ADVERTISEMENT

ಆತ್ಮವಿಶ್ವಾಸವೇ ಮೂಲಮಂತ್ರ

ರೇಷ್ಮಾ ಶೆಟ್ಟಿ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಅಭಿಷೇಕ್‌ ರೆಡ್ಡಿ
ಅಭಿಷೇಕ್‌ ರೆಡ್ಡಿ   

ಪ್ರತಿಯೊಬ್ಬ ಆಟಗಾರನನ್ನು ಒತ್ತಡ ಕಾಡುವುದು ಸಾಮಾನ್ಯ. ನಾವು ಆಡುವಾಗ ಒತ್ತಡದೊಂದಿಗೆ ಆಡಬೇಕು. ಆದರೆ ಒತ್ತಡವನ್ನು ಹೊರೆ ಎಂದು ಭಾವಿಸದೆ ಅದನ್ನು ಅನುಭವಿಸಿ ಆಡಬೇಕು. ಆಗ ಒತ್ತಡ ನಮಗೆ ಗೆಲುವಿನ ಖುಷಿ ನೀಡುತ್ತದೆ. ನಾನು ಗೆಲ್ಲಲೇಬೇಕು ಎಂಬ ಛಲದ ಒತ್ತಡ ಯಾವಾಗಲೂ ನಮ್ಮೊಂದಿಗಿರಬೇಕು.

ಪ್ರತಿ ಕ್ಷೇತ್ರದಲ್ಲೂ ಇರುವಂತೆ ಕ್ರೀಡೆಯಲ್ಲೂ ಒತ್ತಡವಿದೆ. ಆದರೆ ಒತ್ತಡದ ಸ್ವರೂಪ ಮಾತ್ರ ಬೇರೆ. ಕ್ರಿಕೆಟ್ ಆಡುವಾಗ ಒತ್ತಡ ಹೇಗೆ ಬರುತ್ತದೆ ಎಂದರೆ, ಬ್ಯಾಟಿಂಗ್ ಆರಂಭಿಸುವ ಮೊದಲೇ ಆಟಗಾರನಿಗೆ ನೋವಿರುತ್ತದೆ; ಇದರ ಜೊತೆಗೆ ಪಂದ್ಯವನ್ನು ಗೆಲ್ಲುವುದಕ್ಕೆ ಉಳಿದಿರುವುದು ಕೊನೆಯ ಬಾಲ್ ಮಾತ್ರ; ಎದುರಾಳಿ ತಂಡದ ದಾಳಿ – ಇವೆಲ್ಲವೂ ಒತ್ತಡಕ್ಕೆ ಮೂಲವಾಗುತ್ತದೆ. ನನ್ನ ಪ್ರಕಾರ ಕ್ರೀಡೆಯಲ್ಲಿರುವವರಿಗೆ ಒತ್ತಡ ಹೆಚ್ಚಿರುತ್ತದೆ. ನಾವು ಗೆಲ್ಲುವ ಜೊತೆಗೆ ದೇಶವನ್ನೋ ರಾಜ್ಯವನ್ನೋ ಗೆಲ್ಲಿಸಬೇಕು ಎಂಬ ಒತ್ತಡವೂ ನಮ್ಮ ಮೇಲಿರುತ್ತದೆ.

ನನಗೆ ತೀರಾ ಒತ್ತಡ ಎನ್ನಿಸಿದಾಗ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುತ್ತೇನೆ. ಜೊತೆಗೆ ಸಮಾಧಾನವಾಗಿರುತ್ತೇನೆ. ಮನಸ್ಸಿನಲ್ಲಿ ಸಾವಿರ ಯೋಚನೆ ಇದ್ದಾಗ ನಮ್ಮ ಗಮನ ಒಂದರ ಮೇಲೆ ಕೇಂದ್ರಿಕೃತವಾಗಿರುವುದಿಲ್ಲ. ಅದೇ ಮನಸ್ಸು ಖಾಲಿ ಇದ್ದಾಗ ಆಟದ ಮೇಲೆ ಗಮನವಿಟ್ಟು ಚೆನ್ನಾಗಿ ಆಡಬಹುದು. ಇನ್ನು ಒತ್ತಡವನ್ನು ನಿವಾರಿಸಲು ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಒಳ್ಳೆಯ ಆಟಗಾರರು ಒತ್ತಡವನ್ನು ಶಾಂತ ರೀತಿಯಿಂದ ನಿಭಾಯಿಸಿ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ. ಅದು ಅವರಿಗೆ ಪಂದ್ಯ ಗೆಲ್ಲಿಸಲು ಸಹಾಯ ಮಾಡುತ್ತದೆ.

ADVERTISEMENT

ಒತ್ತಡ ನಮ್ಮ ಬಳಿ ಸುಳಿಯುತ್ತಿದೆ ಎಂದು ನಮ್ಮ ಅನುಭವಕ್ಕೆ ಬಂದಾಗ ಅದರಿಂದ ದೂರ ಓಡಲು ಪ್ರಯತ್ನಿಸಿದರೆ ಆಗ ಒತ್ತಡದ ಪ್ರಮಾಣ ಹೆಚ್ಚುತ್ತದೆಯಷ್ಟೇ. ಹಳೆಯ ಅನುಭವಗಳು ಕೆಲವೊಮ್ಮೆ ಒತ್ತಡವನ್ನು ಎಂಜಾಯ್ ಮಾಡುವಂತೆ ಮಾಡುತ್ತದೆ. ಒತ್ತಡವನ್ನು ಋಣಾತ್ಮಕವಾಗಿ ಸ್ವೀಕರಿಸುವುದಕ್ಕಿಂತ ಧನಾತ್ಮಕವಾಗಿ ಸ್ವೀಕರಿಸಿದರೆ ‘ಒತ್ತಡ’ ಎನ್ನಿಸುವುದಿಲ್ಲ.

ನಾನು ಒತ್ತಡ ನಿಯಂತ್ರಣಕ್ಕೆ ಧ್ಯಾನ ಹಾಗೂ ಯೋಗಾಭ್ಯಾಸ ಮಾಡುತ್ತೇನೆ. ಅದರ ಜೊತೆಗೆ ಕೆಲವು ಹಳೆಯ ಮಧುರ ಅನುಭವಗಳು ನನ್ನ ಒತ್ತಡವನ್ನು ಕಡಿಮೆ ಮಾಡುತ್ತದೆ. ಸ್ವಪ್ರೇರಣೆ ಕೂಡ ಒತ್ತಡ ನಿಯಂತ್ರಣಕ್ಕೆ ದಾರಿ. ಭೂತಕಾಲದಲ್ಲಿ ಒತ್ತಡ ನಿವಾರಿಸಿಕೊಂಡ ಅನುಭವಗಳನ್ನು ನೆನಪಿಸಿಕೊಂಡು ಮುಂದೆ ಸಾಗಿದರೆ ಒತ್ತಡ ಕೊಂಚ ನಿವಾರಣೆಯಾಗುತ್ತದೆ.

ನಾನು ಕೆಪಿಎಲ್ ಆಡುವಾಗ ಗಾಯವಾಗಿ ಮೊಣಕಾಲು ಸರ್ಜರಿ ಆಗಿತ್ತು. ಅದರಿಂದ 8 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದೆ. ಅಷ್ಟೂ ದಿನ ಮೈದಾನದಿಂದ ದೂರ ಉಳಿದು ಮತ್ತೆ ನೇರವಾಗಿ ಮೈದಾನಕ್ಕೆ ಬಂದಾಗ ಒತ್ತಡ ನನ್ನನ್ನು ಬಾಧಿಸಿತ್ತು. ಆದರೆ ಆಡಬೇಕು ಎಂಬ ಛಲವಿತ್ತು. ಹಾಗಾಗಿ ಒತ್ತಡವನ್ನು ಸವಾಲಾಗಿ ಸ್ವೀಕರಿಸಿದೆ. ಆ ಸಮಯದಲ್ಲಿ ನನಗೆ ಆಡುವುದು ಚಾಲೆಂಜ್ ಆಗಿತ್ತು. ನನ್ನ ಸೀನಿಯರ್ ಆಟಗಾರರೆಲ್ಲಾ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದರು. ದಿನಗಳು ಕಳೆದಂತೆ ನನಗೂ ಅನ್ನಿಸಿತ್ತು. ಇದೇ ನನ್ನ ಕಾರ್ಯಕ್ಷೇತ್ರ, ಇಲ್ಲೇ ನಾನು ಸಾಧಿಸಬೇಕು ಎಂಬ ಛಲ ಹುಟ್ಟಿತ್ತು. ಒತ್ತಡದ ಜೊತೆಗೆ ಕಠಿಣ ಶ್ರಮದಿಂದ ಆಟವಾಡುತ್ತಿದ್ದೆ. ಇದರಿಂದ ರನ್ ಗಳಿಸಿದ್ದೆ. ಇದು ನನ್ನಲ್ಲಿ ಒತ್ತಡ ನಿವಾರಿಸಿ ಆತ್ಮವಿಶ್ವಾಸ ಹೆಚ್ಚಿಸಿತ್ತು.

ಹಿಂದೆ ಕೂಡ ಆಟಗಾರರಿಗೆ ಒತ್ತಡವಿತ್ತು. ಆದರೆ ಆಗಿನ ಒತ್ತಡವೇ ಬೇರೆ, ಈಗಿನ ಒತ್ತಡವೇ ಬೇರೆ. ಇಂದು ಆಟಗಾರರ ನಡುವೆ ಸ್ಪರ್ಧೆ ಜಾಸ್ತಿ ಇದೆ. ಆ ಸ್ಪರ್ಧೆಯ ಒತ್ತಡವನ್ನು ನಿವಾರಿಸಿಕೊಂಡು ಆಡುವ ಹೊಣೆ ನಮ್ಮ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.