ADVERTISEMENT

ಕಾಶ್ಮೀರ ಸ್ಥಾನಮಾನ: 370ನೇ ವಿಧಿ ವಿವಾದ ಉಲ್ಬಣ

​ಪ್ರಜಾವಾಣಿ ವಾರ್ತೆ
Published 28 ಮೇ 2014, 19:30 IST
Last Updated 28 ಮೇ 2014, 19:30 IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿ­ಧಾನದ 370ನೇ ವಿಧಿಯ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ನೀಡಿದ್ದ ಹೇಳಿಕೆ ಈಗ ಭಾರಿ ವಿವಾದ ಎಬ್ಬಿಸಿದೆ.

ಸಿಂಗ್‌ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.  ಒಮರ್‌ ಅವರ  ಹೇಳಿಕೆ ಟೀಕಿಸಿ  ಆರೆಸ್ಸೆಸ್‌ ಕೂಡ ಪ್ರತಿ ಹೇಳಿಕೆ ನೀಡಿದೆ. 

ಏನಿದು ವಿವಾದ: ಮಂಗಳವಾರ ಅಧಿಕಾರ ಸ್ವೀಕರಿಸಿದ್ದ  ಪ್ರಧಾನಿ ಕಚೇರಿ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್‌ ಅವರು, 370ನೇ ವಿಧಿಯ ಅಗತ್ಯ ಹಾಗೂ ಗುಣಾವ­ಗುಣಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಕಾಶ್ಮೀರ ಕಣಿವೆಯ  ಸಮಾಜದಲ್ಲಿರುವ ಪ್ರತಿಯೊಂದು ವರ್ಗವನ್ನು ಸಂಪರ್ಕಿಸಿ ಈ ಬಗ್ಗೆ ‘ಮನವರಿಕೆ’ ಮಾಡಲೂ ಸರ್ಕಾರ ಯತ್ನಿಸಲಿದೆ ಎಂದು ಹೇಳಿದ್ದರು.

ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್, ‘370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ನಡುವಣ ಏಕೈಕ ಸಂವಿಧಾನಾತ್ಮಕ ಕೊಂಡಿಯಾಗಿದೆ. ಅದನ್ನು ರದ್ದುಗೊಳಿ­ಸಿದಲ್ಲಿ ಭಾರತದ ಜತೆಗಿನ ಸಂಬಂಧ ಕಳಚಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದರು

ಬುಧವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೆಸ್ಸೆಸ್‌ ರಾಷ್ಟ್ರೀಯ ಕಾರ್ಯ­ಕಾರಿಣಿ ಸಮಿತಿ ಸದಸ್ಯ ರಾಮ್‌ ಮಾಧವ್‌ ಅವರು, ‘370ನೇ ವಿಧಿ ರದ್ದು ಮಾಡಿದಲ್ಲಿ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿ ಉಳಿಯುವುದಿಲ್ಲವೇ? ಒಮರ್‌ ಅದನ್ನು ತಮ್ಮ ಅಪ್ಪನ ಎಸ್ಟೇಟ್‌ ಎಂದು ಭಾವಿಸಿದ್ದಾರೆಯೇ? 370 ಇರಲಿ, ಇಲ್ಲದೇ ಇರಲಿ ಕಾಶ್ಮೀರ ಭಾರತ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಜಿತೇಂದ್ರ ಮೌನಕ್ಕೆ ಶರಣು:ವಿವಾದದ ಕೇಂದ್ರ­ಬಿಂದು­ವಾಗಿರುವ ಸಚಿವ ಜಿತೇಂದ್ರ ಸಿಂಗ್ ಈಗ ಮೌನ ತಳೆದಿದ್ದಾರೆ.  ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿ­ಸಿದ ಕಾರ್ಯಕ್ರಮದಲ್ಲಿ ಬುಧವಾರ  ಭಾಗವಹಿಸಿದ್ದ ಅವರು ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸದೇ ನುಣುಚಿಕೊಂಡರು. ಇಲ್ಲಿ ಕೇವಲ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಾತ್ರ ಮಾತನಾಡಬೇಕು ಎಂದರು.

ಟೀಕೆ: ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಅವರೂ ಸಚಿವ ಸಿಂಗ್‌ ಅವರ ಹೇಳಿಕೆಯನ್ನು ಖಂಡಿಸಿದ್ದು, ರಾಜಕೀಯ ಧ್ರುವೀಕರಣಕ್ಕಾಗಿ ಕತ್ತಲೆಯಲ್ಲಿ ಬಾಣ ಬಿಟ್ಟಂತೆ ಇಂತಹ ಹೇಳಿಕೆ ನೀಡಲಾಗಿದೆ ಎಂದು ಟೀಕಿಸಿದ್ದಾರೆ.

370ನೇ ವಿಧಿ, ಕಾಶ್ಮೀರವನ್ನು ಭಾರತದ ಜತೆ ಜೋಡಿಸುವ ಜೀವತಂತು  ಎಂದು ಬಣ್ಣಿಸಿರುವ ಸಿಪಿಐ, ಈ ಕುರಿತು ಕೇಂದ್ರ ಯಾವುದೇ ತರಾತುರಿಯ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದೆ.

ಅಸಾಧ್ಯದ ಮಾತು
‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು, ಸಂವಿಧಾನ ರಚನಾ ಸಮಿತಿ. ಈ ಸೌಲಭ್ಯವನ್ನು ಹಿಂತೆಗೆದುಕೊಳ್ಳುವ ಅಧಿಕಾರ ಇರು­ವುದು ಈ ಸಮಿತಿಗೆ ಮಾತ್ರ. ಇದಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಮಿತಿ ಪುನಃ ಸಭೆ ಸೇರಬೇಕು. ಇದರಿಂದಾಗಿ ಕೇಂದ್ರದಲ್ಲಿನ ಬಿಜೆಪಿ ಸರ್ಕಾರಕ್ಕೆ  370ನೇ ವಿಧಿ ರದ್ದು ಮಾಡುವುದು ಅಸಾಧ್ಯದ ಮಾತು.
-ಒಮರ್‌ ಅಬ್ದುಲ್ಲಾ,ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ

370ನೇ ವಿಧಿಯಲ್ಲಿ ಏನಿದೆ?
ಈ ವಿಧಿಯ ಪ್ರಕಾರ ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು ಹಾಗೂ ಸಂವಹನದ ಹೊರತಾಗಿ ಇತರೆಲ್ಲ ಕಾಯ್ದೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತರಬೇಕಾದರೆ ರಾಜ್ಯದ ಅನುಮತಿ ಅಗತ್ಯ.

ಪೌರತ್ವ, ಆಸ್ತಿಯ ಮೇಲಿನ ಹಕ್ಕು ಹಾಗೂ ಮೂಲಭೂತ ಹಕ್ಕುಗಳು ಸೇರಿದಂತೆ  ಇಲ್ಲಿನ ನಿವಾಸಿಗಳಿಗೆ ಪ್ರತ್ಯೇಕ ಕಾಯ್ದೆಗಳೇ ಅನ್ವಯ­ವಾಗುತ್ತವೆ.  ಹಾಗಾಗಿ ಭಾರತದ ಇತರ ರಾಜ್ಯಗಳ ನಿವಾಸಿಗಳು ಇಲ್ಲಿ ಭೂಮಿ ಅಥವಾ ಇತರ ಆಸ್ತಿ ಖರೀದಿಸುವಂತಿಲ್ಲ.  ಹಾಗೆಯೇ, ಕೇಂದ್ರ ಸರ್ಕಾರವು ಸಂವಿಧಾನದ 360ನೇ ವಿಧಿಯಂತೆ ಇಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ. ಆಂತರಿಕ ಗಲಭೆ­ಗಳಾದಾಗಲೂ ತುರ್ತುಸ್ಥಿತಿ ಘೋಷಿಸು­ವಂತಿಲ್ಲ. ಯುದ್ಧ ಅಥವಾ ವಿದೇಶಿ ಆಕ್ರಮಣದ ಸಂದರ್ಭ­ದಲ್ಲಿ ಮಾತ್ರ ತುರ್ತುಪರಿಸ್ಥಿತಿ ಘೋಷಿಸ­ಬಹುದಾಗಿದೆ.

ಇತಿಹಾಸ:  ಈ ವಿಧಿಯ ನಿಯಮಾವಳಿಗಳನ್ನು 1947ರಲ್ಲಿ ಕಾಶ್ಮೀರದ ಪ್ರಧಾನಿಯಾಗಿದ್ದ ಶೇಖ್‌ ಅಬ್ದುಲ್ಲಾ ರೂಪಿಸಿದ್ದರು. ಈ ವಿಧಿಯನ್ನು ತಾತ್ಕಾಲಿಕ ನಿಯಮಾವಳಿಯಾಗಿ ಇಡಬಾರದು. ಕಾಶ್ಮೀರಕ್ಕೆ ಸಂಪೂರ್ಣ ಸ್ವಾಯ­ತ್ತತೆ ನೀಡಬೇಕು ಎಂದು ಶೇಖ್‌ ಅಬ್ದುಲ್ಲಾ ವಾದಿಸಿದ್ದರು. ಆದರೆ, ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.