ADVERTISEMENT

ಕೆಪಿಎಸ್‌ಸಿ ನೇಮಕಾತಿ ರದ್ದತಿ ರಾಜ್ಯಕ್ಕೆ ‘ಸುಪ್ರೀಂ’ ನೋಟಿಸ್‌

1998, 99, 2004ರ ಕೆಪಿಎಸ್‌ಸಿ ನೇಮಕಾತಿ ರದ್ದತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 20:21 IST
Last Updated 6 ಜುಲೈ 2018, 20:21 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1998, 1999 ಮತ್ತು 2004ರಲ್ಲಿ ನಡೆಸಿದಗೆಜೆಟೆಡ್‌ ಪ್ರೊಬೆಷನರಿ ಹುದ್ದೆ
ಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನೀಡಲಾದ ತೀರ್ಪಿನ ಜಾರಿಗೆ ಕೈಗೊಂಡ ಕ್ರಮಗಳ ವಿವರ ನೀಡುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

‘ಈ ನೇಮಕಾತಿ ಪ್ರಕ್ರಿಯೆ ಅಸಾಂವಿಧಾನಿಕ’ ಎಂದು ತಿಳಿಸಿ 2016ರ ಜೂನ್‌ 21ರಂದು ರಾಜ್ಯ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಕಳೆದ ಏಪ್ರಿಲ್‌ 11ರಂದು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದರಿಂದ, ಕೆಪಿಎಸ್‌ಸಿ ಈ ನೇಮಕಾತಿಯ ಪರಿಷ್ಕೃತ ಪಟ್ಟಿ ಸಿದ್ಧಪಡಿಸಬೇಕಿದೆ.

ಕೆ.ಆರ್‌. ಖಲೀಲ್ ಅಹಮದ್ ಹಾಗೂ ಇತರ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್‌.ಎಫ್‌. ನಾರಿಮನ್‌ ಹಾಗೂ ಇಂದೂಲ್‌ ಮಲ್ಹೋತ್ರಾ ಅವರಿದ್ದ ಪೀಠ, ‘ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳು ಯಾವುವು ಎಂಬ ವಿವರ ನೀಡಬೇಕು’ ಎಂದು ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ADVERTISEMENT

‘ನೇಮಕಾತಿಯಲ್ಲಿ ಅಕ್ರಮ ನಡೆದು 20 ವರ್ಷಗಳೇ ಕಳೆಯುತ್ತ ಬಂದಿದ್ದರೂ, ಅಕ್ರಮದಲ್ಲಿ ತೊಡಗಿ ಉನ್ನತ ಹುದ್ದೆ ಪಡೆದಿರುವವರು ಸರ್ಕಾರವನ್ನು ಮಾತ್ರವಲ್ಲದೆ, ಕೋರ್ಟ್‌ ಅನ್ನೂ ವಂಚಿಸುತ್ತ ಅಧಿಕಾರದಲ್ಲಿ ಮುಂದುವರೆದಿದ್ದಾರೆ’ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ನ್ಯಾಯಪೀಠಕ್ಕೆ ತಿಳಿಸಿದರು.

ಅಕ್ರಮವಾಗಿ ನೇಮಕಗೊಂಡವರಿಗೆ ಐಎಎಸ್, ಐಪಿಎಸ್‌ಗೆ ನೀಡಲಾದ ಬಡ್ತಿ ರದ್ದುಪಡಿಸಬೇಕು. ಇದುವರೆಗೆ ಪಡೆದಿರುವ ಸಂಬಳ ಮತ್ತಿತರ ಎಲ್ಲ ಸೌಲಭ್ಯ ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಹೈಕೋರ್ಟ್‌ನ ನಿರ್ದೇಶನ ಪಾಲಿಸುವಂತೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಅರ್ಜಿಗಳ ವಿಲೇವಾರಿಗಾಗಿ ಹೈಕೋರ್ಟ್‌ ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.

2016ರ ಜೂನ್‌ 21ರಂದು ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯಲ್‌ ಹಾಗೂ ಆರ್‌.ಎಫ್‌. ನಾರಿಮನ್‌ ಅವರಿದ್ದ ಪೀಠವು, ‘ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ತೃಪ್ತಿ ಇದೆ. ನೇಮಕಾತಿ ಪ್ರಕ್ರಿಯೆ ಶುದ್ಧವಾಗಿರಬೇಕು. ಯಾವುದೇ ರೀತಿಯ ಅಕ್ರಮವನ್ನು ನಾವು ಸಹಿಸುವುದಿಲ್ಲ’ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.