ADVERTISEMENT

ದಡ ಸೇರಿಸುವಲ್ಲಿ ಸೋತ ‘ಅಲೆ’: ಸೇನೆ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 11:00 IST
Last Updated 20 ಅಕ್ಟೋಬರ್ 2014, 11:00 IST

ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಒಂದು ದಿನದ ಬೆನ್ನಲ್ಲೇ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಪ್ರಚಾರದ ವೇಳೆ ಇದ್ದ ‘ಅಲೆ’ ದಡ ಸೇರುವ ಮುನ್ನವೇ ಬಲ ಕಳೆದುಕೊಂಡಿತು ಎಂದು ಟೀಕಿಸಿದೆ. ಅಲ್ಲದೇ ವಿಧಾನಸಭೆ ಅತಂತ್ರವಾಗಿರುವ ಹಿನ್ನೆಲೆ ಸರ್ಕಾರದ ಸ್ಥಿರತೆಯ ಬಗೆಗೂ ಅನುಮಾನ ವ್ಯಕ್ತಪಡಿಸಿದೆ.

‘ಬಿಜೆಪಿ–ಶಿವಸೇನೆಯ ಮೈತ್ರಿ ಮುರಿದಿದ್ದು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ನಾಲ್ಕು ಅಥವಾ ಐದು ಕೋನದ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿಗೆ ಲಾಭವಾಯಿತು. ಅದರಂತೆಯೇ ಕಾಂಗ್ರೆಸ್‌  ಹಾಗೂ ಎನ್‌ಸಿಪಿಗೂ. ಲೋಕಸಭೆಯ ಫಲಿತಾಂಶ ನೋಡಿದರೆ ಕಾಂಗ್ರೆಸ್‌ –ಎನ್‌ಸಿಪಿ ಪಕ್ಷಗಳು ಜತೆಯಾಗಿ 25 ಸ್ಥಾನಗಳನ್ನೂ ಗೆಲ್ಲಬಾರದು’ ಎಂದು ತಮ್ಮ ಮುಖವಾಣಿ ‘ಸಾಮ್ನಾ’ದ ಸೋಮವಾರದ ಸಂಪಾದಕೀಯದಲ್ಲಿ  ಶಿವಸೇನೆ ಅಭಿಪ್ರಾಯ ಪಟ್ಟಿದೆ.

‘ಯಾವುದೇ ಪಕ್ಷಕ್ಕೆ ಬಹುಮತ ದೊರಕಿಲ್ಲ. ಅಸ್ಥಿರತೆಯಿಂದಾಗಿ ಸರ್ಕಾರ ಉಳಿವಿನ ಬಗೆಗೆ ಸಂದೇಹಗಳಿವೆ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ADVERTISEMENT

ಬಿಜೆಪಿ ಹಾಗೂ ಮೋದಿ ಅವರ ವಿರುದ್ಧ  ಸಂಪಾದಕೀಯದಲ್ಲಿ ಹರಿಹಾಯ್ದಿರುವ ಶಿವಸೇನೆ, ‘ಅಲೆಯಲ್ಲಿ ನೊರೆ ಹೆಚ್ಚು ಹಾಗೂ ನೀರು ಕಡಿಮೆ ಇತ್ತು’ ಎಂದು ಜರೆದಿದೆ.

‘ಜನರು ಯಾವುದೇ ಪಕ್ಷಕ್ಕೆ ಬಹುಮತ ನೀಡಿಲ್ಲ. ಅದಾಗ್ಯೂ, ಒಂದು ವೇಳೆ ಜನರು ಅವರ ಗೆಲುವಿನ ಕಹಳೆ ಊದುತ್ತಿದ್ದಾರೆ. ನಾವು ಅವರನ್ನು ಅಭಿನಂದಿಸುತ್ತೇವೆ. ಮಹಾರಾಷ್ಟ್ರಕ್ಕೆ ನಾವು ಮಾಡುವ ಸೇವೆ ಮುಂದುವರಿಯಲಿದೆ. ಏಕೆಂದರೆ ಶಿವಸೇನೆಯು ಉದ್ದೇಶಕ್ಕಾಗಿ ಹುಟ್ಟಿದ ಪಕ್ಷ. ಚುನಾವಣೋತ್ತರ ಸ್ಥಿತಿ ಬಗೆಗಿನ ನಮ್ಮ ದೃಷ್ಟಿಕೋನ/ಅಭಿಮತಕ್ಕಿಂತಲೂ ಅತಂತ್ರ ತೀರ್ಪಿನಿಂದಾಗಿ ಜನರು ಸಂತೋಷವಾಗಿದ್ದಾರೆಯೇ? ಎಂದು ಪ್ರಶ್ನಿಸಲು ಎಂದು ನಾವು ಇಚ್ಛಿಸುತ್ತೇವೆ’ ಎಂದೂ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಬಲಿಷ್ಠ ಹಾಗೂ ಸಂಘಟಿತ ಮಹಾರಾಷ್ಟ್ರಕ್ಕಾಗಿ ಶಿವಸೇನೆಯು ‘ಇಬ್ಬರು ಪ್ರಬಲ ಆಡಳಿತಗಾರರ’ ವಿರುದ್ಧ ಏಕಾಂಗಿಯಾಗಿ ಹೋರಾಡಿದೆ ಎಂದು ಅದು ಹೇಳಿಕೊಂಡಿದೆ.

‘ಬಿಜೆಪಿಯು ಪ್ರಧಾನಿ ಹಾಗೂ ರಾಜ್ಯವನ್ನು ಪ್ರತಿನಿಧಿಸಿರುವ ಅವರ ಇಡೀ ಸಂಪುಟವೂ ಸೇರಿದಂತೆ ತಮ್ಮ ಆಡಳಿತದ ರಾಜ್ಯಗಳಿಂದ ಮುಖಂಡರನ್ನು ಕರೆ ತಂದಿತ್ತು. ಇವೆಲ್ಲವೂಗಳ ಹೊರತಾಗಿಯೂ ಶಿವಸೇನೆ ಮಾಡಿದ ಸಾಧನೆ ಅಮೂಲ್ಯ. ಚುನಾವಣಾ ಪ್ರಚಾರದ ವೇಳೆ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದಾಗಿ ಶಿವಸೇನೆಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದುಕೊಂಡಿದ್ದೆವು’ ಎಂದೂ ಸಂಪಾದಕೀಯದಲ್ಲಿ ಸೇನೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.