ADVERTISEMENT

ಪಾಲಿಕೆ–ನಿವಾಸಿಗಳ ಸಂಘರ್ಷ ಅಂತ್ಯ

ಮುಂಬೈ ಕ್ಯಾಂಪಾ ಕೋಲಾ ವಸತಿಗೃಹ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಮುಂಬೈ (ಪಿಟಿಐ): ಕ್ಯಾಂಪಾ ಕೋಲಾ ವಸತಿ ಸಂಕೀರ್ಣದ ಅಕ್ರಮ ಫ್ಲ್ಯಾಟ್‌ಗಳಿಗೆ ವಿದ್ಯುತ್‌, ನೀರು ಮತ್ತು ಅಡುಗೆ ಅನಿಲ ಸಂಪರ್ಕ ಮಾರ್ಗ ಕಡಿತ­ಗೊಳಿ­ಸಲು ಮುಂಬೈ ಮಹಾನಗರ ಪಾಲಿ­­ಕೆಯ ಸಿಬ್ಬಂದಿಗೆ ಕೊನೆಗೂ ಅಲ್ಲಿಯ ನಿವಾಸಿಗಳು  ಒಪ್ಪಿಗೆ ನೀಡಿದ್ದಾರೆ.
ಇದರಿಂದಾಗಿ ಮೂರು ದಿನಗಳಿಂದ ಪಾಲಿಕೆಯ ಸಿಬ್ಬಂದಿ ಜತೆ ಕ್ಯಾಂಪಾ ಕೋಲಾ ನಿವಾಸಿಗಳು  ನಡೆಸಿದ್ದ ಸಂಘರ್ಷ ಸುಖಾಂತ್ಯಗೊಂಡಿದೆ.

ಪಾಲಿಕೆ ಸಿಬ್ಬಂದಿ ಸೋಮವಾರ ಬೆಳಿಗ್ಗೆ 11ಗಂಟೆಗೆ ವಸತಿ ಸಂಕೀರ್ಣ  ಪ್ರವೇಶಿಸಿ ಅಕ್ರಮ ಫ್ಲ್ಯಾಟ್‌ಗಳಿಗೆ ವಿದ್ಯುತ್‌, ನೀರು ಮತ್ತು ಅನಿಲ ಸಂಪರ್ಕ ಮಾರ್ಗ ಕಡಿತಗೊಳಿಸಲಿದ್ದಾರೆ.
 

ಏನಿದು ಕ್ಯಾಂಪಾ ಕೋಲಾ ಪ್ರಕರಣ?
ದಕ್ಷಿಣದ ಮುಂಬೈನ ಪ್ರತಿಷ್ಠಿತ ವರ್ಲಿ ಪ್ರದೇಶದಲ್ಲಿ ನಿರ್ಮಿಸಲಾದ ಕ್ಯಾಂಪಾ ಕೋಲಾ ವಸತಿ ಸಂಕೀರ್ಣ­ದಲ್ಲಿ 102 ಫ್ಲ್ಯಾಟ್‌­ಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸ­ಲಾಗಿತ್ತು. ಅಕ್ರಮ ಫ್ಲ್ಯಾಟ್‌ ಖಾಲಿ ಮಾಡಲು ಸುಪ್ರೀಂ ಕೋರ್ಟ್‌ ಮೇ 31ರ ಗಡುವು ನೀಡಿತ್ತು. ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಜೂನ್‌ 20ರೊಳಗೆ ಫ್ಲ್ಯಾಟ್‌ ಖಾಲಿ ಮಾಡಲು ಅಲ್ಲಿಯ ನಿವಾಸಿಗಳಿಗೆ ನೋಟಿಸ್‌ ನೀಡಿತ್ತು.
ಗಡುವು ಕೊನೆಗೊಂಡ ನಂತರ  ಫ್ಲ್ಯಾಟ್‌ ಖಾಲಿ ಮಾಡದ ನಿವಾಸಿಗಳು ಪಾಲಿಕೆ ಸಿಬ್ಬಂದಿ­ಯನ್ನು ಒಳ ಪ್ರವೇಶಿಸ­ದಂತೆ ತಡೆ­ದಿದ್ದರು. ಮೂರು ದಿನಗಳಿಂದ ಸಿಬ್ಬಂದಿ ಜತೆ ಸಂಘರ್ಷಕ್ಕೆ ಇಳಿದಿದ್ದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಅವರನ್ನು   ಕ್ಯಾಂಪಾ ಕೋಲಾ ನಿವಾಸಿಗಳು  ಭೇಟಿ­ಯಾಗಿ­ದ್ದರು. ಸುಪ್ರೀಂಕೋರ್ಟ್‌ ಆದೇಶ ಪಾಲಿಸುತ್ತಿರುವ ಪಾಲಿಕೆ ಸಿಬ್ಬಂದಿ ಜತೆ ಸಹಕರಿಸುವಂತೆ ಮನವಿ ಮಾಡಿಕೊಂಡ ಚವಾಣ್‌, ನಿವಾಸಿಗಳ ಮನವೊಲಿಸಲು  ಸಫಲರಾದರು.

ಅಕ್ರಮ  ಫ್ಲ್ಯಾಟ್‌ಗಳನ್ನು ತೆರವುಗೊಳಿಸಿದಲ್ಲಿ ಕ್ಯಾಂಪಾ ಕೋಲಾ ವಸತಿ ಸಂಕೀರ್ಣಕ್ಕೆ ಕಾನೂನು ಪ್ರಕಾರ ಎಷ್ಟು  ‘ಎಫ್‌ಎಸ್‌ಐ’ (ನಿವೇಶನದ ಒಟ್ಟು ವಿಸ್ತೀರ್ಣ   ಹಾಗೂ ಕಟ್ಟಡ ನಿರ್ಮಿಸಲು ಅನುಮತಿ ಇರುವ ಜಾಗದ ಅನುಪಾತ)  ಪಡೆಯಲು ಅವಕಾಶ ಇದೆಯೋ ಅಷ್ಟು ಹೆಚ್ಚುವರಿ ಜಾಗ ನೀಡುವುದಾಗಿ ಚವಾಣ್ ಭರವಸೆ ನೀಡಿದರು.  ಮುಖ್ಯಮಂತ್ರಿ ಭರವಸೆ ನಂತರ ಪಾಲಿಕೆ ಸಿಬ್ಬಂದಿಗೆ ಒಳ ಪ್ರವೇಶಿಸಲು ಅನುಮತಿ ನೀಡಲು ನಿವಾಸಿಗಳು ಒಪ್ಪಿಕೊಂಡರು.  ಇದ­ರಿಂದ ಮೂರು ದಿನಗಳಿಂದ ನಡೆದಿದ್ದ ನಾಟಕೀಯ ಬೆಳವಣಿಗೆಗಳಿಗೆ ತೆರೆ ಬಿದ್ದಿತು.

‘ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕೇವಲ ವಿದ್ಯುತ್‌, ನೀರು ಹಾಗೂ ಅನಿಲ ಪೂರೈಕೆಯನ್ನು ಮಾತ್ರ ಕಡಿತಗೊಳಿಸುವುದಾಗಿ ಪಾಲಿಕೆ ಸಿಬ್ಬಂದಿ ಭರವಸೆ ನೀಡಿದೆ. ಅಕ್ರಮವಾಗಿ ನಿರ್ಮಿಸಲಾಗಿರುವ 102 ಫ್ಲ್ಯಾಟ್‌  ನೆಲಸಮಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ’ ಎಂದು ಕ್ಯಾಂಪಾ ಕೋಲಾ ನಿವಾಸಿಗಳ ಸಂಘ ಹೇಳಿದೆ.

ರಾಷ್ಟ್ರಪತಿಗಳ ನೆರವು ಕೋರಿ ಪತ್ರ ಬರೆದಿದ್ದು, ಅವರ ಪ್ರತಿಕ್ರಿಯೆ ಬರು­ವವ­ರೆಗೂ ಕಾಲಾವಕಾಶ ನೀಡುವಂತೆ ನಿವಾಸಿಗಳು ಪ್ರತಿರೋಧ ಒಡ್ಡಿದ್ದರು.  ‘ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ­ದರೆ ಪೊಲೀಸ್‌ ಬಲವನ್ನು ಪ್ರಯೋ­ಗಿ­ಸಲು ಹಿಂಜರಿಯುವುದಿಲ್ಲ’ ಎಂದು ಪಾಲಿಕೆ ಸಿಬ್ಬಂದಿ  ಕೊನೆಯ ಅಸ್ತ್ರವನ್ನು ಪ್ರಯೋಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT