ADVERTISEMENT

ಮಹಿಳೆಯರನ್ನು ಗೌರವಿಸಿ: ಮೋದಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2014, 19:30 IST
Last Updated 11 ಜೂನ್ 2014, 19:30 IST

ನವದೆಹಲಿ (ಪಿಟಿಐ): ಮಹಿಳೆಯರ ವಿರುದ್ಧ ನಡೆಯುವ ಅತ್ಯಾಚಾರದಂಥ ದೌರ್ಜನ್ಯ ಪ್ರಕರಣಗಳ ಬಗ್ಗೆ ಹಗುರವಾಗಿ ಮಾತ­ನಾಡುವುದನ್ನು ಮೋದಿ ಆಕ್ಷೇಪಿಸಿದ್ದಾರೆ. ‘ಇಂಥ ಪ್ರಕರಣಗಳಲ್ಲಿ ಮನೋವೈ­ಜ್ಞಾನಿಕ ವಿಶ್ಲೇಷಣೆ ಮಾಡುವುದನ್ನು ನಿಲ್ಲಿಸಿ ಎಂದು ಎಲ್ಲ ರಾಜಕೀಯ ಮುಖಂಡರಲ್ಲಿ ಮನವಿ ಮಾಡಿಕೊಳ್ಳು­ತ್ತೇನೆ.

ಇಂಥ ಹೇಳಿಕೆ ನೀಡುವುದು ಎಷ್ಟು ಸರಿ? ಸುಮ್ಮನಿರುವುದಕ್ಕೆ ಆಗುವುದಿಲ್ಲವೇ? ಮಹಿಳೆಯರ   ಗೌರವ ರಕ್ಷಣೆ ಇಡೀ ಸಮಾಜದ ಪ್ರಮುಖ ಆದ್ಯತೆ­ಯಾಗಬೇಕು’ ಎಂದು ಅವರು ಹೇಳಿದ್ದಾರೆ. ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಮೋದಿ ಅವರು ಈ ಮಾತು ಹೇಳುವಾಗ ಎಸ್‌ಪಿ ಮುಖಂಡ ಮುಲಾಯಂ ಸಿಂಗ್‌್ ಯಾದವ್‌ ಕೂಡ ಇದ್ದರು.

ಆತ್ಮಸಾಕ್ಷಿ ಕ್ಷಮಿಸದು: ಶಿವಾಜಿ ಮತ್ತು ಶಿವಸೇನಾ ಮಾಜಿ ಮುಖ್ಯಸ್ಥ ಬಾಳ ಠಾಕ್ರೆ ಅವರ ಅವ­ಹೇಳನ­ಕಾರಿ ಚಿತ್ರಗ­ಳನ್ನು ಫೇಸ್‌ಬುಕ್‌­ನಲ್ಲಿ ಪ್ರಕಟಿಸಿದ್ದಕ್ಕಾಗಿ ಪುಣೆಯಲ್ಲಿ ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿ ಶೇಖ್‌ ಮೊಹಸಿನ್‌ ಸಾದಿಕ್‌ ಎನ್ನುವವರು ಕೊಲೆಯಾದ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿರುವ ಮೋದಿ, ‘ಆತ್ಮಸಾಕ್ಷಿ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದರು. ಸಿಕ್ಕಿಂಗೆ ಹೊಗಳಿಕೆ...:  ಕೇವಲ ಸಾವಯವ ಪದಾರ್ಥಗಳನ್ನು ಉತ್ಪಾ­ದಿ­ಸುವ ಈಶಾನ್ಯ ರಾಜ್ಯ ಸಿಕ್ಕಿಂ ಸಾಧನೆ­ಯನ್ನು ಮೋದಿ ಹೊಗಳಿದರು.

ಮೋದಿ ಚಾಟಿ: ನೂತನ ಸರ್ಕಾರದ ಬಹು­ತೇಕ ಎಲ್ಲ ಕಾರ್ಯಕ್ರಮಗಳು ‘ಹೊಸ ಬಾಟಲಿಯಲ್ಲಿರುವ ಹಳೆ ಮದ್ಯ’ ಎಂದು ಕಾಂಗ್ರೆಸ್‌್ ಮುಖಂಡ ಅಮರಿಂದರ್‌ ಸಿಂಗ್‌್ ಹೇಳಿದ ಮಾತಿಗೆ ಮೋದಿ ತಿರುಗೇಟು ನೀಡಿದ್ದಾರೆ. ‘ಅವರಿಗೆ ಮದ್ಯದ ನೆನಪು ಬರುವುದು ಸಹಜ (ಉನ್‌ ಕೊ ಶರಾಬ್‌ ಯಾದ್‌ ಆನಾ ಸ್ವಾಭಾವಿಕ್‌ ಹೈ)’ ಎಂದು ಮೋದಿ ಚಾಟಿ ಬೀಸಿದರು.

ವಂದನಾ ನಿರ್ಣಯ
ನವದೆಹಲಿ: ರಾಷ್ಟ್ರಪತಿ ಭಾಷಣಕ್ಕೆ ಲೋಕಸಭೆಯಲ್ಲಿ ಬುಧವಾರ ಧ್ವನಿ ಮತದ ಮೂಲಕ ವಂದನಾ ನಿರ್ಣಯ ಅಂಗೀಕರಿಸಲಾಯಿತು.
ಆನಂತರ ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.