ADVERTISEMENT

ಲಂಚ ಕೇಳಿದ ಆರೋಪ ಎಎಪಿ ಸಚಿವ ವಜಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 19:30 IST
Last Updated 9 ಅಕ್ಟೋಬರ್ 2015, 19:30 IST

ನವದೆಹಲಿ (ಪಿಟಿಐ): ಲಂಚದ ಆರೋಪ ಕೇಳಿ ಬಂದ ಬೆನ್ನಲ್ಲೇ ಪರಿಸರ ಮತ್ತು ಆಹಾರ ಸಚಿವ ಆಸಿಂ ಅಹಮದ್‌ ಖಾನ್‌ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಂಪುಟದಿಂದ ವಜಾ ಮಾಡಿದ್ದಾರೆ.

‘ಆಸಿಂ ಮತ್ತು ಬಿಲ್ಡರ್‌ ನಡುವೆ ನಡೆದಿರುವ ಸಂಭಾಷಣೆಯ ಧ್ವನಿಸುರಳಿಸಿಕ್ಕಿದೆ. ₹6 ಲಕ್ಷ ಲಂಚ ನೀಡುವಂತೆ  ಆಸಿಂ ಅವರು ಬಿಲ್ಡರ್‌ ಮುಂದೆ ಬೇಡಿಕೆ ಇಟ್ಟಿರುವುದನ್ನು ಸಿಬಿಐ ತನಿಖೆಗೆ ವಹಿಸುವುದಾಗಿ’ ಕೇಜ್ರಿವಾಲ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

‘ಆರೋಪ ಕೇಳಿ ಬಂದ ಕೂಡಲೇ ಸ್ವಯಂ ಪ್ರೇರಣೆಯಿಂದ ಸಚಿವರ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದೇವೆ.  ಬಿಜೆಪಿಗೆ ಧೈರ್ಯವಿದ್ದರೆ ಆರೋಪ ಎದುರಿಸುತ್ತಿರುವ ರಾಜಸ್ತಾನ ಸಿ.ಎಂ ವಸುಂಧರಾ ರಾಜೇ, ಮಧ್ಯಪ್ರದೇಶ ಮುಖ್ಯ ಮಂತ್ರಿ ಶಿವ ರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಕ್ರಮಕೈಗೊಳ್ಳಲಿ’ ಎಂದು ಸವಾಲು ಹಾಕಿದರು.

ಕೇಜ್ರಿವಾಲ್‌ ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿ ಇಬ್ಬರು ಸಚಿವರು ಅಧಿಕಾರ ಕಳೆದುಕೊಂಡಿದ್ದಾರೆ.

ನಕಲಿ ಪದವಿ ಪ್ರಮಾಣ ಪತ್ರದ ಆರೋಪ ಕೇಳಿ ಬಂದ ಬಳಿಕ ಕಾನೂನು ಸಚಿವ ಜಿತೇಂದ್ರ ಸಿಂಗ್‌ ತೋಮರ್ ರಾಜೀನಾಮೆ ನೀಡಿದ್ದರು.
‘ನನ್ನ ವಿರುದ್ಧ ಅತಿ ದೊಡ್ಡ ಪಿತೂರಿ ನಡೆದಿದೆ. ಶನಿವಾರ ಈ ಪಿತೂರಿ ಏನೆಂದು ಬಹಿರಂಗಪಡಿಸುತ್ತೇನೆ’ ಎಂದು ಆಸಿಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.