ನವದೆಹಲಿ (ಪಿಟಿಐ): ಮಹಾತ್ಮಾ ಗಾಂಧೀಜಿಯವರ 150ನೇ ವರ್ಷಾಚರಣೆ ಸಂದರ್ಭದಲ್ಲಿ ಭಾರತವನ್ನು ಸಂಪೂರ್ಣ ಸ್ವಚ್ಛಗೊಳಿಸುವ ‘ಸ್ವಚ್ಛ ಭಾರತ‘ ರಾಷ್ಟ್ರೀಯ ನೈರ್ಮಲ್ಯ ಅಭಿಯಾನ ಈ 25ರಿಂದ ಪ್ರಾರಂಭವಾಗಲಿದ್ದು ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
2019ರ ವೇಳೆ ಭಾರತವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಈ ಅಭಿಯಾನ ಯಶಸ್ವಿಗೊಳಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ವಿವರವಾದ ಮಾಹಿತಿ ಇರುವ ಪತ್ರವನ್ನು ಸಂಪುಟ ಕಾರ್ಯದರ್ಶಿ ಅಜಿತ್ ಸೇಠ್ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದ್ದಾರೆ.
‘ಅಭಿಯಾನ ಯಶಸ್ವಿಗೊಳಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಮನೆ, ಸರ್ಕಾರಿ ಕಚೇರಿ, ಶಾಲೆ, ಆಸ್ಪತ್ರೆ, ಬೀದಿ, ರಸ್ತೆ, ಮಾರುಕಟ್ಟೆ, ರೈಲು, ಬಸ್ ನಿಲ್ದಾಣ, ಟ್ರಕ್ ಟರ್ಮಿನಲ್, ನದಿ, ಉದ್ಯಾನ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ವಿವರಗಳೂ ಪತ್ರದಲ್ಲಿವೆ.
ಸರ್ಕಾರಿ ಮತ್ತು ಸರ್ಕಾರೇತರ ಅಧಿಕಾರಿಗಳು, ಎನ್ಜಿಒ, ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳು, ನಗರ ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಈ ಅಭಿಯಾನದಲ್ಲಿ ಸೇರಿಸಿಕೊಳ್ಳಬೇಕು ಎಂದು ಸೇಠ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.