ADVERTISEMENT

ಮತ್ತೊಂದು ವಿವಾದದಲ್ಲಿ ಸ್ಮೃತಿ ಇರಾನಿ

ಜ್ಯೋತಿಷಿ ಭೇಟಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ನವದೆಹಲಿ: ರಾಜಸ್ತಾನದ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದಕ್ಕೆ ಮತ್ತೊಂದು ವಿವಾದದಲ್ಲಿ ಸಿಲುಕಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಟಿಆರ್‌ಪಿ ಹೆಚ್ಚಿಸಿಕೊಳ್ಳುವುದಕ್ಕಾಗಿ ವಾಹಿನಿಗಳು ತಮ್ಮ ಮೇಲೆ ಕಣ್ಣಿಟ್ಟಿವೆ ಎಂದು ಆರೋಪಿಸಿದ್ದಾರೆ.

ಸ್ಮೃತಿ ಅವರು ರಾಜಸ್ತಾನದ ಭಿಲ್ವಾರ ಜಿಲ್ಲೆಯ ಜ್ಯೋತಿಷಿ ಪಂಡಿತ್‌್ನಾಥುಲಾಲ್‌ ವ್ಯಾಸ್‌ ಅವರ ಮನೆಗೆ ತೆರಳಿದ್ದರು. ಕೆಲವು ದಿನಗಳ ಹಿಂದೆ  ಇದೇ ಜ್ಯೋತಿಷಿ ಸ್ಮೃತಿ ಅವರು ಸಚಿವೆಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

ಸ್ಮೃತಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಯಾಗುತ್ತಾರೆ ಎನ್ನುವುದು ನಾಥುಲಾಲ್‌ ವ್ಯಾಸ್‌ ಅವರ ಇತ್ತೀಚಿನ ಭವಿಷ್ಯವಾಣಿಯಾಗಿದೆ. ಸ್ಮೃತಿ ಅವರು ಜ್ಯೋತಿಷಿ ಮನೆಗೆ ಭೇಟಿ ನೀಡಿದ್ದನ್ನು ಕಾಂಗ್ರೆಸ್‌ ಟೀಕಿಸಿದೆ.

‘ಇದು ವೈಯಕ್ತಿಕ ಭೇಟಿಯಾದರೆ ಏನೂ ತೊಂದರೆ ಇಲ್ಲ. ಆದರೆ  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿ ಅವರು ಈ ರೀತಿ ಹೋಗಬಾರದು. ವೈಜ್ಞಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಮಣಿ ಶಂಕರ್‌ ಅಯ್ಯರ್‌್ ಹೇಳಿದ್ದಾರೆ. ಜೆಡಿಯು ಮುಖಂಡ  ಅಲಿ ಅನ್ವರ್‌ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.