ADVERTISEMENT

ನಿಮಗೂ ಬೇಕೇ ರೇಸಿಂಗ್‌ ಕಾರ್‌?

ಆರ್‌.ಜೆ.ಯೋಗಿತಾ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ರೇಸಿಂಗ್‌ ಕಾರ್‌
ರೇಸಿಂಗ್‌ ಕಾರ್‌   

ಉನ್ನತ ತಂತ್ರಜ್ಞಾನ, ನುರಿತ ಎಂಜಿನಿಯರ್‌ಗಳ ನೆರವು ಇಲ್ಲದೆ ನಗರದ ಕೆ.ಎಸ್‌. ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಗಂಟೆಗೆ 60 ಕಿ.ಮೀ ವೇಗದಲ್ಲಿ ಓಡುವ ರೇಸಿಂಗ್‌ ಕಾರನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿದ್ದಾರೆ.

ಅಂತಿಮ ಬಿ.ಇ ವಿದ್ಯಾರ್ಥಿ ಪಿಯೂಷ್‌ ವರ್ಮಾ ಅವರ ನೇತೃತ್ವದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ 25 ವಿದ್ಯಾರ್ಥಿಗಳ ತಂಡ ಮೂರು ತಿಂಗಳ ಪರಿಶ್ರಮದಿಂದ ಈ ಕಾರಿನ ವಿನ್ಯಾಸ ಮಾಡಿದ್ದಾರೆ. ದೇಶದ ಪ್ರತಿಷ್ಠಿತ ಕಾರ್ ರೇಸಿಂಗ್ ಸ್ಪರ್ಧೆ ‘ಬಾಜಾ ಎಸ್‌ಇಎ 2017’ರ ಸ್ಪರ್ಧೆಯಲ್ಲಿ ಭಾಗವಹಿಸಲು 202 ಕೆ.ಜಿ ತೂಕ ಹೊಂದಿರುವ ಈ ಕಾರನ್ನು ಸಿದ್ಧಗೊಳಿಸಲಾಗಿತ್ತು. ಈ ಸ್ಪರ್ಧೆಯ ಅಂಗವಾಗಿ ನಡೆದ ವಿವಿಧ ಪರೀಕ್ಷೆಗಳಲ್ಲಿ ಈ ತಂಡ ವಿವಿಧ ರ‍್ಯಾಂಕಿಂಗ್‌‌ ಪಡೆದಿದೆ.

305 ಬ್ರಿಗ್ಸ್ ಮತ್ತು ಸ್ಟ್ರಾಟನ್ ಎಂಜಿನ್ ಅನ್ನು ಈ ರೇಸ್ ಕಾರಿಗೆ ಅಳವಡಿಸಲಾಗಿದೆ. ಇದು ಪ್ರತಿ ಲೀಟರ್‌ ಪೆಟ್ರೋಲ್‌ಗೆ 25 ಕಿ.ಮೀ ಮೈಲೇಜ್ ನೀಡುತ್ತದೆ.

ADVERTISEMENT

ಭಾರತದ ‘ಸೊಸೈಟಿ ಆಫ್ ಅಟೋಮೋಟಿವ್ ಎಂಜಿನಿಯರ್ಸ್’ (ಎಸ್‌ಎಇ ಇಂಡಿಯಾ) ವತಿಯಿಂದ 2007ರಿಂದ ನಡೆಯುತ್ತಿರುವ ಆಫ್ ರೋಡ್ ರೇಸಿಂಗ್ ಸ್ಪರ್ಧೆಯಲ್ಲಿ ಈ ಕಾಲೇಜಿನ ತಂಡವು 2014ರಿಂದ ಭಾಗವಹಿಸುತ್ತಿದೆ. ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರಮಟ್ಟದ ಅಂತಿಮ ಹಂತದ ಸ್ಪರ್ಧೆಯಲ್ಲಿ ವಿವಿಧ ಪರೀಕ್ಷೆಯಲ್ಲಿ ಈ ತಂಡವು ಗರಿಷ್ಠ ಅಂಕ ಪಡೆದಿದೆ.

(ಕಾರು ತಯಾರಿಸಿದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ)

‘ಕಾರಿಗೆ ₹4 ಲಕ್ಷ ವೆಚ್ಚವಾಗಿದೆ. ಪಿಯೂಷ್‌ ವರ್ಮಾ ನೇತೃತ್ವದಲ್ಲಿ ಈ ಕಾರು ರೂಪಿಸಲಾಗಿದೆ. ಕಾಲೇಜು ಗ್ಯಾರೇಜಿನಲ್ಲಿ ಪ್ರಯೋಗ ಯಶಸ್ಸು ಕಂಡಿದ್ದು, ಸ್ಪರ್ಧೆಗಾಗಿ  ರಾಷ್ಟ್ರೀಯ ಮಾನ್ಯತೆ ಪಡೆದಿದೆ’ ಎಂದು ತಂಡದ ಸದಸ್ಯ ಶರತ್‌ ತಿಳಿಸಿದರು.

‘ರೇಸ್‌ಗಾಗಿಯೇ ಈ ಕಾರು ತಯಾರಿಸಿದ್ದರಿಂದ ವೇಗಕ್ಕೆ ಹೆಚ್ಚು ಗಮನ ನೀಡಲಾಗಿದೆ. ಕಳೆದ ವರ್ಷ  ಕಾರಿನ ತೂಕ ಹೆಚ್ಚಿದ್ದರಿಂದ ಬಹುಮಾನ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ 50 ಕೆ.ಜಿಯಷ್ಟು ತೂಕ ಕಡಿಮೆ ಮಾಡಲಾಗಿದೆ ಎಂದರು.


‘ಮೇ 2016ರಲ್ಲಿ ನಮ್ಮ ಕಾರಿನ ವಿನ್ಯಾಸ ರೂಪಿಸಲು ಪ್ರಾರಂಭಿಸಿದೆವು. ಕೇವಲ ಎರಡೇ ತಿಂಗಳಲ್ಲಿ  ಪೂರ್ಣಗೊಳಿಸಿದೆವು. ಗೇರ್‌ ಬಾಕ್ಸ್‌ ವಿನ್ಯಾಸ ಮತ್ತು ಜೋಡಿಸುವ ಸಂಪೂರ್ಣ ಕೆಲಸವನ್ನು ನಮ್ಮ ತಂಡವೇ ಮಾಡಿರುವುದು ನಮಗೆ ಖುಷಿ ತಂದಿದೆ’ ಎಂದು ತಂಡದ ಮತ್ತೊಬ್ಬ ವಿದ್ಯಾರ್ಥಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.