ADVERTISEMENT

ಸೋಲಿನ ಪರಾಮರ್ಶೆಗೆ ಚಿಂತನ ಮಂಥನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2014, 19:30 IST
Last Updated 23 ಜೂನ್ 2014, 19:30 IST

ನವದೆಹಲಿ: ಲೋಕಸಭೆ ಚುನಾವಣೆ­ಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಿನ ಪರಾ­ಮರ್ಶೆಗೆ ಉಸ್ತುವಾರಿ ಪ್ರಧಾನ ಕಾರ್ಯ­ದರ್ಶಿ ದಿಗ್ವಿಜಯ್‌ ಸಿಂಗ್‌ ಸಮ್ಮುಖ­ದಲ್ಲಿ ಎರಡು ದಿನಗಳ ಚಿಂತನ– ಮಂಥನ ಶಿಬಿರ ನಡೆಯಲಿದೆ.

ಈ ತಿಂಗಳ 28 ಮತ್ತು 29ರಂದು ನಡೆ­ಯುವ ಶಿಬಿರದಲ್ಲಿ ಮುಖ್ಯಮಂತ್ರಿ ಸಿದ್ದ­ರಾಮಯ್ಯ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಪಕ್ಷದ ಪದಾಧಿಕಾರಿಗಳು ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣಗಳನ್ನು ಹುಡುಕುವುದರ ಜತೆಗೆ ಪಕ್ಷದ ಸಂಘ­ಟನೆ, ಸದಸ್ಯತ್ವ ನೋಂದಣಿ ಹಾಗೂ ಮುಂದಿನ ವರ್ಷದ ಸ್ಥಳೀಯ ಸಂಸ್ಥೆ ಚುನಾ­ವಣೆ ಕುರಿತು ಸಮಾಲೋಚನೆ ನಡೆಯಲಿದೆ.

ಚುನಾವಣೆಯಲ್ಲಿ ಸೋತ ಅನೇಕರು ತಮ್ಮ ಸೋಲಿಗೆ ಪಕ್ಷದ ಕೆಲ ನಾಯಕರು ಕಾರಣ ಎಂದು ಆರೋಪಿಸಿ ನೀಡಿರುವ ದೂರುಗಳ ಬಗ್ಗೆ  ಈ ಸಮಯದಲ್ಲಿ ಚರ್ಚೆ ನಡೆಯಲಿದೆ.  ಸೋತ ಅಭ್ಯರ್ಥಿಗಳನ್ನೂ ಸಭೆಗೆ ಆಹ್ವಾನಿಸುವ ಸಂಭವವಿದೆ. ಎಐಸಿಸಿ ಕಾರ್ಯದರ್ಶಿಗಳಾದ ಶಾಂತರಾಂ ನಾಯಕ ಮತ್ತು ಚೆಲ್ಲಾ ಕುಮಾರ್‌ ಭಾಗವಹಿಸಲಿದ್ದಾರೆ. ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಎಲ್ಲರಿಗೂ ನೀಡಲಾಗುವುದು.

ಕಾಂಗ್ರೆಸ್‌ ನಾಯಕರ ಅಭಿಪ್ರಾಯ ಕ್ರೋಡೀಕರಿಸಿ ಎಐಸಿಸಿ ನಾಯಕರು ವರದಿಯೊಂದನ್ನು ಸಿದ್ಧಪಡಿಸಲಿದ್ದಾರೆ. ಈ ವರದಿಯನ್ನು ಪಕ್ಷದ ಸೋಲಿಗೆ ಕಾರಣಗಳನ್ನು ವಿಶ್ಲೇಷಣೆ ಮಾಡಲು ನೇಮಕಗೊಂಡಿರುವ ಮಾಜಿ ಸಚಿವ ಎ.ಕೆ. ಆಂಟನಿ ಸಮಿತಿಗೆ ಕಳುಹಿಸಲಿದ್ದಾರೆ. ಆಂಟನಿ ಅಂತಿಮವಾಗಿ ಆಗಸ್ಟ್‌ 2ರಂದು ರಾಜ್ಯದ ಹಿರಿಯ ನಾಯಕರ ಜತೆ ಚರ್ಚೆ ನಡೆಸಿದ ಬಳಿಕ ಹೈಕಮಾಂಡ್‌ಗೆ ಸಮಗ್ರವಾದ ವರದಿ ಸಲ್ಲಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಡಾ. ಜಿ. ಪರಮೇಶ್ವರ್‌ ಸೋಮವಾರ ದಿಗ್ವಿಜಯ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಬೆಂಗಳೂರು ಚಿಂತನ– ಮಂಥನ ಶಿಬಿರ ಕುರಿತು ಮಾತುಕತೆ ನಡೆಸಿದರು. ಈ ಸಮಯದಲ್ಲಿ ಶಾಂತರಾಂ ನಾಯಕ್‌ ಹಾಗೂ ಚೆಲ್ಲಾ ಕುಮಾರ್‌ ಹಾಜರಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ 9 ಸ್ಥಾನಗಳನ್ನು ಗೆದ್ದಿದ್ದರೂ ಕೆಲವರು ತಮ್ಮ ಸೋಲಿಗೆ ಪಕ್ಷದ ಮುಖಂಡರು ನಡೆಸಿದ ಪಿತೂರಿ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಭೆಗೆ ಮಹತ್ವ ಬಂದಿದೆ.

ಆಂಟನಿ ಸಮಿತಿ ವರದಿ ಅನುಸರಿಸಿ ಪಕ್ಷ ಪುನರ್‌ ಸಂಘಟಿಸುವ ಆಲೋಚನೆ ಹೈಕಮಾಂಡ್‌ಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.