ADVERTISEMENT

ಉಪವಾಸ ಎಂಬ ಉಚಿತ ಚಿಕಿತ್ಸೆ

ಡಾ.ರೇವತಿ.ಹುದ್ದಾರ ದೇಸಾಯಿ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST
ಉಪವಾಸ ಎಂಬ ಉಚಿತ ಚಿಕಿತ್ಸೆ
ಉಪವಾಸ ಎಂಬ ಉಚಿತ ಚಿಕಿತ್ಸೆ   

ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದದಲ್ಲಿ ಋತುಗಳಿಗನುಸಾರವಾಗಿ ಆಹಾರ-ವಿಹಾರಗಳನ್ನು ವಿವರಿಸಲಾಗಿದೆ. ಒಂದು ವರ್ಷದಲ್ಲಿ ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರದ, ಹೇಮಂತ - ಎಂದು ಆರು ಋತುಗಳಿದ್ದು, ಒಂದು ಋತುವಿನಲ್ಲಿ ಎರಡು ಮಾಸಗಳಂತೆ ಒಟ್ಟು ಹನ್ನೆರಡು ಮಾಸಗಳಿವೆ. ಮಹಾಶಿವರಾತ್ರಿಯು ಶಿಶಿರ ಋತುವಿನಲ್ಲಿರುವ ಒಂದು ಆಚರಣೆಯಾಗಿದೆ. ಈ ಋತುವಿನಿಂದ, ಉತ್ತರಾಯಣ, ಆದಾನ ಕಾಲ ಆರಂಭವಾಗುತ್ತದೆ. (ಆದಾನ = ಕಳೆದುಕೊಳ್ಳುವಿಕೆ, ದೇಹದ ಬಲ ಕಡಿಮೆಯಾಗುತ್ತಾ ಹೋಗುತ್ತದೆ.)

ಶೀತವಾತವರಣ ಕ್ರಮೇಣವಾಗಿ ಉಷ್ಣ ವಾತಾವರಣವಾಗಿ ಬದಲಾಗುತ್ತದೆ. ಚಳಿಗಾಲದಲ್ಲಿ ಪಾಚನಶಕ್ತಿ ಉತ್ತಮವಾಗಿದ್ದು, ಆ ಸಮಯದಲ್ಲಿ ಬರುವ ಹಬ್ಬಗಳನ್ನು(ದಸರಾ, ದೀಪಾವಳಿ) ಬಗೆಬಗೆಯ ಸಿಹಿ ಖಾದ್ಯಗಳನ್ನೂ, ಕರಿದ ತಿಂಡಿಗಳನ್ನೂ ಸೇವಿಸಿ ಆಚರಿಸಲಾಗುತ್ತದೆ. ಅದೇ ಶಿವರಾತ್ರಿ ಬಂತೆಂದರೆ ಉಪವಾಸ. ಇದು ಪ್ರಕೃತಿಯಲ್ಲಾಗುವ ಬದಲಾವಣೆಗೆ ಅನುಗುಣವಾಗಿ ನಮ್ಮ ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕೆಂದು ಸಾಂಕೇತಿಕವಾಗಿ ಸೂಚಿಸುತ್ತದೆ. ಹೇಮಂತಋತುವಿನಲ್ಲಿ ಸಂಚಿತವಾದ ಕಫವನ್ನು ಕರಗಿಸಲು ಉಪವಾಸ–ಜಾಗರಣೆ ಸಹಾಯವಾಗುತ್ತದೆ.

ಒಂದು ಋತು ಮುಗಿದು ಇನ್ನೊಂದು ಋತು ಪ್ರಾರಂಭವಾಗುವ ನಡುವಿನ 14 ದಿನಗಳ ಸಮಯವೇ ‘ಋತುಸಂಧಿ’. ಈ ಅವಧಿಯಲ್ಲಿ ಹಿಂದಿನ ಋತುವಿನ ಆಚರಣೆಯನ್ನು ಕಡಿಮೆಮಾಡುತ್ತ, ಮುಂಬರುವ ಋತುವಿನ ಆಚರಣೆಗಳನ್ನು ಕ್ರಮೇಣವಾಗಿ ಅಳವಡಿಸಿಕೊಳ್ಳಬೇಕು.

ADVERTISEMENT

ಆಯುರ್ವೇದದಲ್ಲಿ ಉಪವಾಸವನ್ನು ‘ಲಂಘಣ ಚಿಕಿತ್ಸೆ’ಯ ಒಂದು ಬಗೆಯಾಗಿಯೂ ಕೂಡ ವಿವರಿಸಲಾಗಿದೆ. ‘ಲಂಘಣ’ ಎಂದರೆ ದೇಹವನ್ನು ಹಗುರವಾಗಿಸುವ ಕ್ರಮ. ಈ ಚಿಕಿತ್ಸೆಯನ್ನು ಮಧುಮೇಹ, ಬೊಜ್ಜು, ಜ್ವರ, ಅಜೀರ್ಣ, ಉಬ್ಬಸ ಶೀತದಂತಹ ವ್ಯಾಧಿಗಳಿಗೆ ನೀಡಲಾಗುತ್ತದೆ.
ಉಪವಾಸ ಮಾಡುವುದರಿಂದ -

* ದೇಹವು ಹಗುರವಾಗಿ ಆರೋಗ್ಯಯುಕ್ತವಾಗುವುದು.
* ದೇಹದ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವುದು.
* ಪಾಚನ ಶಕ್ತಿ ಹೆಚ್ಚುವುದು.
* ಜೀರ್ಣರೋಗಗಳು ನಿಯಂತ್ರಣದಲ್ಲಿರುವುವು.

ಹೇಗೆ ವ್ಯಾಯಮದಿಂದ ಆ ಕ್ಷಣಕ್ಕೆ ಆಯಾಸ ಬಳಲಿಕೆ ಕಂಡುಬಂದರೂ, ಅದರಿಂದ ಉಪಯೋಗಗಳಿವೆಯೋ ಹಾಗೆಯೇ ಉಪವಾಸ ಕಷ್ಟವಾಗಿ ಕಂಡರೂ ಅದರಿಂದ ಅನೇಕ ಉಪಯೋಗಗಳಿವೆ. ಉಪವಾಸದಲ್ಲಿ ಅನೇಕ ಬಗೆಗಳಿದ್ದು, ಜನರು ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪವಾಸ ಮಾಡುವರು. ಕೆಲವರು ಏನನ್ನು ಸೇವಿಸದೆ ನಿರಾಹಾರಿಗಳಾಗಿ ಉಪವಾಸ ಮಾಡುವರು. ಇನ್ನು ಕೆಲವರು ಲಘು ಆಹಾರವನ್ನು ಸೇವಿಸಿ ಉಪವಾಸ ಮಾಡುವರು.

ಜಪಾನಿನ ನೊಬೆಲ್ ಪ್ರಶಸ್ತಿ ಪುರಸ್ಕತ ವಿಜ್ಞಾನಿಯಾದ ಯೊಶನೊರಿ ಒಸುಮಿ ಅವರು ಅಟೊಫ್ಯಾಗಿ (Autophagy) ಕುರಿತು ಸಂಶೋಧನೆ ಮಾಡಿದ್ದಾರೆ. (ಅಟೊ = ಸ್ವತಃ ಫ್ಯಾಗಿ = ತಿನ್ನುವುದು). ಅಂದರೆ ದೇಹವು ನಿಷ್ಕ್ರಿಯ ಜೀವಕೋಶಗಳನ್ನು ಹಾಗೂ ಪ್ರೊಟೀನ್‍ಗಳನ್ನು ಕಬಳಿಸುವುದು. ಈ ಕ್ರಿಯೆಯು ದೇಹವನ್ನು ಕ್ಯಾನ್ಸರ್, ಹೃದಯರೋಗ, ಮಧುಮೇಹದಿಂದ ರಕ್ಷಿಸುತ್ತದೆ ಎನ್ನಲಾಗಿದೆ.

ಯೊಶನೊರಿ ಅವರ ಪ್ರಕಾರ, ಉಪವಾಸದಿಂದ ಮೆದುಳಿನಲ್ಲಿ ಅಟೊಫ್ಯಾಗಿ ಕ್ರಿಯೆ ಹೆಚ್ಚಾಗುವುದರಿಂದ ನರರೋಗಗಳಾದ ಅಲ್ಜೈಮರ್‌, ಪಾರ್ಕಿನ್ಸನ್ ರೋಗಗಳನ್ನು ನಿಯಂತ್ರಣದಲ್ಲಿಡಬಹುದಾಗಿದೆ.

ಉಪವಾಸ ಮಾಡುವವರು ದೀರ್ಘಾಯುಷಿಗಳಾಗುತ್ತಾರೆ ಎಂಬ ವಾದವೂ ಇದೆ; ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆಯುರ್ವೇದದಲ್ಲಿ ‘ಲಂಘನಂ ಪರಮೌಷಧಂ’ ಎಂದಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.