ADVERTISEMENT

ಕಾವೇರಿ: ಎರಡೂ ರಾಜ್ಯಗಳಲ್ಲಿ ನೀರಿನ ಕೊರತೆ; ಉದ್ಯೋಗ, ಆರ್ಥಿಕ ಸಮಸ್ಯೆ: ತಜ್ಞರ ತಂಡ ವರದಿ

ನೀರು ಬಳಕೆ ತಂತ್ರಜ್ಞಾನ ಹಳತಾಗಿದ್ದು, ಅವೈಜ್ಞಾನಿಕ

ಪಿಟಿಐ
Published 17 ಅಕ್ಟೋಬರ್ 2016, 16:52 IST
Last Updated 17 ಅಕ್ಟೋಬರ್ 2016, 16:52 IST
ಕಾವೇರಿ: ಎರಡೂ ರಾಜ್ಯಗಳಲ್ಲಿ ನೀರಿನ ಕೊರತೆ; ಉದ್ಯೋಗ, ಆರ್ಥಿಕ ಸಮಸ್ಯೆ: ತಜ್ಞರ ತಂಡ ವರದಿ
ಕಾವೇರಿ: ಎರಡೂ ರಾಜ್ಯಗಳಲ್ಲಿ ನೀರಿನ ಕೊರತೆ; ಉದ್ಯೋಗ, ಆರ್ಥಿಕ ಸಮಸ್ಯೆ: ತಜ್ಞರ ತಂಡ ವರದಿ   

ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ನೇಮಿಸಿದ್ದ ತಜ್ಞರ ತಂಡ ಕಾವೇರಿಕೊಳ್ಳದ ಉಭಯ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಸೋಮವಾರ ವರದಿ ಸಲ್ಲಿಸಿದ್ದು, ನೀರು ಬಳಕೆ ತಂತ್ರಜ್ಞಾನ ಹಳೆಯದಾಗಿದ್ದು, ಅವೈಜ್ಞಾನಿಕವಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ನೀರಿನ ಕೊರತೆ ಎದುರಿಸುತ್ತಿವೆ. ಇದರಿಂದಾಗಿ ಜನ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಅ. 18ರಂದು ಸುಪ್ರೀಂ ಕೋರ್ಟ್‌ ತೀರ್ಪು ಹೊರ ಬೀಳಲಿದ್ದು, ತಜ್ಞರ ಸಮಿತಿ ನ್ಯಾಯ ಪೀಠದ ಆದೇಶದಂತೆ ಒಂದು ದಿನ ಮುಂಚಿತವಾಗಿ ವರದಿ ಸಲ್ಲಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ತಜ್ಞರ ತಂಡ ಅ.7 ಮತ್ತು 8 ರಂದು ಕರ್ನಾಟಕದ ಕೆ.ಆರ್.ಎಸ್‌ , ಹೇಮಾವತಿ ಜಲಾಶಯ ಮತ್ತು ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿತ್ತು. ಅ.9 ಮತ್ತು 10ರಂದು ತಮಿಳುನಾಡಿನ ಭವಾನಿ,  ಮೆಟ್ಟೂರು ಜಲಾಶಯ, ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿಯ ಮಾಹಿತಿ ಸಂಗ್ರಹಿಸಿದೆ.

ADVERTISEMENT

ತಂಡ 40 ಪುಟಗಳ ವರದಿ ಸಲ್ಲಿಸಿದ್ದು, ಎರಡೂ ರಾಜ್ಯಗಳ ರೈತರ ಹೆಚ್ಚಿನಪಾಲು ಬೆಳೆ ಹಾನಿಗೊಳಗಾಗಿದೆ. ಅವರಿಗೆ ಬೆಳೆ ಪರಿಹಾರ ಒದಗಿಸುವ ಅಗತ್ಯವಿದೆ ಎಂದು ಸಲಹೆ ನೀಡಿದೆ.

‘ಕರ್ನಾಟಕ ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆದಿವೆ’ ಎಂದು ಕಾವೇರಿ ಜಲಾನಯನ ಪ್ರದೇಶದಲ್ಲಿನ ಸಾಮಾಜಿಕ ಸ್ಥಿತಿಗತಿ ಬಗ್ಗೆ ಉಲ್ಲೇಖಿಸಿದೆ.

ನೀರಿನ ಬಳಕೆಯ ತಂತ್ರಜ್ಞಾನ ಹಳತಾಗಿದ್ದು, ಅವೈಜ್ಞಾನಿಕವಾಗಿದೆ ಎಂದು ಹೇಳಿರುವ ಸಮಿತಿ, ರೈತರಿಗೆ ನೀರೊದಗಿಸಲು ಬಳಸುವ ಮೂಲಸೌಕರ್ಯಗಳು ಶತಮಾನಗಳಷ್ಟು ಹಳೆಯದಾಗಿವೆ ಹಾಗೂ ಅತ್ಯಂತ ಕಡಿಮೆ ಸಾಮರ್ಥ್ಯದಿಂದ ಕೂಡಿವೆ. ಇರುವ ಅತ್ಯಲ್ಪ ನೀರನ್ನು ಸಮರ್ಪಕವಾಗಿ ಬಳಸಲು ಆಧುನೀಕರಣಗೊಳಿಸಬೇಕು. ಪೈಪ್‌ ಮೂಲಕ ನೀರೊದಗಿಸುವ ಹಾಗೂ ಸೂಕ್ಷ್ಮ ಮತ್ತು ಹನಿ ನೀರಾವರಿಯಂಥ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಉಭಯರಾಜ್ಯಗಳು ನೀರಿನ ಕೊರತೆ ಎದುರಿಸುತ್ತಿವೆ ಎಂದು ಹೇಳಿರುವ ಸಮಿತಿಯ ನೇತೃತ್ವ ವಹಿಸಿದ್ದ ಜಿ.ಎಸ್‌. ಝಾ ಅವರು, ಕಾವೇರಿ ಕೊಳ್ಳದ ಪ್ರದೇಶದಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ನಿರುದ್ಯೋಗ ಸೃಷ್ಟಿಯಾಗಿದೆ. ಜತೆಗೆ, ಮೀನುಗಾರಿಕೆಗೂ ತೊಡಕಾಗಿದೆ. ಇದು ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಪ್ರಸಕ್ತ ವರ್ಷ ನದಿ ಪಾತ್ರದಲ್ಲಿ ನೀರಿನ ಒಳ ಹರಿವು ಕಡಿಮೆ ಇದೆ. ಕಳೆದ ಐದು ವರ್ಷದಲ್ಲಿ ಮೂರು ವರ್ಷಗಳು ನೀರಿನ ಹರಿವು ಕಡಿಮೆ ಇದೆ. ಇದು ಕಾವೇರಿ ಕೊಳ್ಳದಲ್ಲಿನ ರಾಜ್ಯಗಳ ರೈತರು ಅನಿಶ್ಚಿತತೆಯಿಂದ ಬಳಲುತ್ತಿದ್ದಾರೆ ಎಂದು ಅವರು ಉಲ್ಲೇಖೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.