ADVERTISEMENT

ಪ್ರಶಸ್ತಿ ಹಿಂದಿರುಗಿಸಿದ ಸಾರಾ ಜೋಸೆಫ್

ಕೋಮುವಾದ; ದಾದ್ರಿ ಘಟನೆಗೆ ಸಾಹಿತ್ಯ ವಲಯದ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2015, 19:30 IST
Last Updated 10 ಅಕ್ಟೋಬರ್ 2015, 19:30 IST

ತಿರುವನಂತಪುರ (ಪಿಟಿಐ): ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕೋಮುವಾದ ನೀತಿಯನ್ನು ವಿರೋಧಿಸಿ  ಮಲಯಾಳಂ ಲೇಖಕಿ ಸಾರಾ ಜೋಸೆಫ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.

ಖ್ಯಾತ ಮಲಯಾಳಂ ಕವಿ ಕೆ.ಸಚ್ಚಿದಾನಂದನ್ ಅವರು ಅಕಾಡೆಮಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಾರಾ ಜೋಸೆಫ್ ‘ಆಲಾಹಯುಡೆ ಪೆಣ್ಮಕ್ಕಳ್‌’ ಕಾದಂಬರಿಗೆ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.

ಅಕಾಡೆಮಿ ನೀಡಿದ ನಗದು ಮತ್ತು ಫಲಕವನ್ನು ಕೋರಿಯರ್ ಮೂಲಕ ವಾಪಸ್ ಮಾಡುತ್ತಿದ್ದೇನೆ ಎಂದು  ಅವರು ತಿಳಿಸಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಧಾರ್ಮಿಕ ಸೌಹಾರ್ದ ಮತ್ತು ದೇಶದ ಜಾತ್ಯತೀತ ತತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಈಗಾಗಲೇ ಮೂವರು ಲೇಖಕರ ಹತ್ಯೆಯಾಗಿದೆ. ಲೇಖಕ ಭಗವಾನ್ ಅವರಿಗೆ ಬೆದರಿಕೆ ಹಾಕಲಾಗಿದೆ. ಆದರೆ ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರ ರಕ್ಷಣೆಗೆ ಕೇಂದ್ರ ಸರ್ಕಾರ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು  ದೂರಿದ್ದಾರೆ.

ದಾದ್ರಿ ಹತ್ಯೆಯ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿರುವ ಮೋದಿ ಕ್ರಮವನ್ನು ಟೀಕಿಸಿರುವ ಅವರು, ಜನರ ಆಹಾರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವ ಮೂಲಕ ಮೂಲಭೂತ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಅಬ್ಬಾಸ್ ಘೋಷಣೆ: (ಮುಂಬೈ ವರದಿ) ದಾದ್ರಿ ಹತ್ಯೆಯನ್ನು ಪ್ರತಿಭಟಿಸಿ ಉರ್ದು ಕಾದಂಬರಿಕಾರ ರಹಮಾನ್ ಅಬ್ಬಾಸ್ ಅವರು ಮಹಾರಾಷ್ಟ್ರ ಉರ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ. ‘ಅಕಾಡೆಮಿಯ ಕಚೇರಿಗೆ ಶನಿವಾರ ರಜೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಸೋಮವಾರ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.