ADVERTISEMENT

ಲಂಬಾಣಿಗರ ಪುಣ್ಯಕ್ಷೇತ್ರದಲ್ಲಿ ಜಾತ್ರಾ ಸಡಗರ

60ನೇ ವರ್ಷದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಲಂಬಾಣಿಗರ ಪುಣ್ಯಕ್ಷೇತ್ರದಲ್ಲಿ ಜಾತ್ರಾ ಸಡಗರ
ಲಂಬಾಣಿಗರ ಪುಣ್ಯಕ್ಷೇತ್ರದಲ್ಲಿ ಜಾತ್ರಾ ಸಡಗರ   
–ವಡ್ಡನಹಳ್ಳಿ ಭೋಜ್ಯಾನಾಯ್ಕ್
 
**
‘ಸತಿ ಹುನಾ ಭಾಗೀ ತೊಳಜಾ ರಮಾ ಉದಾ ಸಾತ್‌ ಸತಿ ಛಾಯಿಸ್‌ ಜತಿ ಸತ್ತರ್‌ ಧ್ಯಾನ್‌ ಕರೆ ಜನ ಪೌವನಜೌರ್‌, ಭೀಮಾ ಸಾತ್‌ ತಮಾರಿ ಧ್ಯಾನ್‌ ತಮೂನಾ ನಮೋ ನಮೋಕಿ ಹೋ ಲಾಕ್‌ ಪಾಪ್‌ ಪರಿಹಾರ್‌, ಹುಯೆ ಉದೋ ಉದೋ ನಮೋ ನಮೋ...’
 
ಇದು ಲಂಬಾಣಿ ಭಾಷೆಯಲ್ಲಿ ಸಪ್ತ ಮಾತೃಕೆಯರನ್ನು ಪ್ರಾರ್ಥಿಸುವ ಪರಿ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಕೇಂದ್ರದಿಂದ 8–10 ಕಿ.ಮೀ ದೂರವಿರುವ ದೊಡ್ಡೆಣ್ಣೇಗೆರೆ ಗ್ರಾಮದ ಬಳಿ ಇರುವ ಶ್ರೀ ಮಹಾಸತಿ ಭೀಮಾ ಮಾತೆ ಮತ್ತು ಶ್ರೀ ತೀತಾರಾಜ ಸ್ವಾಮಿ ಪುಣ್ಯಕ್ಷೇತ್ರವು ಲಂಬಾಣಿಗರ ಪವಿತ್ರ ಯಾತ್ರಾ ಸ್ಥಳದಲ್ಲಿ ಈ ಪ್ರಾರ್ಥನೆಯೀಗ ಮಾರ್ದನಿಸುತ್ತಿದೆ. ಲಂಬಾಣಿಗರ ಆರಾಧ್ಯ ದೈವ ಪವಾಡ ಪುರುಷ ಕುಲಗುರು ಶ್ರೀ ಸೇವಾಲಾಲ್‌ ಮಹಾರಾಜ್‌ ಜನ್ಮ ಸ್ಥಳವಾಗಿರುವ ಈ ಕ್ಷೇತ್ರ, ಈ ಸಮುದಾಯದವರ ಭಾರತದ ಎರಡೇ ಎರಡು ಪುಣ್ಯ ಕ್ಷೇತ್ರಗಳಲ್ಲಿ ಒಂದು ಎನಿಸಿದೆ. (ಇನ್ನೊಂದು ಶಿವಮೊಗ್ಗದ ಕುಂಚೇನಹಳ್ಳಿ ಬಳಿ ಸೂರಗುಂಡನಕೊಪ್ಪದಲ್ಲಿದೆ). 
 
ಬಣಜಾರ, ಬಂಜಾರ, ಲಂಬಾಣಿ, ಲಮಾಣಿ, ಬಣಕಾರ್‌, ಗೊರ್‌ಮಾಟಿ ಎಂದು ಪ್ರಾದೇಶಿಕವಾಗಿ ಗುರುತಿಸಿಕೊಂಡಿರುವ ಸಮುದಾಯದ ಈ ಎರಡು ಪುಣ್ಯಕ್ಷೇತ್ರಗಳ ಬಗ್ಗೆ ಚಾರಿತ್ರಾರ್ಹ ದಾಖಲೆಗಳಿಲ್ಲ. ಆದರೆ ಬಂಜಾರ ಸಮುದಾಯದಲ್ಲಿ ತಲೆತಲಾಂತರಗಳಿಂದ ಬಂದ ‘ವಾಜಾ–ಗಾಜಾ ನಂಗಾರ ಹಾಡು’ (ಹರಿಕಥೆಯಂತೆ) ಹಾಗೂ ಅವರ ಭಕ್ತಿಗೀತೆಗಳು (ಸತ್ತೀರ್‌ ಒಳಂಗ್‌) ಇದನ್ನು ತಿಳಿಸುತ್ತವೆ. 
 
(ಶ್ರೀ ಮಹಾಸತಿ ಭೀಮಾ ಮಾತೆ ಶ್ರೀ ತೀತಾರಾಜ ಸ್ವಾಮಿ ಮೂಲ ವಿಗ್ರಹ)
 
ಇಸ್ರಾನಾಯ್ಕ ಹಾಗೂ ಕಾಳಿಬಾಯಿ ದಂಪತಿಗೆ ಮತ್ರಾಲ್‌ ದೇವತೆಗಳ ಪರಮಭಕ್ತಿಗೆ ಒಲಿದು ಏಳು ಹೆಣ್ಣು ಮಕ್ಕಳ ಸಂತಾನಭಾಗ್ಯ ಅನುಗ್ರಹವಾಯಿತು, ಏಳು ಅಕ್ಕತಂಗಿಯರಲ್ಲಿ ಮೊದಲನೆಯವಳೇ ಮಹಾಸತಿ ಭೀಮಾ ಮಾತೆ. ತನ್ನ ಗಂಡ ತೀತಾರಾಜರ ಪಾರ್ಥಿವ ಶರೀರವನ್ನು ಕುದುರೆ ಮೇಲೆ ತಂದು ಇಲ್ಲಿ ಚಿತೆ ಸಿದ್ಧಪಡಿಸಿ ಪತಿಯೊಡನೆ ಅಗ್ನಿಯಲ್ಲಿ ಲೀನಗೊಂಡಳು ಎಂಬುದಾಗಿ ವಿವರಿಸುತ್ತಾರೆ ಬಂಜಾರ ಇತಿಹಾಸ ಸಂಶೋಧಕ ಅಗ್ಗುಂದ ರಾಮನಾಯ್ಕ್. ಐದು ದಿನಗಳು ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಕುಲದೇವತೆಗೆ ಮುಡಿ ಹರಕೆ ಸಲ್ಲಿಸಲು ಸಾವಿರಾರು ಭಕ್ತರು ಬರುತ್ತಾರೆ. ಲಂಬಾಣಿ ಸಮುದಾಯದ ಸಾಂಸ್ಕೃತಿಕ ನೃತ್ಯ ಗಾಯನ ನಡೆಯುತ್ತದೆ.
 
ಸಮುದಾಯದ ಮಹಿಳೆಯರ ವೇಷಭೂಷಣವಾದ ಜಾಕೀಟು (ಕಾಚಳಿ), ಮೇಲುವಸ್ತ್ರ (ಛಾಟೀಯಾ), ಮೇಲುವಸ್ತ್ರದ ಕಸೂತಿವಿನ್ಯಾಸದ ಪಟ್ಟಿ (ಗುಂಗಟೋ), ಬೆಳ್ಳಿ ಗೆಜ್ಜೆಯನ್ನಾಧರಿಸಿ ವಿನ್ಯಾಸದ ಜಡೆಕುಚ್ಚು (ಗುಗ್ಗರಿ), ಕಾಲಿಗೆ ಕಡಗ ವಿವಿಧ ವಿನ್ಯಾಸದ ಕಾಲುಂಗುರ (ಚಟಕಿ), ರೆಟ್ಟೆ ವಿನ್ಯಾಸದ ಕವಚ (ಚೂಡೋ), ಕೈಬೆರಳಿನ ಉಂಗುರ (ವೀಟಿ), ಹೆಬ್ಬೆರಳ ಉಂಗುರ (ವಿಚುವ), ಬೆನ್ನಿನ ಹಿಂಭಾಗ ಕಟ್ಟುವ ವಿನ್ಯಾಸದ ಬಟ್ಟೆ (ತಿಕ್ಲಿ), ಸೊಂಟ ಬೀಗಿಗೆ ಕಟ್ಟುವ ಪಟ್ಟಿ (ಲೇಪೋ), ಸೊಂಟದಿಂದ ಕೆಳಗೆ ಬಿಡುವ ಕವಡೆ ಹಾರ (ಕೂಡಿರ್‌ ಸಡಕ್‌), ತೋಳಿನಿಂದ ಮುಂಗೈವರೆಗೆ ತೊಡುವ ಪ್ಲಾಸ್ಟಿಕ್‌ ಅಥವಾ ದಂತದ ಬಳೆ (ಬಲಿಯಾ) ಈ ಜಾತ್ರೆಯಲ್ಲಿ ನೂರಾರು ಅಂಗಡಿ ಮಳಿಗೆಯಲ್ಲಿ ಮಾರಾಟವಾಗುತ್ತದೆ. ಲಂಬಾಣಿ ಮಹಿಳೆ ಧರಿಸುವ ಒಂದು ಸಂಪೂರ್ಣ ದಿರಿಸಿಗೆ 25 ಸಾವಿರದಿಂದ 30 ಸಾವಿರ ರೂಪಾಯಿ ಬೆಲೆ ಇರುತ್ತದೆ. ದೇವಾಲಯ ಸಮಿತಿವತಿಯಿಂದ ಮಹಾಭೋಗ್‌ ನಡೆಯುತ್ತದೆ. 
 
ಮೂರನೆ ದಿನ ಮಾತೆಯ ದೇವಾಲಯದ ಪಕ್ಕದಲ್ಲೇ ಪ್ರತಿಷ್ಠಾಪಿಸಲಾಗಿರುವ ಶ್ರೀ ತೀತಾರಾಜ ಸ್ವಾಮಿಗೆ ಈ ಹಿಂದೆ ಕುರಿ ದೇವಾಲಯದ ಮುಂಭಾಗದಲ್ಲಿ ಬಲಿ ನೀಡುವುದು ರೂಢಿ ಇತ್ತು. ಆದರೆ ಈಗ ಐದಾರು ವರ್ಷಗಳಿಂದ ದೇವಾಲಯದ ವ್ಯವಸ್ಥಾಪಕರು ಇದನ್ನು ನಿಲ್ಲಿಸಿದ್ದಾರೆ. ಆದರೆ ಮದ್ಯಾರಾಧನೆಗೇನೂ ಕೊರತೆ ಇಲ್ಲ. 
 
ನಗಾರಿ, ಕಂಚಿನ ತಟ್ಟೆಯೊಂದಿಗೆ ಸಮುದಾಯದ ಪುರುಷರ ಸಾಮೂಹಿಕ ಗಾಯನ ಒಂದೆಡೆಯಾದರೆ, ಇನ್ನೊಂದೆಡೆ ಲಂಬಾಣಿ ಯುವತಿಯರ ನೃತ್ಯ ಮನಸೂರೆಗೊಳ್ಳುತ್ತದೆ. ಇದರ ಜತೆಗೆ ಪ್ರಾದೇಶಿಕ ಜನಪದ ಕಲಾಪ್ರಕಾರಗಳಾದ ಹುಲಿವೇಷ, ಡೊಳ್ಳುಕುಣಿತ, ವೀರಗಾಸೆ, ಪಟದ ಕುಣಿತದ ಸಂಭ್ರಮ ಇರುತ್ತದೆ. ಇದಕ್ಕಿಂತ ಮೊದಲು ಮಾತೆಯ ರಥೋತ್ಸವ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.