ADVERTISEMENT

‘ಪ್ಯಾರ್‌ ಭರಾ ನಮಸ್ಕಾರ್‌’

​ಪ್ರಜಾವಾಣಿ ವಾರ್ತೆ
Published 25 ಜನವರಿ 2015, 19:30 IST
Last Updated 25 ಜನವರಿ 2015, 19:30 IST

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ನಡುವಣ ಆತ್ಮೀಯತೆ ಜಂಟಿ ಪತ್ರಿಕಾ­ಗೋಷ್ಠಿಯಲ್ಲೂ ಎದ್ದುಕಾಣುತ್ತಿತ್ತು. ಹಿಂದಿಯಲ್ಲೇ ಮಾತು ಆರಂಭಿಸಿದ ಒಬಾಮ, ‘ನಮಸ್ತೆ..ಪ್ಯಾರ್‌ ಭರಾ ನಮಸ್ಕಾರ್‌’ ಎಂದು ಪತ್ರಕರ್ತರಿಗೆ ಶುಭಾಶಯ ಕೋರಿದರು.

ಪ್ರಧಾನಿಯಾಗಿ ಮೋದಿ ಆಯ್ಕೆಯಾ­ಗಿ­ರುವುದು ಹಾಗೂ ಅಮೆರಿಕ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಅವರಿಗಿ­ರುವ ನಿಷ್ಠೆ ನಮ್ಮ ಯತ್ನಕ್ಕೆ ಇನ್ನಷ್ಟು ಬಲ ತುಂಬುತ್ತದೆ ಎಂದು ಒಬಾಮ ನುಡಿದರು.  ಮ್ಯಾಡಿಸನ್‌ ಸ್ಕ್ವೇರ್‌ನಲ್ಲಿ ಅವರನ್ನು ಬಾಲಿವುಡ್‌ ಸ್ಟಾರ್‌ ತರಹ ಸ್ವಾಗತಿಸಲಾಗಿತ್ತು ಎಂದು ಹೊಗ­ಳಿದ ಒಬಾಮ, ‘ಚಾಯ್‌ ಪೆ ಚರ್ಚಾ’ ನಡೆಸಿಕೊಟ್ಟಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಹೇಳಿದರು. ‘ಚಲೇ ಸಾಥ್‌ ಸಾಥ್‌’ ಎನ್ನುತ್ತಾ ಒಬಾಮ ತಮ್ಮ ಮಾತು ಮುಗಿಸಿದರು. 

ಮೋದಿ ತಾವು ಮಾತು ಆರಂಭಿಸು­ವಾಗ ಅಮೆರಿಕದ ಅಧ್ಯಕ್ಷರನ್ನು ‘ಬರಾಕ್‌’ ಎಂದು ಸಂಬೋಧಿಸಿ­ದರು. ‘ಒಬಾಮ ಜತೆಗಿನ ತಮ್ಮ ವೈಯಕ್ತಿಕ ಸಂಬಂಧ ಕೇವಲ ದೆಹಲಿ ಮತ್ತು ವಾಷಿಂಗ್ಟನ್‌ಗಳನ್ನಷ್ಟೇ  ಹತ್ತಿರ ತಂದಿಲ್ಲ. ಎರಡೂ ದೇಶಗಳ ಜನರನ್ನು ಸಹ ಹತ್ತಿರ ತಂದಿದೆ ಎಂದು ಮೋದಿ ಹೇಳಿದರು. ಇಬ್ಬರೂ ಮುಕ್ತವಾಗಿ ಮಾತನಾಡಿ­ಕೊಂಡು ತಮಾಷೆ ಮಾಡಿಕೊಂಡೆವು’ ಎಂದು ಮೋದಿ ಹೇಳಿದರು.

ನಾಗರಿಕ ಪರಮಾಣು ಒಪ್ಪಂದ ಭಾರತ–ಅಮೆರಿಕ ಬಾಂಧವ್ಯದ ಕೇಂದ್ರ ಬಿಂದುವಿನಂತೆ ಇತ್ತು. ಕೇವಲ ನಾಲ್ಕು ತಿಂಗಳಲ್ಲಿ ನಾವು ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವತ್ತ ಕೆಲಸ ಮಾಡಿದೆವು ಎಂದೂ ಮೋದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.