ADVERTISEMENT

ಚುನಾವಣಾ ಆಯೋಗಕ್ಕೆ ನೋಟಿಸ್‌

ಚುನಾವಣಾ ವೆಚ್ಚ: ಎಡಿಆರ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 28 ಮೇ 2014, 19:30 IST
Last Updated 28 ಮೇ 2014, 19:30 IST

ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 28ರ ಒಳಗಾಗಿ ಉತ್ತರಿಸುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿದೆ.

ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ಕೋರಿ ಜನತಂತ್ರ ಸುಧಾರಣೆ ಸಂಘಟನೆ (ಎಡಿಆರ್‌) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಮತದಾನದ ದಿನಕ್ಕಿಂತ ಒಂದು ವರ್ಷದ ಮೊದಲಿನಿಂದ ಫಲಿತಾಂಶ ಪ್ರಕಟವಾಗುವ ದಿನದವರೆಗಿನ ಚುನಾ­ವಣಾ ಖರ್ಚು, ವೆಚ್ಚಗಳ ಲೆಕ್ಕಪತ್ರ­ಗಳನ್ನು ರಾಜಕೀಯ ಪಕ್ಷಗಳು ನಿಯಮಿತ­ವಾಗಿ ನೀಡುವ ವ್ಯವಸ್ಥೆ ಜಾರಿಗೊಳಿಸು­ವಂತೆ ಎಡಿಆರ್‌ ಕೋರಿದೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆ ಘೋಷಣೆ­ಯಾಗುವ ಸಾಕಷ್ಟು ಮೊದಲೇ ರಾಜಕೀಯ ಪಕ್ಷಗಳು ಪ್ರಚಾರ ಆರಂಭಿಸಿದ್ದವು. ಸದ್ಯ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಮಿತಿ ಇದೆಯೇ ಹೊರತೂ ರಾಜಕೀಯ ಪಕ್ಷಗಳ ವೆಚ್ಚ­ಗಳ ಮೇಲೆ ಯಾವುದೇ ಮಿತಿ ಇಲ್ಲ. ಇದರಿಂದಾಗಿ ರಾಜಕೀಯ ಪಕ್ಷಗಳ ವಾಸ್ತವ ಚುನಾವಣಾ ವೆಚ್ಚ ಲೆಕ್ಕಕ್ಕೆ ಸಿಗುವುದಿಲ್ಲ.

ವಿಧಾನಸಭೆ ಚುನಾವಣೆ ಮುಗಿದ 75 ದಿನ ಮತ್ತು ಲೋಕಸಭಾ ಚುನಾವಣೆ ಮುಗಿದ 90 ದಿನಗಳ ನಂತರ ಚುನಾವಣಾ ವೆಚ್ಚಗಳ ಲೆಕ್ಕಪತ್ರ ನೀಡುವ ಪದ್ಧತಿ ಚಾಲ್ತಿಯಲ್ಲಿದೆ. ಈ ಅವಧಿಯ ನಂತರ ಲೆಕ್ಕಪತ್ರ ಪರಿಶೀಲನೆ ಕಷ್ಟದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.