ADVERTISEMENT

ರಂಗೇರಿದ ತೃತೀಯ ರಂಗದ ವೇದಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2014, 13:56 IST
Last Updated 25 ಫೆಬ್ರುವರಿ 2014, 13:56 IST

ನವದೆಹಲಿ (ಐಎಎನ್‌ಎಸ್): ಲೋಕಸಭಾ ಚುನಾವಣೆ ದಿನಗಣನೆಯ ಹಿನ್ನೆಲೆಯಲ್ಲಿ ರಾಜಕೀಯ ಅಖಾಡವು ದಿನೇ ದಿನೇ ರಂಗೇರುತ್ತಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಮಂಗಳವಾರ ಯುಪಿಎ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಸೇರದ ಒಟ್ಟು 11 ಪಕ್ಷಗಳ ಮುಖಂಡರು ರಾಜಧಾನಿಯಲ್ಲಿ ಸಭೆ ಸೇರಿದ್ದರು. 'ತೃತೀಯ ರಂಗ'ವೆಂಬ ಏಕತೆಯ ಮಂತ್ರ ಜಪಿಸಿದ ಈ ನಾಯಕರೆಲ್ಲರೂ ಕೇಂದ್ರದಲ್ಲಿ ಪ್ರಮುಖವಾದ ಎರಡು ಮೈತ್ರಿಕೂಟಗಳಿಂದ ಅಧಿಕಾರ ಕಸಿಯುವ ಶಪಥ ಮಾಡಿದರು.

ಸಮಾಜವಾದಿ, ಸಂಯುಕ್ತ ಜನತಾದಳ (ಜೆಡಿಯು), ಜಾತ್ಯಾತೀತ ಜನತಾದಳ (ಜೆಡಿಎಸ್) ಮತ್ತು ನಾಲ್ಕು ಎಡಪಕ್ಷಗಳು ಸೇರಿದಂತೆ ಒಟ್ಟು 11 ಪಕ್ಷಗಳ ಮುಖಂಡರು ಸೇರಿ ನಡೆಸಿದ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕೆಂಬ ನಿರ್ಧಾರ ತೆಗೆದುಕೊಂಡರು.

ಸಭೆಯಲ್ಲಿ ಅಸೋಮ್ ಗಣ ಪರಿಷದ್ ಮತ್ತು ಬಿಜು ಜನತಾದಳದ ಮುಖಂಡರು ಭಾಗವಹಿಸಿರಲಿಲ್ಲ. ಆದರೆ ಆ ಪಕ್ಷಗಳು ಮುಖಂಡರು ತಮ್ಮ ಗೈರು ಕುರಿತಂತೆ ತಮಗೆ ಮೊದಲೇ ಮಾಹಿತಿ ನೀಡಿದ್ದರು ಎಂದು ಸಿಪಿಎಂ ಮುಖಂಡ ಪ್ರಕಾಶ್ ಕಾರಟ್ ಸುದ್ಧಿಗಾರರಿಗೆ ತಿಳಿಸಿದರು.

ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಕಾರಟ್ ಅವರು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ನಾವೆಲ್ಲರೂ ಪರಸ್ಪರ ಸಹಕಾರದಿಂದ ಜತೆಗೂಡಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ 11 ಪಕ್ಷಗಳ ಮುಖಂಡರ ಸಭೆ ನಡೆಸಲು ನಿರ್ಧರಿಸಿದ್ದೆವು' ಎಂದು ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ `ದುರಾಡಳಿತ'ದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ, ಬೆಲೆ ಏರಿಕೆ, ರೈತರ ಸಂಕಷ್ಟ ಮತ್ತು ಅಸಮಾನತೆ ಹೆಚ್ಚಿದೆ. ನಮಗೆ ಕೇಂದ್ರದಲ್ಲಿ ಯುಪಿಎ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿಯುವುದು ಬೇಡ. ಅವುಗಳನ್ನು ಸೋಲಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕಾರಟ್ ಹೇಳಿದರು.

ಬಿಜೆಪಿಯ ನೀತಿಗಳು ಕೂಡ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೂಡ ಭ್ರಷ್ಟಾಚಾರ ಮಿತಿಮೀರಿದೆ. ಕಾಂಗ್ರೆಸ್‌ನಂತೆಯೇ ಇದು ಕೂಡ ಅತ್ಯಂತ ಕೆಟ್ಟ ಮೈತ್ರಿಕೂಟವಾಗಿದೆ ಎಂದು ಎನ್‌ಡಿಎ ವಿರುದ್ಧ ಪ್ರಕಾಶ್ ಗುಡುಗಿದರು.

ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಸಿಪಿಐ ಮುಖಂಡ ಎ.ಬಿ.ಬರ್ಧನ್, ಜೆಡಿಯು ಮುಖಂಡ ಶರದ್ ಯಾದವ್, ಜೆಡಿಎಸ್ ಮುಖಂಡ ಎಚ್.ಡಿ.ದೇವೆಗೌಡ ಸೇರಿದಂತೆ ಎಡಪಕ್ಷಗಳ ಹಲವು ಮುಖಂಡರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.