ADVERTISEMENT

ರಾಜಗೋಪಾಲ್‌ ರಾಜ್ಯದ ಹೊಸ ರಾಜ್ಯಪಾಲ?

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 19:30 IST
Last Updated 4 ಜುಲೈ 2014, 19:30 IST

ನವದೆಹಲಿ: ಕರ್ನಾಟಕ ರಾಜ್ಯ­ಪಾಲ­ರಾಗಿ ಕೇರ­ಳದ ಹಿರಿಯ ಬಿಜೆಪಿ ನಾಯಕ ಒ. ರಾಜಗೋಪಾಲ್‌ ನೇಮಕ­ಗೊಳ್ಳುವ ಸಾಧ್ಯತೆ ಇದೆ.
ಮೋದಿ ಸರ್ಕಾರ ರಾಜ­ಗೋಪಾಲ್‌ ಸೇರಿ ಕೆಲವು ಬಿಜೆಪಿ ನಾಯ­­ಕರನ್ನು ನಾನಾ ರಾಜ್ಯ­ಗಳ ರಾಜ್ಯ­­­ಪಾಲರಾಗಿ ನೇಮಕ ಮಾಡಿ ರಾಷ್ಟ್ರ­ಪತಿಗಳ ಒಪ್ಪಿಗೆಗಾಗಿ ಕಳು­ಹಿಸಿದೆ  ಎಂದು ತಿಳಿದು ಬಂದಿದೆ. ಈ ತಿಂಗಳ 7ರಂದು ಆರಂಭ­ವಾಗುವ ಬಜೆಟ್‌ ಅಧಿ­­ವೇಶನಕ್ಕೆ ಮೊದಲು ಈ ಸಂಬಂಧದ ಅಧಿಕೃತ ಆದೇಶ ಹೊರ­ಬೀಳುವ ಸಾಧ್ಯತೆ ಇದೆ.

84ವರ್ಷದ ರಾಜಗೋಪಾಲ್‌ ಕೇರಳ­ದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಪ್ರಮುಖ ನಾಯಕರು. ವಾಜಪೇಯಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ರೈಲ್ವೆ ಸೇರಿದಂತೆ ವಿವಿಧ ಖಾತೆಗಳನ್ನು  ನಿಭಾಯಿಸಿದ್ದಾರೆ.

ಲೋಕಸಭಾ ಚುನಾವಣೆ­ಯಲ್ಲಿ ಮಾಜಿ ಕೇಂದ್ರ ಸಚಿವ ಶಶಿ ತರೂರ್‌ ಅವರ ವಿರುದ್ಧ ತಿರುವನಂತಪುರದಲ್ಲಿ ಸ್ಪರ್ಧಿಸಿ, ಕೇವಲ 15,470 ಮತಗಳ ಅಂತರದಿಂದ  ಸೋತಿದ್ದರು. ಕೇರಳ ಬಿಜೆಪಿಯೊಳಗಿನ ಕಿತ್ತಾಟದ ಪರಿಣಾಮ­ವಾಗಿ ರಾಜಗೋಪಾಲ್‌ ಚುನಾವಣೆ­ಯಲ್ಲಿ ಸೋಲು ಅನುಭವಿಸಿದರು ಎಂದು ವ್ಯಾಖ್ಯಾನಿಸಲಾಗಿತ್ತು. ರಾಜಗೋಪಾಲ್‌ ಎರಡು ಸಲ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನೇಮಕಗೊಂಡಿದ್ದರು.

ಜೂನ್‌ 29ರಂದು ನಿವೃತ್ತರಾದ ಎಚ್‌.ಆರ್‌.ಭಾರದ್ವಾಜ್‌ ಅವರ ಜಾಗಕ್ಕೆ ರಾಜಗೋಪಾಲ್‌ ಅವರನ್ನು ನೇಮಕ ಮಾಡಲಾಗುತ್ತಿದೆ. ಆಂಧ್ರ ರಾಜ್ಯಪಾಲ ರೋಸಯ್ಯ ಅವರಿಗೆ ಸದ್ಯ ಕರ್ನಾಟಕದ ಉಸ್ತುವಾರಿ ನೀಡಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ ಸಿಂಗ್‌, ಕೇಂದ್ರದ ಮಾಜಿ ಸಚಿವ ರಾಂ ನಾಯಕ್‌ (ಮಹಾರಾಷ್ಟ್ರ), ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್‌ ಕೇಸರಿನಾಥ್‌ ತ್ರಿಪಾಠಿ, ಮಾಜಿ ಬಿಜೆಪಿ ಮುಖ್ಯ ಸಚೇತಕ ವಿ.ಕೆ. ಮಲ್ಹೋತ್ರ ಹಾಗೂ ಲಾಲ್‌ಜಿ ಟಂಡನ್‌ ಹೆಸರು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿರುವ ಪಟ್ಟಿಯಲ್ಲಿ ಸೇರಿವೆ ಎಂದು ಗೊತ್ತಾಗಿದೆ.

ಆದರೆ, ಗೃಹ ಸಚಿವ ರಾಜನಾಥ್‌­ಸಿಂಗ್‌ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟಿರುವ ಲಾಲ್‌ಜಿ ಟಂಡನ್‌ ರಾಜ್ಯಪಾಲರಾಗಿ ನೇಮಕಗೊಳ್ಳಲು ಇನ್ನು ಮನಸು ಮಾಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಲ್ಯಾಣ್‌ ಸಿಂಗ್‌ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಿಸುವ ಸಾಧ್ಯತೆ ಇದೆ. ಕೈಲಾಸ ಜೋಶಿ ಅವರ ಹೆಸರೂ ರಾಜ್ಯಪಾಲರ ಹುದ್ದೆಗೆ ಕೇಳಿಬರುತ್ತಿದೆ. ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದ ಬಿ.ಎಲ್‌. ಜೋಷಿ, ಛತ್ತೀಸಗಡದ ಶೇಖರ ದತ್, ನಾಗಾಲ್ಯಾಂಡಿನ ಅಶ್ವಿನಿ ಕುಮಾರ್, ಪಶ್ಚಿಮ ಬಂಗಾಳ ಎಂ.ಕೆ.ನಾರಾಯಣನ್‌ ಕೇಂದ್ರ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ನಾರಾಯಣನ್‌ ಅವರನ್ನು ಸಿಬಿಐ ಈಚೆಗೆ ‘ಅಗಸ್ಟಾ ವೆಸ್ಟ್‌ಲ್ಯಾಂಡ್‌’ ಕಾಪ್ಟರ್‌ ಖರೀದಿ ವ್ಯವಹಾರದಲ್ಲಿ ಸಾಕ್ಷಿಯಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸಿತ್ತು. ಗೋವಾ ರಾಜ್ಯಪಾಲ ಬಿ.ವಿ. ವಾಂಚೂ ಇದೇ ಕಾರಣಕ್ಕೆ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT