ADVERTISEMENT

214 ಕಲ್ಲಿದ್ದಲು ನಿಕ್ಷೇಪ ಹಂಚಿಕೆ ರದ್ದು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2014, 19:46 IST
Last Updated 24 ಸೆಪ್ಟೆಂಬರ್ 2014, 19:46 IST

ನವದೆಹಲಿ (ಪಿಟಿಐ): ವಿವಿಧ ಕಂಪೆನಿಗಳಿಗೆ 1993ರಿಂದ 2010ರವರೆಗೆ ಹಂಚಿಕೆ ಮಾಡಲಾಗಿದ್ದ 218 ಕಲ್ಲಿ­ದ್ದಲು ನಿಕ್ಷೇಪಗಳ ಹಂಚಿಕೆ ಪೈಕಿ 214  ಹಂಚಿಕೆ­ಯನ್ನು ಸುಪ್ರೀಂ­ಕೋರ್ಟ್‌ ಬುಧವಾರ ರದ್ದು­ಪಡಿಸಿ ಆದೇಶ ಹೊರಡಿಸಿದೆ. ಎನ್‌ಟಿಪಿಸಿ, ಸೇಲ್‌ಗೆ ನೀಡಿದ್ದ ತಲಾ ಒಂದು ಹಂಚಿಕೆ ಮತ್ತು ರಿಲಯನ್ಸ್‌ ಪವರ್‌ ಮಾಲೀಕತ್ವದ ಸಾಸನ್‌ ಪವರ್‌ ಕಂಪೆನಿಗೆ ಸೇರಿದ ಎರಡು ಹಂಚಿಕೆಗಳು ಸೇರಿ ಒಟ್ಟು ನಾಲ್ಕನ್ನು ರದ್ದತಿಯಿಂದ ಕೈಬಿಟ್ಟಿದೆ.

42 ನಿಕ್ಷೇಪಗಳ­ ಕಾರ್ಯನಿರ್ವ­-ಹಣೆಯನ್ನು ವಶಕ್ಕೆ ತೆಗೆದುಕೊಳ್ಳಲು ಕೇಂದ್ರಕ್ಕೆ ಮುಖ್ಯ ನ್ಯಾ.ಯ­­ಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಪೀಠ ಅನುಮತಿ ನೀಡಿದೆ. ಕೋರ್ಟ್‌ನ ಈ ನಿರ್ಣಯ ಕಾರ್ಪೋರೆಟ್‌ ವಲಯಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಬಾಕಿ ಉಳಿದಿರುವ 172 ನಿಕ್ಷೇಪಗಳ ಮರು ಹಂಚಿಕೆ ಮಾಡಲೂ ನ್ಯಾಯ­ಮೂರ್ತಿ ಮದನ್‌ ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರನ್ನು ಒಳಗೊಂಡ ಪೀಠವು ಕೇಂದ್ರಕ್ಕೆ ಆದೇಶ ನೀಡಿದೆ.

ಹಂಚಿಕೆಯಲ್ಲಿ ಮಾಡಿರುವ ಲೋಪ­ಗಳನ್ನು ಸರಿಪಡಿಸ­ಬೇಕು ಹಾಗೂ ನೈಸರ್ಗಿಕ ಸಂಪತ್ತು ಕೆಲವೇ ವ್ಯಕ್ತಿಗಳು ಮನಸ್ಸೋ ಇಚ್ಛೆ ಬಳಸುವುದಕ್ಕೆ ಸರ್ಕಾರ ಅವಕಾಶ ನೀಡ­ಬಾರದು ಎನ್ನುವುದು ಈ ತೀರ್ಪಿನ ಉದ್ದೇಶವಾಗಿದೆ ಎಂದು ಪೀಠ ಹೇಳಿದೆ.
ಆದಾಗ್ಯೂ, ವಿದ್ಯುತ್‌ ಉತ್ಪಾದನಾ ಯೋಜನೆಗಳಿಗೆ ಇಂಧನ ಪೂರೈಕೆ ಮುಂದುವರಿಸಲು 46 (42 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ) ನಿಕ್ಷೇಪಗಳಿಗೆ ಕಾರ್ಯನಿರ್ವಹಿ­ಸಲು ಅವ­ಕಾಶ ಕಲ್ಪಿಸಿದ್ದು,  ಆರು ತಿಂಗಳ ನಂತರ 2015ರ ಮಾರ್ಚ್ 31ರಂದು  ಕೇಂದ್ರ ಈ ನಿಕ್ಷೇಪಗಳನ್ನು ವಶಕ್ಕೆ ಪಡೆದು­­ಕೊಳ್ಳ­ಬೇಕು.

ಈ ನಿಕ್ಷೇಪಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಬಹುದು ಅಥವಾ ಕೋಲ್‌ ಇಂಡಿಯಾಗೆ ಹಸ್ತಾಂತರ ಮಾಡಬಹುದು ಎಂದಿದೆ. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ನೀಡಿಯೂ ಕಾರ್ಯಾರಂಭ ಮಾಡದ ಕಂಪೆನಿಗಳು ರಾಷ್ಟ್ರದ ಬೊಕ್ಕಸಕ್ಕೆ ಆಗಿ­ರುವ ಹಾನಿ ತುಂಬಲು ಸರ್ಕಾರಕ್ಕೆ ಪರಿಹಾರ ನೀಡ­ಬೇಕು ಎಂದು ಪೀಠ ನಿರ್ದೇಶನ ನೀಡಿದೆ. ಗಣಿಗಳಲ್ಲಿ ಚಟುವಟಿಕೆ ನಡೆಸದೇ ಇರುವುದರಿಂದ ಪ್ರತಿ­ಟನ್‌ಗೆ ₨ 295 ನಷ್ಟ­ವಾಗಿದೆ ಎನ್ನುವ  ಮಹಾಲೇಖ­ಪಾಲರ (ಸಿಎಜಿ) ­ವರದಿಯಲ್ಲಿದ್ದ ಅಂಶ­ವನ್ನು ಕೋರ್ಟ್‌ ಒಪ್ಪಿದೆ. ಗಣಿಗಳ ಹಂಚಿಕೆ ಕುರಿತು ರಚಿಸ­ಲಾಗಿದ್ದ ಪರಿಶೀಲನಾ ಸಮಿತಿ (ಸ್ಕ್ರೀನಿಂಗ್‌ ಸಮಿತಿ)ಗಳು 1993ರಿಂದ ಅಳವಡಿಸಿ­ಕೊಂಡ ಕಾರ್ಯವಿಧಾನವನ್ನು ಕೋರ್ಟ್‌ ಕಟುವಾಗಿ ಖಂಡಿಸಿದೆ.    

‘ಸಾರ್ವ­ಜನಿಕ ಹಿತಾಸಕ್ತಿ ಗಮನದಲ್ಲಿ­ಇಟ್ಟು ಕೊಳ್ಳದೆ ರಾಷ್ಟ್ರೀಯ ಸಂಪತ್ತನ್ನು ಅನೌಪಚಾರಿಕ ಮತ್ತು ಅಸಮರ್ಪಕ ರೀತಿಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು’ ಪೀಠ ಹೇಳಿದೆ. ‘ಗಣಿಗಳ ಹಂಚಿಕೆ ಸಂದರ್ಭದಲ್ಲಿ ಪರಿಶೀಲನಾ ಸಮಿತಿ ಬದ್ಧತೆ ಮತ್ತು ಪಾರದರ್ಶಕತೆ ಪ್ರದರ್ಶಿಸಿಲ್ಲ’ ಎಂದು ಕೋರ್ಟ್‌ ತನ್ನ 163 ಪುಟಗಳ ತೀರ್ಪಿನಲ್ಲಿ ಹೇಳಿದೆ. ಕಲ್ಲಿದ್ದಲು ಗಣಿ ಹಂಚಿಕೆ ಮಾಡಿದ ನಂತರ ವಿವಿಧ ಕಂಪೆನಿಗಳು ಎರಡು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿವೆ. ಈ ಕಾರಣ ನಿಕ್ಷೇಪಗಳನ್ನು ರದ್ದು ಮಾಡಬಾರದು ಎಂದು ಹಿಂದಿನ ಯುಪಿಎ ಸರ್ಕಾರ ಹೇಳಿತ್ತು.

ರಾಜ್ಯದ 6 ನಿಕ್ಷೇಪಗಳ ರದ್ದು
ಕರ್ನಾಟಕಕ್ಕೆ ಹಂಚಿಕೆಯಾಗಿದ್ದ ಆರು ಕಲ್ಲಿದ್ದಲು ನಿಕ್ಷೇಪಗಳೂ ಕೋರ್ಟ್‌ ತೀರ್ಪಿನಿಂದಾಗಿ ರದ್ದಾಗಿವೆ. ಅವುಗಳೆಂದರೆ, ಮಹಾರಾಷ್ಟ್ರ ಬಾರಂಜಾ (4), ಕಿಲೋನಿ (1) ಮತ್ತು ಮನೋಹರ ದೀಪ (1). ಇವನ್ನು ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಮಂಜೂರು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.