ADVERTISEMENT

‘ಹೂದೋಟ’ದಲ್ಲಿ ಹಳೆಯ ಮುಳ್ಳು

ಅರುಣ್‌ ಜೇಟ್ಲಿ ಕಾವ್ಯಾತ್ಮಕ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 19:56 IST
Last Updated 28 ಫೆಬ್ರುವರಿ 2015, 19:56 IST

ನವದೆಹಲಿ (ಪಿಟಿಐ):  ‘ಕುಚ್‌ ತೊ ಗುಲ್‌ ಖಿಲಾಯೆ ಹೈ,  ಕುಚ್‌ ಅಭಿ ಖಿಲಾನೆ ಹೈ, ಪರ್‌ ಬಾಗ್‌ ಮೇ  ಅಬ್‌ ಭಿ ಕಾಂಟೆ ಕುಚ್‌ ಪುರಾನೆ ಹೈ’ (ಒಂದಿಷ್ಟು ಹೂ ಅರಳಿವೆ, ಇನ್ನಷ್ಟು ಅರಳಬೇಕಿವೆ. ಆದರೆ  ಹೂದೋಟದಲ್ಲಿ ಕೆಲವು ಹಳೆಯ ಮುಳ್ಳುಗಳು ಉಳಿದುಕೊಂಡಿವೆ)
–  ಹಣಕಾಸು ಸಚಿವ ಅರುಣ್‌ ಜೇಟ್ಲಿ ತಮ್ಮ ಬಜೆಟ್‌ ಭಾಷಣದಲ್ಲಿ  ಹಿಂದಿನ ಯುಪಿಎ ಸರ್ಕಾರ­ವನ್ನು ತರಾಟೆಗೆ ತೆಗೆದುಕೊಳ್ಳಲು ಚುಟುಕು ಕವಿತೆಯ ಮೊರೆ ಹೋದಾಗ ಬಿಜೆಪಿ ಸಂಸದರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

‘ನಾವು ಒಂದಿಷ್ಟು ಪ್ರಗತಿ ಸಾಧಿಸಿದ್ದೇವೆ, ಮತ್ತಷ್ಟು ಸಾಧಿಸುವ ಪ್ರಯತ್ನದಲ್ಲಿ ಇದ್ದೇವೆ. ಆದರೆ ಹಿಂದಿ­ನವರು ಮಾಡಿ­ರುವ ಅನಾಹುತಗಳು ನಮ್ಮ ಸಾಧನೆಗೆ ಅಡ್ಡಿಯಾಗುತ್ತಿವೆ’ ಎಂದು ಪರೋಕ್ಷ­ವಾಗಿ ಯುಪಿಎ ನೀತಿಗಳನ್ನು ಟೀಕಿಸಿದರು.

ಆಕಾಶ ನೀಲಿ ಬಣ್ಣದ ಅಂಗಿಯ ಮೇಲೆ  ಕಡು ನೀಲಿಯ ನೆಹರು ಕೋಟ್‌ ಧರಿಸಿದ್ದ ಜೇಟ್ಲಿ, ಸಂಪ್ರದಾಯದಂತೆ ನಿಂತುಕೊಂಡೇ ಭಾಷಣ ಶುರು­ಮಾಡಿ­ದರು. ಆದರೆ, ಸುಮಾರು ೨೦ ನಿಮಿಷಗಳ ಬಳಿಕ ಬಳಲಿದಂತೆ ಕಂಡುಬಂದರು.

‘ಜೇಟ್ಲಿ ಅವರೇ ನೀವು ಕುಳಿತುಕೊಂಡು ಭಾಷಣ ಮುಂದುವರಿಸಬಹುದು’ ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ನುಡಿದರು. ಅವರ ಕಾಳಜಿಗೆ ಜೇಟ್ಲಿ ಧನ್ಯವಾದ ಹೇಳಿದರು.

ಇದಾದ ಎರಡು ನಿಮಿಷಗಳ ಬಳಿಕ ಕುಳಿತುಕೊಂಡು ಬಜೆಟ್‌ ಮಂಡಿಸಲು ಅವರು ಸ್ಪೀಕರ್‌ ಅನುಮತಿಯನ್ನು  ಕೇಳಿದರು. ಸ್ಪೀಕರ್‌ ಇದಕ್ಕೆ ಒಪ್ಪಿಗೆ ನೀಡುತ್ತಿದ್ದಂತೆಯೇ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಾವು ಕುಳಿತ ಸ್ಥಳದಿಂದ ಎದ್ದು ಜೇಟ್ಲಿ ಅವರಿಗೆ  ಜಾಗ ಮಾಡಿಕೊಟ್ಟರು.

ಪ್ರಧಾನಿ ಮೋದಿ ಸೂಚನೆ ಮೇರೆಗೆ ಲೋಕಸಭಾ ಸಿಬ್ಬಂದಿ ಜೇಟ್ಲಿ ಅವರಿಗೆ ಕುಡಿಯಲು ನೀರು ಹಾಗೂ ಹಣ್ಣಿನ ರಸ ತಂದುಕೊಟ್ಟರು.
ಸ್ಪೀಕರ್‌ ಗ್ಯಾಲರಿಯಲ್ಲಿ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್‌, ಗೀತಕಾರ ಜಾವೇದ್‌ ಅಖ್ತರ್‌, ತೃಣ­ಮೂಲ ಕಾಂಗ್ರೆಸ್‌ ಮುಖಂಡ­ರಾದ  ಡೆರೆಕ್‌ ಒಬ್ರೇನ್‌  ಹಾಗೂ ಮುಕುಲ್‌ ರಾಯ್‌ ಕುಳಿತಿದ್ದರು.

ಸಂದರ್ಶಕರ ಗ್ಯಾಲರಿಯಲ್ಲಿ ಜೇಟ್ಲಿ ಸಹೋದರಿ ಮಧು ಭಾರ್ಗವ ಹಾಗೂ ಮಧು ಅವರ  ಪುತ್ರಿ ಪುನೀತಾ ಇದ್ದರು. ಸುಮಾರು ೧೦೦ ನಿಮಿಷಗಳ ಭಾಷ­ಣದಲ್ಲಿ ಜೇಟ್ಲಿ ಅಲ್ಲಲ್ಲಿ ಹಿಂದಿಯಲ್ಲಿ ವಿವರಣೆ ನೀಡುತ್ತಿದ್ದರು.

‘ ಮೋದಿ ಅವರು ನುಡಿದಂತೆ ನಮ್ಮದು ೨೪ ಗಂಟೆ, ವರ್ಷವಿಡೀ ಕೆಲಸ ಮಾಡುವ ಸರ್ಕಾರ’ ಎಂದು ಹಣ-­ಕಾಸು ಸಚಿವರು ಹೇಳಿದ್ದೇ ತಡ  ಮೋದಿ, ಸುಷ್ಮಾ ಸ್ವರಾಜ್‌, ರಾಜ­ನಾಥ್‌ ಸಿಂಗ್‌ ಹಾಗೂ ಡಿ.ವಿ.ಸದಾ­ನಂದ ಗೌಡ ಮತ್ತಿತರರು ಜೋರಾಗಿ ಚಪ್ಪಾಳೆ ತಟ್ಟಿದರು.
ವಿರೋಧಪಕ್ಷದ ಕೆಲವು ಸದಸ್ಯರು ಸದನದಲ್ಲಿ ತೂಕ­ಡಿಸುತ್ತಿದ್ದ ದೃಶ್ಯ ಕಂಡುಬಂತು.

‘ಜನರು ಹಗರಣ ಹಾಗೂ ಭ್ರಷ್ಟಾಚಾರ ಮುಕ್ತ ಭಾರತವನ್ನು ಬಯಸಿ ನಮ್ಮನ್ನು ಗೆಲ್ಲಿಸಿದ್ದಾರೆ’ ಎಂದು ಜೇಟ್ಲಿ ಹೇಳಿದಾಗ ವಿರೋಧಪಕ್ಷದಿಂದ ಟೀಕೆ ಕೇಳಿಬಂತು. ಕಾರ್ಪೊರೇಟ್‌ ತೆರಿಗೆ ಇಳಿಕೆ ಘೋಷ­ಣೆಗೆ ವಿರೋಧ­ಪಕ್ಷದ­ವರು ಗೇಲಿ ಮಾಡಿದರು.

ಸದನದಲ್ಲಿ ಆಡಳಿತ ಪಕ್ಷದವರು ಕುಳಿತು­ಕೊಳ್ಳುವ ಸ್ಥಳ ಭರ್ತಿಯಾಗಿತ್ತು. ಆದರೆ ವಿರೋಧಪಕ್ಷಗಳ ಸಾಲಿನಲ್ಲಿ ಕೆಲವು ಕುರ್ಜಿಗಳು ಖಾಲಿ ಹೊಡೆಯುತ್ತಿದ್ದವು. ‘ಕಡು ಬಡವರನ್ನು ಮೇಲೆತ್ತುವುದಕ್ಕೆ ಸರ್ಕಾರ ದೃಢ ಸಂಕಲ್ಪ ಮಾಡಿದೆ.  ಜಾತಿ, ಮತ ಅಥವಾ ಧರ್ಮ ಬೇಧವಿಲ್ಲದೇ ಎಲ್ಲರನ್ನು ಸಮಾನವಾಗಿ ಕಾಣುವ ಹಾಗೂ ಎಲ್ಲರಿಗೂ ನ್ಯಾಯ ಒದಗಿಸುವ ಸಂವಿಧಾನದ ಆಶಯಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಜೇಟ್ಲಿ ಹೇಳಿದರು.

‘ ಓಂ ಸರ್ವೆ ಭವಂತು ಸುಖಿನಃ...ಸರ್ವೆ ಸಂತು ನಿರಾಮಯಾಃ...ಓಂ ಶಾಂತಿಃ ಶಾಂತಿಃ ಶಾಂತಿಃ...’ ಎಂದು ಉಪನಿಷತ್‌್   ಶ್ಲೋಕ ಉಲ್ಲೇಖಿಸಿ ಭಾಷಣ ವನ್ನು ಪೂರ್ಣಗೊಳಿಸಿದರು.

ಕುಶಲೋಪರಿ...
ಬಜೆಟ್‌ ಮಂಡನೆಗೆ ಹತ್ತು ನಿಮಿಷ ಮುಂಚಿತವಾಗಿಯೇ ಸದನಕ್ಕೆ ಬಂದ  ಜೇಟ್ಲಿ, ವಿರೋಧ ಪಕ್ಷದ ಸಾಲಿನತ್ತ ಸಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌್ ಯಾದವ್‌್ ಮತ್ತಿತರ ಮುಖಂಡ­ರನ್ನು ಮಾತನಾಡಿಸಿಕೊಂಡು ಹೋದರು.

ಸಣ್ಣ ಜಟಾಪಟಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಗೆ ಹೆಚ್ಚುವರಿಯಾಗಿ ರೂ. ೫ಸಾವಿರ ಕೋಟಿ ಘೋಷಿಸುವಾಗ ಜೇಟ್ಲಿ ಅವರು   ‘ಇದು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ

ಖುಷಿ ತರುತ್ತದೆ’ ಎಂದು ನುಡಿದರು.  ಈ ಹಂತದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಸಣ್ಣ ಜಟಾಪಟಿ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಲು ಮುಂದಾದ ಖರ್ಗೆ ಅವರನ್ನು ಬಿಜೆಪಿಯ ಕೆಲವು ಸದಸ್ಯರು ತಡೆಯಲು ಯತ್ನಿಸಿದರು.

ಕೃಷಿ ಸಾಲ ಹೆಚ್ಚಳ
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಸಾಲವನ್ನು ರೂ. ೫೦ ಸಾವಿರ ಕೋಟಿಯಿಂದ ರೂ. ೮.೫ ಲಕ್ಷ ಕೋಟಿಗೆ ಏರಿಸಲಾಗಿದೆ. ನೀರಾವರಿ,  ಮಣ್ಣಿನ ಫಲವತ್ತತೆ ಹಾಗೂ ಕೃಷಿ ಉತ್ಪನ್ನ ಹೆಚ್ಚಳಕ್ಕೆ ಆರ್ಥಿಕ ನೆರವು ಘೋಷಿಸಲಾಗಿದೆ

‘ದೀರ್ಘಾವಧಿ ಗ್ರಾಮೀಣ ಸಾಲ ನಿಧಿ’ಗೆ ರೂ. 15,000 ಕೋಟಿ ಹಾಗೂ ‘ಅಲ್ಪಾವಧಿ ಗ್ರಾಮೀಣ ಸಹಕಾರ ಮರುಸಾಲ ನಿಧಿ’ಗೆ ರೂ. 45,000 ಕೋಟಿ ಅನುದಾನವನ್ನು ನೀಡುವ ಮೂಲಕ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.