ADVERTISEMENT

ನೀವೂ ಮಾಡಿ ಐಸ್‌ಕ್ರೀಂ ಫ್ರೂಟ್ಸ್‌ ಸಲಾಡ್‌

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ನೀವೂ ಮಾಡಿ ಐಸ್‌ಕ್ರೀಂ ಫ್ರೂಟ್ಸ್‌ ಸಲಾಡ್‌
ನೀವೂ ಮಾಡಿ ಐಸ್‌ಕ್ರೀಂ ಫ್ರೂಟ್ಸ್‌ ಸಲಾಡ್‌   

ಚಿಕ್ಕು ಫ್ರೂಟ್‌ ಸಲಾಡ್‌
ಬೇಕಾಗುವ ವಸ್ತುಗಳು: 4 ಚಿಕ್ಕು ಹಣ್ಣು, 2 ಚಮಚ ಒಣ ದ್ರಾಕ್ಷಿ, 2 ಚಮಚ ಗೋಡಂಬಿ, 1 ಚಮಚ ಬಾದಾಮಿ, 4 ಚಮಚ ಬಾಳೆಹಣ್ಣಿನ ಚೂರು, ಅರ್ಧ ಕಪ್‌ ಕಂಡೆನ್ಸ್ಡ್ ಹಾಲು, ಕಾಲು ಚಮಚ ಏಲಕ್ಕಿ.

ಮಾಡುವ ವಿಧಾನ:  ಚಿಕ್ಕು ಹಣ್ಣಿನ ಬೀಜ ಮತ್ತು ಸಿಪ್ಪೆ ತೆಗೆದು, ಸಣ್ಣ ತುಂಡುಗಳನ್ನಾಗಿ ಮಾಡಿ. ಅದಕ್ಕೆ ಸಣ್ಣಗೆ ತುಂಡು ಮಾಡಿದ ಒಣ ದ್ರಾಕ್ಷಿ, ಗೋಡಂಬಿ ಚೂರು, ಬಾದಾಮಿ ಚೂರು, ಬಾಳೆ ಹಣ್ಣಿನ ಚೂರು ಸೇರಿಸಿ. ನಂತರ ಕಂಡೆನ್ಸ್ಡ್ ಹಾಲು, ಏಲಕ್ಕಿ ಪುಡಿ ಸೇರಿಸಿ ಬೆರೆಸಿ. ಕಂಡೆನ್ಸ್ಡ್ ಹಾಲಿನ ಬದಲು ಐಸ್ ಕ್ರೀಂ ಅಥವಾ ಕಸ್ಟರ್ಡ್ ಪೌಡರ್ ಸೇರಿಸಿ ಫ್ರೂಟ್ಸ್‌ ಸಲಾಡ್‌  ಮಾಡಬಹುದು.

ಒಣ ಅಂಜೂರದ ಐಸ್ ಕ್ರೀಮ್
ಬೇಕಾಗುವ ವಸ್ತುಗಳು: 1 ಕಪ್ ಅಂಜೂರದ ಹಣ್ಣಿನ ಚೂರುಗಳು, 5 ಚಮಚ ಸಕ್ಕರೆ ಪುಡಿ, 2 ಕಪ್ ಕಂಡೆನ್ಸ್ಡ್ ಹಾಲು, 2 ಕಪ್ ಹಾಲು, ಅರ್ಧ ಚಮಚ ನಿಂಬೆರಸ.
ಮಾಡುವ ವಿಧಾನ: ಅಂಜೂರವನ್ನು ಐದಾರು ಗಂಟೆ ನೀರಲ್ಲಿ ನೆನೆಸಿದ ಮೇಲೆ ತೆಗೆದು ಸಣ್ಣಗೆ ತುಂಡು ಮಾಡಿ. ನಂತರ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಆಮೇಲೆ ಇದಕ್ಕೆ ಕಂಡೆನ್ಸ್ಡ್ ಹಾಲು, ನಿಂಬೆರಸ, ಕುದಿಸಿ ತಣ್ಣಗೆ ಮಾಡಿದ ಹಾಲು ಸೇರಿಸಿ ಮಿಶ್ರಣ ತಯಾರಿಸಿ. ಅದನ್ನು 1 ಗಂಟೆ ಫ್ರಿಜರಿನಲ್ಲಿಡಿ. ಬಳಿಕ ಹೊರತೆಗೆದು ಮತ್ತೆ ರುಬ್ಬಿ. ಮಿಶ್ರಣ ಮತ್ತಷ್ಟು ಮೃದುವಾದ ಮೇಲೆ 4 ಗಂಟೆ ಫ್ರೀಜರಿನಲ್ಲಿಟ್ಟು ಬಳಿಕ ತೆಗೆದರೆ ರುಚಿಯಾದ ಅಂಜೂರ ಐಸ್ ಕ್ರೀಂ ತಿನ್ನಲು ಸಿದ್ಧ.

ADVERTISEMENT

ಕರಬೂಜ ಫ್ರೂಟ್ಸ್‌ ಸಲಾಡ್‌
ಬೇಕಾಗುವ ವಸ್ತುಗಳು:  1 ಕಪ್ ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣು, 2 ಚಮಚ ಒಣದ್ರಾಕ್ಷಿ, 2 ಚಮಚ ಗೋಡಂಬಿ, 5 ಚಮಚ ಬಾಳೆ ಹಣ್ಣು, ಕಾಲು ಕಪ್ ಸಣ್ಣಗೆ ಹೆಚ್ಚಿದ ಸೇಬಿನ ಚೂರು, 5 ಚಮಚ ಬಿಳಿ ದ್ರಾಕ್ಷಿ, 1 ಕಪ್ ಕಂಡೆನ್ಸ್ಡ್ ಹಾಲು, ಕಾಲು ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಕರಬೂಜ ಸಿಪ್ಪೆ ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿ. ಒಣದ್ರಾಕ್ಷಿ, ಗೋಡಂಬಿ ಸಣ್ಣ ಚೂರುಗಳನ್ನಾಗಿ ಮಾಡಿ. ನಂತರ ಬಾಳೆ ಹಣ್ಣಿನ ಚೂರು, ಸೇಬಿನ ಚೂರು, ಬಿಳಿ ದ್ರಾಕ್ಷಿ, ಕಪ್ಪು ದ್ರಾಕ್ಷಿ ಬೆರೆಸಿ. ನಂತರ ಕರಬೂಜದ ಚೂರು ಬೆರೆಸಿ. ಆಮೇಲೆ ಕಂಡೆನ್ಸ್ಡ್ ಹಾಲು ಮತ್ತು ಏಲಕ್ಕಿ ಪೌಡರ್ ಹಾಕಿ ಸರಿಯಾಗಿ ಬೆರೆಸಿ. ಈಗ ರುಚಿಯಾದ ಕರಬೂಜ ಫ್ರೂಟ್ಸ್‌ ಸಲಾಡ್ ತಿನ್ನಲು ಸಿದ್ಧ.

ಚಿಕ್ಕು ಐಸ್ ಕ್ರೀಮ್
ಬೇಕಾಗುವ ವಸ್ತುಗಳು: 2 ಕಪ್ ಸಣ್ಣಗೆ ಹೆಚ್ಚಿದ ಚಿಕ್ಕು (ಸಪೋಟಾ) ಹಣ್ಣು, 1 ಕಪ್ ಹಾಲಿನ ಕ್ರೀಂ, 1 1/2 ಕಪ್ ಮಿಲ್ಕ್ ಮೇಡ್.
ಮಾಡುವ ವಿಧಾನ: ಹಣ್ಣಿನ ಬೀಜ ಮತ್ತು ಸಿಪ್ಪೆ ತೆಗೆದು, ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿ. ಇದಕ್ಕೆ ಹಾಲಿನ ಕ್ರೀಂ ಮತ್ತು ಮಿಲ್ಕ್ ಮೇಡ್ ಸೇರಿಸಿ ಬೆರೆಸಿ. ಆರು ಗಂಟೆ ಫ್ರೀಜರ್‌ನಲ್ಲಿ ಇಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿ ಮತ್ತೆ ಐದಾರು ಗಂಟೆ ಫ್ರೀಜರಿನಲ್ಲಿ ಇಡಿ. ಈಗ ರುಚಿಯಾದ ಐಸ್ ಕ್ರೀಂ ತಿನ್ನಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.