ADVERTISEMENT

ಬಳಕೂರು ಜಾತ್ರೆಗೆ ಅಮೃತ ಮಹೋತ್ಸವ

ಫೆ.28 ರಿಂದ ಜಾತ್ರೆ

ಬಳಕೂರು ವಿ.ಎಸ್.ನಾಯಕ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಬಳಕೂರು ಜಾತ್ರೆಗೆ  ಅಮೃತ ಮಹೋತ್ಸವ
ಬಳಕೂರು ಜಾತ್ರೆಗೆ ಅಮೃತ ಮಹೋತ್ಸವ   
ಜೈನರ ನೆಲೆವೀಡಾಗಿದ್ದ ಕರಾವಳಿ ತೀರದ ಹೊನ್ನಾವರ ತಾಲ್ಲೂಕು ಸರ್ವ ಧರ್ಮ ಸಮನ್ವಯತೆಗೆ ಹೆಸರಾಗಿದೆ. ಇದು ದೇವಾಲಯಗಳ ನಗರಿ ಎಂದೂ ಕರೆಸಿಕೊಳ್ಳುತ್ತದೆ.
 
ತಾಲ್ಲೂಕಿನ ಬಳಕೂರು ಗ್ರಾಮದ ಕೊಡ್ಲಮನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಜಿಲ್ಲೆಯ ಜಾಗೃತ ಸ್ಥಳಗಳಲ್ಲಿ ಒಂದು ಎಂದು ಖ್ಯಾತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಇದೂ ಒಂದು. ದೇವಾಲಯವು ಸುಮಾರು 500 ವರ್ಷಗಳ ಇತಿಹಾಸಹೊಂದಿದೆ. ಈ ಗ್ರಾಮದ ಆರಾಧ್ಯ ದೈವವಾಗಿದ್ದು, ಈ ವರ್ಷ 75ನೇ ವರ್ಷದ ಅಮೃತ ಮಹೋತ್ಸವ ಜಾತ್ರಾ ಸಡಗರದಲ್ಲಿದೆ.  
 
ಫೆ.28ರಿಂದ ಜಾತ್ರೆ ಆರಂಭಗೊಳ್ಳುತ್ತದೆ. ಪ್ರತಿದಿನ ಶತಕುಂಭಾಭಿಷೇಕ, ಮಹಾಪೂಜೆ, ಸಾನಿಧ್ಯ ಹವನ, ದೇವರ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಧ್ವಜಾರೋಹಣಾ ಗಣಹೋಮ, ಅವಭ್ರತೋತ್ಸವ, ಆವೇಶದ್ವಾರ ಅಂಕುರ, ಶ್ರೀ ಸಪ್ತಪ್ರಹರ ಅಖಂಡ ಹರಿನಾಮ ಸಂಕೀರ್ತನೆ, ಭಜನಾ ಮಂಗಲ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್‌ 4ರಂದು ಪುಷ್ಪ ರಥೋತ್ಸವ ಹಾಗೂ 5ರಂದು ಮಹಾ ರಥೋತ್ಸವ ನಡೆಯಲಿದೆ. ಈ ವರ್ಷ ಅಮೃತ ಮಹೋತ್ಸವದ ಆಚರಣೆ ಇರುವುದರಿಂದ ರಜತದ್ವಾರ ಸಮರ್ಪಣೆ ಇರುತ್ತದೆ.  
 
ಮಹಾರಥೋತ್ಸವದ ರಾತ್ರಿಯ ಸಂದರ್ಭದಲ್ಲಿ ‘ಮೃಗಬೇಟೆ’ ಎನ್ನುವ ವಿಶಿಷ್ಟ ಆಚರಣೆ ನಡೆಯುತ್ತದೆ. ಇದರ ಸಂಕೇತವೆಂದರೆ ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭವನ್ನು ಕಳೆದುಕೊಳ್ಳುವುದು. ಇದು ನಮ್ಮ ಶರೀರದಲ್ಲಿರುವ ಕ್ರೂರ ಮೃಗಗಳು ಇದ್ದಂತೆ. ಸದಾ ನಮ್ಮನ್ನು ಘಾಸಿಗೊಳಿಸುತ್ತವೆ. ಇವನ್ನೆಲ್ಲಾ ನಾಶ ಮಾಡಿ ಪರಿಶುದ್ಧನನ್ನಾಗಿಸಿ ದೇವರ ಧ್ಯಾನದಲ್ಲಿ ತೊಡಗುವುದು ಎಂಬ ಅರ್ಥ ‘ಮೃಗಬೇಟೆ’ ನೀಡುತ್ತದೆ. ‘ಮೃಗ ಬೇಟೆ’ ಮಾಡುವ ವೇಷಧಾರಿಯು ಬೇಡರ ವೇಷವನ್ನು ಧರಿಸಿ ಯಕ್ಷಗಾನದ ತಾಳಕ್ಕೆ ವಿಭಿನ್ನವಾಗಿ ಕುಣಿಯುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.