ADVERTISEMENT

ಲಕ್ಷ್ಮಿ : ಅಂತರ್ಜಾಲ ಪರಿಣಿತ ಗ್ರಾಮೀಣ ಮಹಿಳೆ

ಏಜೆನ್ಸೀಸ್
Published 8 ಮಾರ್ಚ್ 2017, 16:19 IST
Last Updated 8 ಮಾರ್ಚ್ 2017, 16:19 IST
ಲಕ್ಷ್ಮಿ : ಅಂತರ್ಜಾಲ ಪರಿಣಿತ ಗ್ರಾಮೀಣ ಮಹಿಳೆ
ಲಕ್ಷ್ಮಿ : ಅಂತರ್ಜಾಲ ಪರಿಣಿತ ಗ್ರಾಮೀಣ ಮಹಿಳೆ   

ನವದೆಹಲಿ: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈಕೆ ಇಂಟರ್ನೆಟ್‌ ದಿದಿ (ಅಂತರ್ಜಾಲದ ಅಕ್ಕ). ಬಾಲ್ಯವಿವಾಹ, ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತುವ ದಿಟ್ಟ ಮಹಿಳೆ. ಆರೋಗ್ಯ ಸಮಸ್ಯೆಯಿಂದ ಬಳಲುವ ಮಕ್ಕಳು, ಮಹಿಳೆಯರಿಗೆ ಆಶಾಕಿರಣ. ಈಕೆಯ ಹೆಸರು ಲಕ್ಷ್ಮಿ ವಯಸ್ಸು 25 ವರ್ಷ.

ಒಂದು ಮಗುವಿನ ತಾಯಿಯಾಗಿರುವ ಲಕ್ಷ್ಮಿ ಅವರನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನೆನೆಯುವುದು ಅರ್ಥಪೂರ್ಣ. ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಬಳಸುತ್ತಾರೆ. ಅಲ್ಲದೇ, ಹಳ್ಳಿಗಾಡಿನ ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್‌ ಬಳಕೆ ಹೇಗೆ ಎಂಬುದನ್ನು ಬೋಧಿಸುವ ಕಾರ್ಯ ಮಾಡುತ್ತಿದ್ದಾರೆ.

ಲಕ್ಷ್ಮಿ ಅವರದ್ದು ಪಶ್ಚಿಮ ಬಂಗಾಳದ ಪುರಲಿಯಾ ಬಳಿಯ ಪಟಹೆನ್ಸಲ್‌ ಗ್ರಾಮ.  ಒಂದೊಮ್ಮೆ ಬಾಲ್ಯವಿವಾಹ ನಡೆಸಲು ಮುಂದಾದ ಹಳ್ಳಿಯ ಕುಟುಂಬಗಳಿಗೆ ಬಾಲ್ಯವಿವಾಹ ತಪ್ಪು ಎಂದು ಹೇಳಿದರು. ಇದಕ್ಕೆ ಬಗ್ಗದ ಕುಟುಂಬಗಳಿಗೆ ಪಾಠ ಕಲಿಸಲು ವಾಟ್ಸ್‌ಆ್ಯಪ್‌ ಬಳಸಿ ಪೊಲೀಸರಿಗೆ ವಿಷಯ ತಿಳಿಸಿ ಮದುವೆ ನಿಲ್ಲಿಸಿದ ದಿಟ್ಟ ಮಹಿಳೆ.



2015ರಲ್ಲಿ ಸಾಫ್ಟ್‌ವೇರ್‌ ದಿಗ್ಗಜ ಗೂಗಲ್‌ ಇಂಟರ್ನೆಟ್‌ ಸಾಥಿ ಎಂಬ ಗ್ರಾಮೀಣ ಭಾರತ ಸಾಮಾಜ ಸೇವೆ ಆರಂಭಿಸಿತು. ಕೆಲದಿನಗಳ ನಂತರ ಟಾಟಾ ಟ್ರಸ್ಟ್‌ ಜತೆ ಕೈಜೋಡಿಸಿದ ಗೂಗಲ್‌ ಈ ಯೋಜನೆಯಲ್ಲಿ ಭಾರತದ ಹಳ್ಳಿಗಾಡು ಪ್ರದೇಶಗಳಲ್ಲಿ ಮಹಿಳೆಯರಿಗೆ ಡಿಜಿಟಲ್‌ ಶಿಕ್ಷಣ ನೀಡಲು ಮುಂದಾಯಿತು. 2016ರಲ್ಲಿ ಈ ಯೋಜನೆ ಪುರಾಲಿಯಾ ಜಿಲ್ಲೆ ತಲುಪಿದೆ. ಪಿಯುಸಿ ಓದಿರುವ ಲಕ್ಷ್ಮಿ ಈ ಯೋಜನೆಯ ಭಾಗವಾಗಲು ಬಯಸಿ ವಿವರಗಳನ್ನು ಸಲ್ಲಿಸಿದ್ದಾರೆ.

ಗ್ರಾಮೀಣ ಜನತೆಗೆ ಇಂಟರ್ನೆಟ್‌ ಬಳಕೆ ಮತ್ತು ಉಪಯೋಗಗಳ ಕುರಿತು ತಿಳಿಸುವ ಕಾರ್ಯಕ್ಕೆ ಲಕ್ಷ್ಮಿ ಆಯ್ಕೆಯಾಗಿದ್ದಾರೆ. ಎರಡು ದಿನಗಳ ತರಬೇತಿ ಪಡೆದ ನಂತರ ಇಂಟರ್ನೆಟ್‌ ಸೌಲಭ್ಯ ಹೊಂದಿರುವ ಟಚ್‌ಸ್ಕ್ರೀನ್‌ ಮೊಬೈಲ್‌ ಮತ್ತು ಟ್ಯಾಬ್ಲೆಟ್‌ ನೀಡಲಾಯಿತು. ದಿನವೂ ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಚರಿಸುವ ಲಕ್ಷ್ಮಿ ಅವರು ಇಂಟರ್ನೆಟ್‌ ಸಾಥಿ ಯೋಜನೆಯ ಧ್ಯೇಯವನ್ನು ಸಾರುತ್ತಿದ್ದಾರೆ. ಅದರ ಜತೆಗೆ ಡಿಜಿಟಲ್‌ ಶಿಕ್ಷಣದ ಕಂಪು ಹರಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರುಗಳು ಲಕ್ಷ್ಮಿ ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಭಾರತದ ಆಂತರಿಕ ರೂಪ ಬದಲಿಸಲು ಪಣ ತೊಟ್ಟಿರುವ ಅಪರೂಪದ ಮಹಿಳೆಯನ್ನು ನೆನೆಯುವುದು, ಗುರುತಿಸುವುದು ನಮ್ಮೆಲ್ಲರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT