ADVERTISEMENT

ಅಧಿಕಾರಿಗಳಿಗೆ ಅನುಮತಿ ಕಡ್ಡಾಯ

5 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆ ಪಡೆಯಲು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 7:17 IST
Last Updated 20 ಏಪ್ರಿಲ್ 2015, 7:17 IST

ನವದೆಹಲಿ (ಪಿಟಿಐ): ಐಎಎಸ್‌, ಐಪಿಎಸ್‌ ಅಧಿಕಾರಿಗಳು ಐದು ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ ಕೊಡುಗೆಗಳನ್ನು ಪಡೆಯುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಪಡೆಯು ವುದನ್ನು ಕಡ್ಡಾಯ ಗೊಳಿಸಲಾಗಿದೆ.


ಐದು ಸಾವಿರ ರೂಪಾಯಿಗೂ ಹೆಚ್ಚಿನ ವೆಚ್ಚದ ಊಟ, ವಸತಿ ಹಾಗೂ ಸಾರಿಗೆ ಸೌಲಭ್ಯವನ್ನು ಉಚಿತವಾಗಿ ಪಡೆದರೆ, ಅದಕ್ಕೂ ಅನುಮತಿ ಪಡೆಯಬೇಕಾಗುತ್ತದೆ.

ಅಖಿಲ ಭಾರತ ನಾಗರಿಕ ಸೇವಾ ನಿಯಮಾವಳಿಗಳಿಗೆ ಈಚೆಗೆ ಮಾಡಿರುವ ತಿದ್ದುಪಡಿ ಪ್ರಕಾರ ಸ್ನೇಹಿತರು, ಸಂಬಂಧಿಕರಿಂದ ₨ 25 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಕೊಡುಗೆಗಳನ್ನು ಸ್ವೀಕರಿಸಿದರೆ ಅದನ್ನು ಸರ್ಕಾರದ ಗಮನಕ್ಕೆ ತರಬೇಕಾಗುತ್ತದೆ.ಐದು  ಸಾವಿರಕ್ಕೂ ಹೆಚ್ಚಿನ ವೆಚ್ಚದ ಕೊಡುಗೆಗಳನ್ನು ಅಧಿಕಾರಿಗಳ ಕುಟುಂಬದ ಸದಸ್ಯರು ಪಡೆಯ ಬೇಕಾದರೂ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ.

ಮದುವೆ, ನಾಮಕರಣ,ವಾರ್ಷಿ ಕೋತ್ಸವ, ಧಾರ್ಮಿಕ ಸಮಾರಂಭ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಸ್ನೇಹಿತರು, ಸಂಬಂಧಿಕರಿಂದ ಉಡುಗೊರೆ ಸ್ವೀಕರಿಸಬಹುದು. ಆದರೆ, ಅವುಗಳ ಮೌಲ್ಯ ₨ 25 ಸಾವಿರಕ್ಕಿಂತ ಹೆಚ್ಚಾಗಿದ್ದರೆ ಸರ್ಕಾರದ ಗಮನಕ್ಕೆ ತರಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಂಬಂಧಿಕರು, ಸ್ನೇಹಿತರನ್ನು ಹೊರತುಪಡಿಸಿ ಬೇರೆಯವರಿಂದ ಉಚಿತವಾಗಿ ಊಟ, ವಸತಿ, ಸಾರಿಗೆ ಇತ್ಯಾದಿ ಸೌಲಭ್ಯಗಳನ್ನು  ಪಡೆದರೆ ಅದನ್ನು ಕೊಡುಗೆ ಎಂದೇ ಪರಿಗಣಿಸ ಲಾಗುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಆಯೋಗ ಈಚೆಗೆ ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ ತಿಳಿಸಲಾಗಿದೆ.

ಇದುವರೆಗೆ ಒಂದು ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ ಕೊಡುಗೆಗಳನ್ನು ಪಡೆಯಬೇಕಾದರೆ ಸರ್ಕಾರದ ಅನುಮತಿ ಪಡೆಯ ಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT