ADVERTISEMENT

ಮೇಕೆದಾಟು: ತಮಿಳುನಾಡು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2014, 19:30 IST
Last Updated 22 ನವೆಂಬರ್ 2014, 19:30 IST

ತಂಜಾವೂರ್ (ತಮಿಳುನಾಡು) (ಪಿಟಿಐ): ಕರ್ನಾಟಕವು ಮೇಕೆದಾಟು ಬಳಿ ಕಾವೇರಿ ನದಿಗೆ ಎರಡು ಅಣೆಕಟ್ಟು­ಗ­ಳನ್ನು ನಿರ್ಮಿಸಲು ಸಿದ್ಧಪಡಿ­ಸಿ­­ರುವ ಯೋಜನೆ­ಯನ್ನು ವಿರೋಧಿಸಿ ತಮಿಳು­ನಾಡಿನ ಕಾವೇರಿ ಜಲಾನಯನ ಪ್ರದೇ­ಶದ ಸಾವಿರಾರು ರೈತರು ಮತ್ತು ವಿವಿಧ ರಾಜಕೀಯ ಪಕ್ಷಗಳು ಶನಿವಾರ ಪ್ರತಿಭಟನೆ  ನಡೆಸಿದ್ದಾರೆ.

ಎಂಡಿಎಂಕೆ ಪಕ್ಷದ ಮುಖಂಡ ವೈಕೊ ಅವರ ನೇತೃತ್ವದಲ್ಲಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜ್ಯದ ಭತ್ತದ ಕಣಜವಾದ ತಂಜಾವೂರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭತ್ತ ಬೆಳೆಯಲು ಕಾವೇರಿ ನೀರೇ ಆಧಾರ. ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವುದರಿಂದ ಭತ್ತದ ಬೇಸಾಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಅಣೆಕಟ್ಟೆಗಳನ್ನು ಕಟ್ಟಬಾರದು ಎಂದು ಪ್ರತಿಭಟನಾ­ಕಾ­ರರು ಒತ್ತಾಯಿಸಿದರು.

‘ಕಾವೇರಿಗೆ ತಡೆಯೊಡ್ಡಿದರೆ ಸುಮಾರು 5 ಕೋಟಿ ಜನರಿಗೆ ಕುಡಿ­-ಯುವ ನೀರನ್ನು ನಿರಾಕರಿಸಿದಂತಾ­ಗು­ತ್ತದೆ’ ಎಂದು ವೈಕೊ ಹೇಳಿದ್ದಾರೆ.

ತಿರುವರೂರ್ ರೈಲು ನಿಲ್ದಾಣದಲ್ಲಿ ಸೇರಿದ್ದ ಡಿಎಂಕೆ ಪಕ್ಷದ ಕಾರ್ಯಕರ್ತರು ಕರ್ನಾಟಕದ ಮೇಕೆದಾಟು ಯೋಜ­ನೆಯ ವಿರುದ್ಧ ಪ್ರತಿಭಟನೆ ನಡೆಸಿದರು. ನಾಗಪಟ್ಟಣಂ ಮತ್ತು ತಿರುಚಿನಾಪಲ್ಲಿ­ಯಲ್ಲೂ ಪ್ರತಿಭಟನೆಗಳು ನಡೆದವು. ಪ್ರತಿಭಟನೆಯಿಂದ ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.