರಬಹುದು.

ADVERTISEMENT

ಅಸಹಜ ಸ್ರಾವಕ್ಕೆ ಕಾರಣ ಏನಿರಬಹುದು?

ಬ್ಯಾಕ್ಟೀರಿಯಾಗಳಲ್ಲಿ ಅಸಮತೋಲನ ಉಂಟಾದರೆ ಅದು ವಾಸನೆ, ಬಣ್ಣ ಅಥವಾ ಸ್ರಾವದ ಸಾಂದ್ರತೆ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಅಸಮತೋಲನ ಉಂಟಾಗಲು ಇರುವ ಕೆಲವು ಅಂಶಗಳು ಇವಾಗಿರಬಹುದು...

* ಆ್ಯಂಟಿಬಯಾಟಿಕ್ ಅಥವಾ ಸ್ಟಿರಾಯಿಡ್‍ಗಳ ಬಳಕೆ.

* ಗರ್ಭ ಧರಿಸಿದವರಲ್ಲಿ ಅಥವಾ ಬಹು ಸಂಗಾತಿಗಳೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡವರಲ್ಲಿ ಬ್ಯಾಕ್ಟೀರಿಯಾ ಸೋಂಕು ಸಾಮಾನ್ಯವಾಗಿರುತ್ತದೆ.

* ಗರ್ಭ ನಿಯಂತ್ರಕ ಮಾತ್ರೆಗಳ ಸೇವನೆ.

* ಗರ್ಭ ಕೊರಳಿನ ಕ್ಯಾನ್ಸರ್.

* ಲೈಂಗಿಕವಾಗಿ ಹರಡುವ ಸೋಂಕು – ಗೊನೇರಿಯಾ.

* ಮಧುಮೇಹ.

* ಡೌಶ್‌(ಜನನಾಂಗ ಶುದ್ಧೀಕರಣದ ಉತ್ಪನ್ನ) ಕೆಲವು ಸೋಪು, ಲೋಷನ್‌ಅಥವಾ ಬಬಲ್‌ಬಾತ್‌ನಿಂದ.

* ಶಸ್ತ್ರಚಿಕಿತ್ಸೆ ನಂತರ ಸಂಭವಿಸುವ ಪೆಲ್ವಿಕ್ ಸೋಂಕು.

* ಪೆಲ್ವಿಕ್ ಇನ್‌ಫ್ಲಮೇಟರಿ ಡಿಸೀಸ್ – ಉರಿಯೂತ.

* ಟ್ರೈಕೋಮೋನಿಯಾಸಿಸ್ – ಅಸುರಕ್ಷಿತ ಲೈಂಗಿಕತೆಯಿಂದ ಉಂಟಾಗುವ ಸೋಂಕು.

* ಋತುಸ್ರಾವದ ಸಮಯದಲ್ಲಿ ಯೋನಿ ಒಣಗಿದ ಅನುಭವ.

* ಯೋನಿನಾಳದ ಉರಿಯೂತ.

* ಯೀಸ್ಟ್ ಸೋಂಕು (ಕಿಣ್ವದ ಸೋಂಕು).

ಅಸಹಜ ಸ್ರಾವಕ್ಕೆ ವೈದ್ಯರ ಪರೀಕ್ಷೆಯೇನು?

ಮೊದಲು ವೈದ್ಯರು ನಿಮ್ಮ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕುತ್ತಾರೆ. ಈ ಸಮಸ್ಯೆಯ ಲಕ್ಷಣಗಳನ್ನು ತಿಳಿದುಕೊಳ್ಳುತ್ತಾರೆ.

ಯಾವಾಗ ಈ ರೀತಿ ಸ್ರಾವದಲ್ಲಿ ಅಸಹಜತೆ ಕಂಡುಬಂತು, ಸ್ರಾವದ ಬಣ್ಣ, ವಾಸನೆ, ತುರಿಕೆ, ನೋವು, ಉರಿಯೂತದ ಕಾರಣ, ಅಸುರಕ್ಷಿತ ಲೈಂಗಿಕತೆ ಇವೆಲ್ಲದರ ಆಧಾರದ ಮೇಲೆ ಸಮಸ್ಯೆಯನ್ನು ಗುರುತಿಸುತ್ತಾರೆ.

ವೈದ್ಯರು ಸ್ರಾವದ ಸ್ಯಾಂಪಲ್ ತೆಗೆದುಕೊಳ್ಳಬಹುದು ಹಾಗೂ ಗರ್ಭಕಂಠದ ಕ್ಯಾನ್ಸರ್ ವಿಶ್ಲೇಷಿಸುವ ‘ಪ್ಯಾಪ್ ಟೆಸ್ಟ್’ ನಡೆಸಬಹುದು.

ಸ್ರಾವಕ್ಕೆ ಚಿಕಿತ್ಸೆ ಏನು?

ಸಮಸ್ಯೆಗೆ ಕಾರಣ ಏನು ಎಂಬುದರ ಮೇಲೆ ಯಾವ ಚಿಕಿತ್ಸೆ ನೀಡುತ್ತಾರೆ ಎಂಬುದೂ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಫಂಗಸ್ ಸೋಂಕು ಉಂಟಾಗಿದ್ದರೆ, ಆ್ಯಂಟಿಫಂಗಸ್ ಔಷಧಿಗಳನ್ನು ನೀಡಬಹುದು. ಬ್ಯಾಕ್ಟೀರಿಯಾ ಸೋಂಕಾಗಿದ್ದರೆ, ಆ್ಯಂಟಿಬಯಾಟಿಕ್ ಮಾತ್ರೆ ಅಥವಾ ಕ್ರೀಂಗಳನ್ನು ನೀಡಬಹುದು. ಟ್ರೈಕೋಮೋನಿಯಾಸಿಸ್ ಆಗಿದ್ದರೆ, ಔಷಧೋಪಚಾರ ಮಾಡಬಹುದು.

ಸೋಂಕನ್ನು ತಡೆದು, ಅಸಹಜ ಸ್ರಾವವನ್ನು ನಿಲ್ಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

* ಗಡುಸಲ್ಲದ ಸೋಪು ಹಾಗೂ ಬೆಚ್ಚನೆ ನೀರಿನಿಂದ ಆಗಾಗ್ಗೆ ಜನನಾಂಗವನ್ನು ಶುದ್ಧೀಕರಿಸಿಕೊಳ್ಳುವುದು.

* ಸುವಾಸಿತ ಸೋಪುಗಳನ್ನು, ಇನ್ನಿತರ ಉತ್ಪನ್ನಗಳನ್ನು ಬಳಸದೇ ಇದ್ದರೆ ಒಳ್ಳೆಯದು. ಸ್ಪ್ರೇ ಹಾಗೂ ಬಬಲ್ ಬಾತ್‌ಗಳಿಂದ ದೂರವುಳಿಯುವುದು ಉತ್ತಮ.

* ಬಾತ್‌ರೂಂ ಶುಚಿಯಾಗಿರುವಂತೆ ನೋಡಿಕೊಳ್ಳುವುದು.

* ಹತ್ತಿಯ ಒಳ ಉಡುಪುಗಳನ್ನು ಬಳಸುವುದು ಹಾಗೂ ಅತಿ ಬಿಗಿಯಾದ ಉಡುಪುಗಳನ್ನು ತೊಡದಿರುವುದು.
(ಮುಂದುವರೆಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.