ADVERTISEMENT

ಬಿಜೆಪಿ ಪುನರ್ರಚನೆ

ಬಿಎಸ್‌ವೈ ಉಪಾಧ್ಯಕ್ಷ; ವರುಣ್‌ಗೆ ಕೊಕ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2014, 19:30 IST
Last Updated 16 ಆಗಸ್ಟ್ 2014, 19:30 IST

ನವದೆಹಲಿ: ಸಂಸದ ಮತ್ತು ಕರ್ನಾಟ­ಕದ ಹಿರಿಯ ಮುಖಂಡ ಬಿ.ಎಸ್‌. ಯಡಿ­ಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ­ಗೊಂಡಿದ್ದಾರೆ.

ಅಧಿಕಾರ ಸ್ವೀಕರಿ­ಸಿದ ವಾರದೊಳಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಶನಿವಾರ ಪದಾಧಿ­ಕಾರಿ­ಗಳ ತಂಡ­ವನ್ನು ಪುನರ್ರಚಿ­ಸಿದ್ದು, ನೆಹರು–  ಗಾಂಧಿ ಕುಟುಂಬದ ಸದಸ್ಯ ವರುಣ್‌ ಗಾಂಧಿ ಅವರನ್ನು ಪ್ರಧಾನ ಕಾರ್ಯ­ದರ್ಶಿ ಸ್ಥಾನದಿಂದ ಕೈಬಿಟ್ಟಿದ್ದಾರೆ. ಯಡಿಯೂರಪ್ಪ ಅವರ ಸಂಘಟನಾ ಸಾಮರ್ಥ್ಯ ಅರಿತೇ ಅವರನ್ನು ಉಪಾ­ಧ್ಯಕ್ಷ­ರಾಗಿ ನೇಮಕ ಮಾಡ­ಲಾ­ಗಿದ್ದು, ಅವರು ಷಾ ಅವರ ತಂಡ ಸೇರಿರುವ ಕರ್ನಾಟಕದ ಏಕೈಕ ಹಿರಿಯ ನಾಯಕ. ಇವರ ಜೊತೆ ರಾಜ್ಯದಿಂದ ಸಂತೋಷ್‌ ಮತ್ತು ಸತೀಶ್‌ ಅವರನ್ನು ಸಂಘಟನಾ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.

ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಪುತ್ರ ಸುಲ್ತಾನ್‌ಪುರ ಕ್ಷೇತ್ರದ ಲೋಕಸಭೆ ಸದಸ್ಯ ವರುಣ್‌ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ಮೇನಕಾ ಇತ್ತೀಚೆಗೆ ‘ಫಿಲಿಬೀಟ್‌’ನಲ್ಲಿ ನಡೆದ ಸಮಾರಂಭ­ವೊಂದ­ರಲ್ಲಿ ಉತ್ತರ ಪ್ರದೇಶದ ಮುಖ್ಯ­ಮಂತ್ರಿ ಸ್ಥಾನಕ್ಕೆ ತಮ್ಮ ಮಗ ಯೋಗ್ಯ ಅಭ್ಯರ್ಥಿ ಎಂದು ಹೇಳುವ ಮೂಲಕ ತಮ್ಮ ಅಂತರಂಗದ ಬಯಕೆಯನ್ನು ಹೊರ ಹಾಕಿದ್ದರು.

ವರುಣ್‌ ಅವರನ್ನು ಪದಾಧಿಕಾರಿ ಸ್ಥಾನ­­ದಿಂದ ಕೈಬಿಡುವ ಮೂಲಕ  ಬಿಜೆಪಿಗೆ ಗಾಂಧಿ ಕುಟುಂಬದ ಸದ­ಸ್ಯರೂ ಸೇರಿದಂತೆ ಯಾರೂ ಅನಿ­ವಾರ್ಯ­ವಲ್ಲ ಎನ್ನುವ ಸಂದೇಶ ಕಳು­ಹಿ­ಸ­ಲಾಗಿದೆ. ಅಮಿತ್‌ ಷಾ ಅವರ ತಂಡ­ದಲ್ಲಿ ಕೆಲವ­ರನ್ನು ಬಿಟ್ಟರೆ ಉಳಿದವ­ರೆಲ್ಲರೂ ಹೊಸ ಮುಖ­ಗಳು. ಬಿಜೆಪಿ ಅಧ್ಯಕ್ಷರು ಹೊಸ ಚಿಗುರು ಮತ್ತು ಹಳೇ ಬೇರು­ಗಳನ್ನು ಒಟ್ಟು­­ಗೂಡಿ­ಸಿ­ಕೊಂಡು ಪಕ್ಷ ಬಲ­ಗೊಳಿ­ಸುವ ಸಾಹಸಕ್ಕೆ ಮುಂದಾಗಿದ್ದಾರೆ.

ಬಿಜೆಪಿಯೊಳಗೆ ಮೊದಲ ಬಾರಿಗೆ ಗುಂಪು­ಗಾರಿಕೆಗೆ ಅವಕಾಶವಿಲ್ಲದಂತೆ ಪದಾಧಿಕಾರಿಗಳನ್ನು ನೇಮಕ ಮಾಡ­ಲಾಗಿದೆ. ಬಹುತೇಕ ಪದಾಧಿಕಾರಿಗಳು ಹೊಸಬರಾಗಿದ್ದರೂ, ಎಲ್ಲರ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಷಾ ಅವ­ರಿಗೆ  ಮಾಹಿತಿ ಇದೆ. ಅದನ್ನು ನೋಡಿ­ಕೊಂಡೇ ಯಾರಿಗೆ ಯಾವ ಹುದ್ದೆ ಎಂಬುದನ್ನು ತೀರ್ಮಾನಿಸ­ಲಾ­ಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಲ್ಲ ರಾಜ್ಯಗಳಿಗೂ ಪದಾಧಿಕಾರಿಗಳ ತಂಡದಲ್ಲಿ  ಪ್ರಾತಿನಿಧ್ಯ ಕಲ್ಪಿಸಲಾ­ಗಿ­ದ್ದರೂ, ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್‌ ಸೇರಿದಂತೆ ವಿಧಾನಸಭೆ ಚುನಾವಣೆಗೆ ಹೋಗಲಿರುವ ರಾಜ್ಯ­ಗಳಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ, ಬಿಹಾರದಲ್ಲಿ ಲೋಕ­ಸಭೆ ಚುನಾವಣೆ ಗೆದ್ದು ಮೇಲ್ಪಂಕ್ತಿ ಹಾಕಿ­ರುವ ಅಮಿತ್‌ ಷಾ,  ತಮ್ಮ ತಂಡದ ಉಳಿದ ಸದಸ್ಯರಿಗೂ ಚುನಾ­ವಣೆ ಗೆಲ್ಲುವ ಸವಾಲು ನೀಡಿದ್ದಾರೆ.

ಹಿಂದುಳಿದ ವರ್ಗ, ದಲಿತ ಸಮು­ದಾ­ಯ­ಗಳಿಗೆ ಪ್ರಾತಿನಿಧ್ಯ ಕೊಡುವ ಮೂಲಕ ಪಕ್ಷ ಯಾರನ್ನೂ ಕಡೆಗಣಿಸಿಲ್ಲ ಎಂದು ತೋರಿ­ಸುವ ಪ್ರಯತ್ನ ಮಾಡಿ­ದ್ದಾರೆ. ಹಿಂದುಳಿದ ವರ್ಗದ ಐವರು, ಆರು ಮಂದಿ ಮಹಿಳೆಯರಿಗೆ ಷಾ ತಮ್ಮ ತಂಡದಲ್ಲಿ ಸ್ಥಾನ  ಕಲ್ಪಿಸಿ­ದ್ದಾರೆ. ಹೊಸ ಪದಾಧಿಕಾರಿಗಳಲ್ಲಿ ಶೇ. 80ರಷ್ಟು ನಾಯಕರು 60 ವರ್ಷಕ್ಕಿಂತ ಕೆಳಗಿನ ವಯಸಿನವರು.

ಆರ್‌ಎಸ್‌ಎಸ್‌ನಿಂದ ಈಚೆಗಷ್ಟೆ ಬಿಜಿಪಿ­ ಸೇರಿದ್ದ ರಾಂ ಮಾಧವ್‌ ಅವ­ರನ್ನು ಬಿಜೆಪಿ ಪ್ರಧಾನ ಕಾರ್ಯ­ದರ್ಶಿ ಆಗಿ ನೇಮಕ ಮಾಡುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಸಮನ್ವಯತೆ ಕಾಯ್ದುಕೊಳ್ಳಲಾಗಿದೆ.

ಮೊರೆ ಈಡೇರಿಸಿದ್ದಾರೆ
ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆ­­ಯುವ ಅಪೇಕ್ಷೆಯನ್ನು ನಾನೆಂದೂ ಹೊಂದಿರಲಿಲ್ಲ. ಬದ­ಲಾಗಿ, ಪಕ್ಷ ಸಂಘಟನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಇದೀಗ ಪಕ್ಷದ ವರಿಷ್ಠರು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಿ ಬಹುದೊಡ್ಡ ಜವಾ­ಬ್ದಾರಿ ಹೊರಿಸಿದ್ದಾರೆ.
ಬಿ.ಎಸ್‌.ಯಡಿಯೂರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT