ADVERTISEMENT

ಚಿನ್ನದ ಆಮದು ನಿರ್ಬಂಧ ತೆರವಿಗೆ ಸಲಹೆ

ರಾಷ್ಟ್ರೀಯ ಸಾಮಾನ್ಯ ಮಾರುಕಟ್ಟೆ ಸ್ಥಾಪನೆಗೆ ಬಂಡವಾಳ: ಆರ್ಥಿಕ ಸಮೀಕ್ಷೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 19:30 IST
Last Updated 27 ಫೆಬ್ರುವರಿ 2015, 19:30 IST

ನವದೆಹಲಿ (ಪಿಟಿಐ): ದೇಶದ ವಾಣಿಜ್ಯ ಮತ್ತು ವಹಿವಾಟು ಕ್ಷೇತ್ರಕ್ಕೆ ಉತ್ತೇಜನ ನೀಡಲು ವಿದೇಶಗ­ಳಿಂದ ಚಿನ್ನವನ್ನು ಆಮದು ಮಾಡಿ­ಕೊಳ್ಳಲು ಇರುವ ನಿರ್ಬಂಧ­ಗಳನ್ನು ತೆಗೆದು ಹಾಕುವಂತೆ ಸಂಸತ್‌ನಲ್ಲಿ ಶುಕ್ರವಾರ ಮಂಡಿಸಲಾದ ಪ್ರಸಕ್ತ ವರ್ಷದ ಆರ್ಥಿಕ ಸಮೀಕ್ಷೆ ಮಹತ್ವದ ಸಲಹೆ ಮಾಡಿದೆ.

‘ಚಿನ್ನದ ಆಮದು ಕಠಿಣ ಕಟ್ಟಳೆಗಳನ್ನು ತೆಗೆದು ಹಾಕಲು ಇದು ಸಕಾಲ’ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ತೈಲ, ಚಿನ್ನ ಮತ್ತು ಬೆಳ್ಳಿಯ ಆಮದು ಕಡಿಮೆಯಾಗಿರುವುದು ವಿದೇಶ ವಹಿವಾಟು ಕುಸಿಯಲು ಕಾರಣ.

ರಫ್ತು ವ್ಯವಹಾರ ಹೆಚ್ಚಾದರೂ, ಆಮದು ವ್ಯವಹಾರ ಕುಂಠಿತಗೊಂಡ ಕಾರಣ 2012–13ರಲ್ಲಿ ₹ 11 ಲಕ್ಷ 40 ಸಾವಿರ ಕೋಟಿ ರೂಪಾಯಿಯಷ್ಟು ಇದ್ದ ವಿದೇಶ ವಹಿವಾಟು 2013–14 ರವೇಳೆಗೆ ₹ 8 ಲಕ್ಷ 10 ಸಾವಿರ ಕೋಟಿ ರೂಪಾಯಿಗೆ ಕುಸಿದಿದೆ ಎಂದು ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ.

ಆಮದು ಮತ್ತು ರಫ್ತು ವಹಿವಾಟು ಮೊತ್ತದಲ್ಲಿಯ ಗಣನೀಯ  ವ್ಯತ್ಯಾಸ ಹೆಚ್ಚಳ (ಸಿಎಡಿ) ತಡೆಗಟ್ಟಲು ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 10ರಷ್ಟು ಹೆಚ್ಚಿಸಿತು. ಮತ್ತೊಂದೆಡೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಚಿನ್ನದ ಆಮದು ಮೇಲೆ ನಿಯಂತ್ರಣ ಹೇರಿತಲ್ಲದೇ ಕಠಿಣ ಷರತ್ತುಗಳನ್ನೂ ವಿಧಿಸಿತು. ಇದರಿಂದ ಚಿನ್ನದ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚಾದವು . ಚಿನ್ನದ ಆಮದು ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಿದರೆ ಎಲ್ಲ ಸಮಸ್ಯೆಗಳಿಗೆ ತೆರೆ ಬೀಳುತ್ತದೆ ಎಂದು ಸಮೀಕ್ಷೆ ಹೇಳಿದೆ.

ಸಬ್ಸಿಡಿ ಕಡಿತ, ಹೂಡಿಕೆ
ಕೃಷಿ ಹಾಗೂ ಆಹಾರ ಉತ್ಪಾದನಾ ವಲಯಕ್ಕೆ  ಉತ್ತೇಜನ ನೀಡುವ ನಿಟ್ಟಿ­ನಲ್ಲಿ ಕೃಷಿ ಸಂಶೋಧನೆ, ನೀರಾ­ವರಿಗೆ ಆದ್ಯತೆ, ಸಬ್ಸಿಡಿ ನಿಗದಿ ಹಾಗೂ ಕೃಷಿ ಉತ್ಪನ್ನಗಳಿಗೆ ರಾಷ್ಟ್ರೀಯ ಸಾಮಾನ್ಯ ಮಾರು­ಕಟ್ಟೆ ಸ್ಥಾಪನೆಗೆ ಬೃಹತ್ ಪ್ರಮಾ­ಣದ ಬಂಡವಾಳ ಹೂಡಿಕೆಯ ಅಗತ್ಯ­ವಿದೆ ಎಂದು ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿದೆ.
* * *

ಹೆದ್ದಾರಿ ಕಾಮಗಾರಿ ಪರಿಣಾಮ
ನವದೆಹಲಿ:
ಆರ್ಥಿಕ ಹಿಂಜರಿತದ ಪರಿಣಾಮ  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮ­ಗಾರಿ ಮೇಲೂ ಆಗಿದೆ ಎಂದು ಸಮೀಕ್ಷೆ ಹೇಳಿದೆ. ದೇಶದ 96,214 ಕಿ.ಮೀ ರಾಷ್ಟ್ರೀಯ ಹೆದ್ದಾ­ರಿ­­ಯಲ್ಲಿ 54,478 ಕಿ.ಮೀ ಹೆದ್ದಾರಿ­ಯನ್ನು ಚತುಷ್ಪಥ ಅಥವಾ ಷಟ್ಪಥವನ್ನಾಗಿ ಮೇಲ್ದ­ರ್ಜೆಗೆ ಏರಿಸಲು ಆಯ್ಕೆ ಮಾಡಲಾ­ಗಿತ್ತು. ಆದರೆ, 22,609 ಕಿ.ಮೀ ಕಾಮ­­ಗಾರಿ ಪೂರೈ­ಸಲು ಮಾತ್ರ ಸಾಧ್ಯವಾ­ಗಿದೆ.
* * *

ರಾಜ್ಯದ ಎಪಿಎಂಸಿಗಳಲ್ಲಿ ಆರ್‌ಇಎಂಎಸ್‌: ಶ್ಲಾಘನೆ
ನವದೆಹಲಿ:
ಕರ್ನಾಟಕದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಜಾರಿಗೊಳಿಸಿರುವ ‘ರಾಷ್ಟ್ರೀಯ ಇ–ಮಾರುಕಟ್ಟೆ ಸೇವಾ ನಿಯಮಿತ’ ವ್ಯವಸ್ಥೆಯನ್ನು (ಆರ್‌ಇಎಂಎಸ್‌) ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಶ್ಲಾಘಿಸಲಾಗಿದೆ. ಕರ್ನಾಟಕದ 155 ಮುಖ್ಯ ಎಪಿಎಂಸಿ ಗಳ ಪೈಕಿ 51 ಕಡೆ ಹಾಗೂ 354 ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ­ಗಳಲ್ಲಿ ಇದನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ­ಯಡಿ ಇವೆರಡನ್ನೂ ಸಂಯೋಜಿಸಿ ಒಂದೇ ಪರ­ವಾನಗಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
* * *

ಗುಣಮಟ್ಟದ ಶಿಕ್ಷಣ ನೀಡಿ
ಭವಿಷ್ಯದ ಉದ್ಯೋಗ ಅವಕಾಶ­ಗಳು ಮತ್ತು ಬೇಡಿ­ಕೆಗೆ ತಕ್ಕಂತೆ ಗುಣ­ಮಟ್ಟದ ಶಿಕ್ಷಣ, ಕೌಶಲ ಅಭಿವೃದ್ಧಿ ಮೂಲ ಸೌಕರ್ಯ ಮತ್ತು ಉನ್ನತ ಶಿಕ್ಷಣ ನೀತಿ ರೂಪಿಸುವ ಅಗತ್ಯವಿದೆ. 

ಭವಿಷ್ಯದ ಉದ್ಯೋಗ ಸೃಷ್ಟಿ, ಬೇಡಿಕೆ ಮತ್ತು ಪೂರೈಕೆ ಹೀಗೆ ಒಂದೊ­ಕ್ಕೊಂದು ತಾಳೆಯಾಗು­ವಂತಹ ಉದ್ಯೋಗ ಆಧಾರಿತ ಶಿಕ್ಷಣ ನೀತಿ ರೂಪಿಸಬೇಕಿದೆ.  ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮ­ನ­ದಲ್ಲಿ­ಟ್ಟುಕೊಂಡು ವಿದ್ಯಾರ್ಥಿ­ಗಳಿಗೆ ಹೊಂದಾ­ಣಿಕೆಯಾಗು­ವ ವೃತ್ತಿಪರ ಮತ್ತು ಕೌಶಲ ವೃದ್ಧಿ ಕೋರ್ಸ್‌ಗಳನ್ನು ಆರಂಭಿಸಬೇಕು ಎಂದು ಆರ್ಥಿಕ ಸಮೀಕ್ಷೆ ಸಲಹೆ ಮಾಡಿದೆ.

ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ದೇಶದ ಶೈಕ್ಷಣಿಕ ಗುಣಮಟ್ಟ ತುಂಬಾ ಕಡಿಮೆ ಇದೆ. ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಕುರಿತ ವಾರ್ಷಿಕ ವರ­ದಿಯೇ ಈ ಅಂಶವನ್ನು ಬಹಿರಂಗಪಡಿಸಿದ್ದು   ಅದರ ಪ್ರಕಾರ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇನ್ನೂ ಕಲಿಕಾ ಹಂತ ಸುಧಾ­ರಣೆಯಾಗಿಲ್ಲ ಎಂದು ಕಳವಳ ವ್ಯಕ್ತವಾಗಿದೆ.

* 2013–14 ಸಾಲಿನಲ್ಲಿ ಪ್ರಾಥಮಿಕ ಶಾಲೆ ಪ್ರವೇಶ ಪ್ರಮಾಣ ಕುಸಿದರೆ, ಮಾಧ್ಯಮಿಕ ಶಾಲೆಯಲ್ಲಿ ಈ ಪ್ರಮಾಣ ಹೆಚ್ಚಿದೆ.
* 2005–06 ರಿಂದ 2012–13ರ ಅವಧಿ­ಯಲ್ಲಿ  ಉನ್ನತ ಶಿಕ್ಷಣ ಕ್ಷೇತ್ರದ ರಾಷ್ಟ್ರೀಯ ಒಟ್ಟು ಪ್ರವೇಶ ಸರಾಸರಿ (ಜಿಇಆರ್‌) ಶೇ 11.6ರಿಂದ 21.1ಕ್ಕೆ ಏರಿದ್ದು, ಬಹುತೇಕ ದುಪ್ಪಟ್ಟಾಗಿದೆ.
2005–06ರ ಅವಧಿಯಲ್ಲಿ 1.40 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದರೆ, 2012–13ರಲ್ಲಿ ಮೂರು ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದರು.
* ಅರ್ಧದಲ್ಲಿಯೇ  ಶಾಲೆಬಿಟ್ಟವರ ಪ್ರಮಾಣ­ದಲ್ಲಿ ಹೆಚ್ಚಳ ಮತ್ತು ಉನ್ನತ ವ್ಯಾಸಂಗದ ಕೊರ­ತೆಯಿಂದಾಗಿ ಕೌಶಲ ಮತ್ತು ವೃತ್ತಿಪರ ಉದ್ಯೋಗಿಗಳ ಪ್ರಮಾಣ ಇಳಿಮುಖ­ವಾಗಿದೆ.
* ಮಕ್ಕಳ ಜನನ ಪ್ರಮಾಣದಲ್ಲಿಯ  ಇಳಿ­ಮುಖ­ದಿಂದಾಗಿ ಜನಸಂಖ್ಯಾ ಪ್ರಮಾಣ­ದಲ್ಲಿ ಅಸಮತೋಲನ ಮತ್ತು  ಪ್ರಾಥಮಿಕ ಶಾಲಾ ಪ್ರವೇಶಾತಿ ಏರಿಳಿತಕ್ಕೆ ಕಾರಣ­ವಾಗಿದೆ. ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕವಾದ ಬೆಳವಣಿಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.