ADVERTISEMENT

ಭದ್ರತಾ ಪಡೆ– ಉಗ್ರರ ಮಧ್ಯೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

ಶಿಲ್ಲಾಂಗ್‌ : ಗಾರೊ ರಾಷ್ಟ್ರೀಯ ವಿಮೋಚನಾ ಸೇನೆ (ಜಿಎನ್‌ಎಲ್‌ಎ) ಮತ್ತು ಭದ್ರತಾ ಪಡೆಗಳ ಮಧ್ಯೆ ಮೇಘಾಲಯದ ದಕ್ಷಿಣ ಗಾರೊ ಹಿಲ್ಸ್‌ ಜಿಲ್ಲೆಯಲ್ಲಿ ಘರ್ಷಣೆ ನಡೆದಿದೆ.

‘ಸಿಮ್‌ಸ್ಯಾಂಗ್‌ ನದಿಗೆ ಹೊಂದಿಕೊಂಡಿರುವ ದುರಾಮಾ ಹಿಲ್ಸ್‌ನಲ್ಲಿ ಸುಮಾರು 40ರಿಂದ 50 ಜಿಎನ್‌ಎಲ್‌ಎ ಉಗ್ರರು ಬಿಡಾರ ಹೂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಪ್ರದೇಶದಲ್ಲಿ ಕೈಗೊಂಡಿದ್ದ ಕಾರ್ಯಾಚರಣೆ ವೇಳೆ ಘರ್ಷಣೆ ನಡೆಯಿತು’ ಎಂದು ಐಜಿಪಿ ಜಿ.ಎಚ್‌.ಪಿ. ರಾಜು ತಿಳಿಸಿದರು.

ಕಮಾಂಡೊಗಳು ಮತ್ತು ಸಿಆರ್‌ಪಿಎಫ್‌ ಕೋಬ್ರಾ ಪಡೆ ಎನ್‌ಕೌಂಟರ್‌ನಲ್ಲಿ ತೊಡಗಿದೆ ಎಂದೂ ಹೇಳಿದರು.

ಮೇಘಾಲಯದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಕೇಂದ್ರವು ಬುಧವಾರ ರಾಜ್ಯಕ್ಕೆ ತಲಾ ಐದು ಬಿಎಸ್‌ಎಫ್‌, ಸಿಆರ್‌ಪಿಎಫ್‌ ಕಂಪೆನಿಗಳನ್ನು ಕಳುಹಿಸಿಕೊಟ್ಟಿತ್ತು. ಮೇಘಾಲಯದ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ರಾಜ್ಯಕ್ಕೆ ಭದ್ರತಾ ಪಡೆಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು.

ಗಾರೊ ಜಿಲ್ಲೆಯ ರೊನ್ಗಟ್‌ ಗ್ರಾಮದಲ್ಲಿ ಮಂಗಳವಾರ ಜಿಎನ್‌ಎಲ್‌ಎ ಉಗ್ರರು ನಾಲ್ಕು ಮಕ್ಕಳ 35 ವರ್ಷದ ಬುಡಕಟ್ಟು ಮಹಿಳೆಯ ಮನೆಗೆ ನುಗ್ಗಿದ್ದರು. ಅವರ ಕುಟುಂಬ ಸದಸ್ಯರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮಹಿಳೆಯನ್ನು ಹೊರಗೆ ಎಳೆದೊಯ್ದು ಆಕೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದರು. ಇದಕ್ಕೆ ಪ್ರತಿರೋಧ ತೋರಿದ ಆಕೆಯ ತಲೆಗೆ ಗುಂಡಿಟ್ಟು ಕ್ರೂರವಾಗಿ ಹತ್ಯೆ ಮಾಡಿದ್ದರು. ಮಹಿಳೆಯು ಪೊಲೀಸ್‌ ಮಾಹಿತಿದಾರರೆಂಬ ಶಂಕೆಯಿಂದ  ಉಗ್ರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.