ADVERTISEMENT

ಅಡ್ವಾಣಿ ಭೇಟಿ ಮಾಡಿದ ಜಸ್ವಂತ್‌

​ಪ್ರಜಾವಾಣಿ ವಾರ್ತೆ
Published 23 ಮೇ 2014, 19:30 IST
Last Updated 23 ಮೇ 2014, 19:30 IST

ನವದೆಹಲಿ (ಪಿಟಿಐ): ಬಿಜೆಪಿಯಿಂದ ಉಚ್ಚಾಟನೆ­ಗೊಂಡಿ­ರುವ ಜಸ್ವಂತ್‌ ಸಿಂಗ್‌ ಅವರು ಶುಕ್ರ­ವಾರ ಪಕ್ಷದ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಅವರನ್ನು  ಭೇಟಿಯಾಗಿರು­ವುದು ಕುತೂಹಲ ಕೆರಳಿಸಿದೆ.

ಭೇಟಿಯ ಹಿನ್ನೆಲೆಯಲ್ಲಿ ಜಸ್ವಂತ್‌ ಅವರು ಮತ್ತೆ ಬಿಜೆಪಿಗೆ ಮರಳುತ್ತಾರೆ ಎಂಬ ವದಂತಿ ವ್ಯಾಪಕ ಕೇಳಿಬರುತ್ತಿದೆ. ರಾಜಸ್ತಾನದ ಬಾರ್ಮೇರ್‌ ಕ್ಷೇತ್ರ­ದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಜಸ್ವಂತ್‌ ಸಿಂಗ್‌ ಅವರು ಅಡ್ವಾಣಿ ಅವರೊಂದಿಗೆ 30 ನಿಮಿಷಗಳ ಕಾಲ ಮಾತುಕತೆ ನಡೆ­ಸಿದರು ಎಂದು ಮೂಲಗಳು ಹೇಳಿವೆ.

ಇದೊಂದು ‘ಔಪಚಾರಿಕ’ ಭೇಟಿ ಎಂದು ಅಡ್ವಾಣಿ ವಲಯದ ಆಪ್ತ ಮೂಲಗಳು ತಿಳಿಸಿವೆ. ಬಾರ್ಮೇರ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕರ್ನಲ್‌ ಸೋನಾರಾಂ ಚೌಧರಿ ವಿರುದ್ಧ ಸ್ಪರ್ಧಿ­ಸಲು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್‌ ಪಡೆಯಲು ನಿರಾಕರಿಸಿದ್ದಕ್ಕೆ ಬಿಜೆಪಿ­ಯು ಅವರನ್ನು ಉಚ್ಚಾಟಿಸಿತ್ತು.

ಪಕ್ಷದ ಕ್ರಮಕ್ಕೆ ಅವರು ವಿಷಾದ ವ್ಯಕ್ತಪಡಿಸಿ­ದ್ದರು. ಚುನಾವಣೆ­ಯಲ್ಲಿ 87,461 ಮತಗಳಿಂದ ಸೋಲನ್ನೂ ಕಂಡಿದ್ದರು. ಭೇಟಿಯ ಹಿನ್ನೆಲೆಯಲ್ಲಿ ಜಸ್ವಂತ್‌ ಅವರು ಮತ್ತೆ ಬಿಜೆಪಿಗೆ ಸೇರ್ಪಡೆ­­ಗೊಳ್ಳ­ಲಿದ್ದಾರೆ ಎಂಬ ವದಂತಿ ಹರಡಿ­ದ್ದರೂ, ತಮ್ಮ ಪುತ್ರ ಮನ್ವೇಂದ್ರ ಅವರ ರಾಜ­ಕೀಯ ಭವಿಷ್ಯದ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು  ಹೇಳಿವೆ. ರಾಜಸ್ತಾನದ ವಿಧಾನಸಭೆಯಲ್ಲಿ ಶಾಸಕರಾಗಿರುವ ಮನ್ವೇಂದ್ರ ಅವರನ್ನು ಬಿಜೆಪಿ ಅಮಾನತು ಮಾಡಿದೆ.

ಬಾರ್ಮೇರ್‌ನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಮನ್ವೇಂದ್ರ ಅವರು ಪ್ರಚಾರ ಮಾಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ­ಯಿಂದಲೂ ತೆಗೆದುಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT