ADVERTISEMENT

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಪರದಾಟ

ಕರ್ನಾಟಕ ಲೋಕಸೇವಾ ಆಯೋಗ ಆನ್‌ಲೈನ್‌ ಅವಾಂತರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಚಿಕ್ಕಮಗಳೂರು/ ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳ ಸುಮಾರು 800 ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ ಆಹ್ವಾನಿಸಿದ್ದ ಆನ್‌ಲೈನ್‌ ಅರ್ಜಿಯನ್ನು ಕೊನೆ ದಿನವಾದ ಶನಿವಾರವೂ ಸಲ್ಲಿಸಲು ಆಗದೆ ಅಭ್ಯರ್ಥಿಗಳು ಪರದಾಡಿದರು. ಇದರಿಂದ ಸಾವಿರಾರು ಅಭ್ಯರ್ಥಿಗಳು ಉದ್ಯೋಗ ಅವಕಾಶ ಕೈತಪ್ಪುವ ಆತಂಕಕ್ಕೆ ಸಿಲುಕಿದ್ದಾರೆ.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಗ್ರೂಪ್‌ ಎ 3 ಹುದ್ದೆಗಳು, ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರ ಗ್ರೂಪ್‌ ಬಿ ಹುದ್ದೆ 50, ರೇಷ್ಮೆ ಇಲಾಖೆ ಸಹಾಯಕ ಎಂಜಿನಿಯರ್‌ 1, ಔಷಧ ನಿಯಂತ್ರಣ ಇಲಾಖೆ ಸರ್ಕಾರಿ ಔಷಧ ಮಹಾವಿದ್ಯಾಲಯದ ಉಪನ್ಯಾಸಕರ 2 ಹುದ್ದೆ ಸೇರಿದಂತೆ 53 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.

ಹಾಗೆಯೇ ವಾರ್ತಾ ಇಲಾಖೆಯಲ್ಲಿ ವಾರ್ತಾ ಸಹಾಯಕರು 10 ಹುದ್ದೆಗಳು, ಮೊರಾರ್ಜಿ ವಸತಿ ಶಾಲೆ-ಯಲ್ಲಿ ಬೋಧಕ, ಬೋಧಕೇತರ ಗ್ರೂಪ್‌ ಸಿ ಒಟ್ಟು 650 ಹುದ್ದೆಗಳು, ಗ್ರೂಪ್‌ ಎ ಬ್ಯಾಕ್‌ಲಾಗ್‌ 10 ಹುದ್ದೆಗಳಿಗೆ ಕಳೆದ ಸೆಪ್ಟೆಂಬರ್‌ 25ರಂದು (25–9–2014)ರಂದು ಅಧಿಸೂಚನೆ ಹೊರಡಿಸಿ ಅಂದೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅ.25ರಂದು ಮಧ್ಯಾಹ್ನ 1 ಗಂಟೆಗೆ ಅರ್ಜಿ ಸಲ್ಲಿಸಲು ಕೊನೆ ಅವಧಿ ನಿಗದಿಪಡಿಸಲಾಗಿತ್ತು.

ಈ ಬಾರಿಯಿಂದ ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಆದಾಯ, ಜಾತಿ, ಮೀಸಲಾತಿ ದೃಢೀಕರಣ ಪತ್ರ ಹಾಗೂ ಸೇವಾ ಪ್ರಮಾಣ ಪತ್ರದ ಪಡೆದ ದಿನಾಂಕವನ್ನು ಅರ್ಜಿಯೊಂದಿಗೆ ನಮೂದಿಸುವುದು ಕಡ್ಡಾಯಗೊಳಿಸಲಾಗಿದೆ. ಅಕ್ಟೋಬರ್‌ ತಿಂಗಳಲ್ಲಿ 12ಕ್ಕೂ ಸರ್ಕಾರಿ ರಜೆಗಳು ಬಂದಿವೆ. ಕೆಪಿಎಸ್‌ಸಿ ಈ ಬಾರಿ ಅರ್ಜಿ ಸಲ್ಲಿಸಲು ಕೇಳಿರುವ ದಾಖಲಾತಿಗಳನ್ನು ಪಡೆದಿಟ್ಟುಕೊಳ್ಳಲು ಕನಿಷ್ಠ 15 ದಿನಗಳು ಬೇಕು. ಅದರಲ್ಲೂ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಸೈಬರ್‌ ಕೇಂದ್ರಗಳಿಗೆ ಹೋದರೆ ಅಲ್ಲಿ ಇಂಟರ್‌ನೆಟ್‌ ಸರ್ವರ್‌ ಸಮಸ್ಯೆ, ಜತೆಗೆ ವಿದ್ಯುತ್‌ ಇಲ್ಲ ಎನ್ನುವ ಕಾರಣಗಳು ಇವೆ. ಜತೆಗೆ ಕಳೆದ ಎರಡು ಮೂರು ದಿನಗಳಿಂದಲೂ ‘ಇಂಟರ್‌ನೆಟ್‌ ಸರ್ವರ್‌’ ಸ್ಥಗಿತಗೊಂಡಿದೆ ಎಂದು ಅರ್ಜಿ ಸಲ್ಲಿಸಲು ಆಗದೆ ಅವಕಾಶ ವಂಚಿತವಾಗಿರುವ ಅಭ್ಯರ್ಥಿ ವೀರೇಶ್‌ ’ಪ್ರಜಾವಾಣಿ’ಗೆ ತಿಳಿಸಿದರು. 

’ಅ.22ರಂದು ಬೆಳಿಗ್ಗೆಯಿಂದ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಸಿದರೆ ಮಧ್ಯಾಹ್ನದವರೆಗೂ ಅರ್ಜಿ ತುಂಬಲು ಆಗಲಿಲ್ಲ. ಮತ್ತೆ ಮರು ದಿನ ಪ್ರಯತ್ನಿಸಿ ಎಲ್ಲ ವಿವರಗಳನ್ನು ನಮೂದಿಸಿದರೆ, ಶುಲ್ಕ ಕಟ್ಟಲು ಬೇಕಾದ ಚಲನ್‌ ಡೌನ್‌ಲೋಡ್‌ ಆಗಲಿಲ್ಲ. ಕೆಪಿಎಸ್‌ಸಿ ನೀಡಿರುವ ಸಹಾಯವಾಣಿಗೆ ಕರೆ ಮಾಡಿದರೆ ‘ಬ್ಯುಸಿ’ ಎನ್ನುವ ಸಿದ್ಧ ಉತ್ತರ ಬರುತ್ತದೆ. ದೂರವಾಣಿ ಸಂಪರ್ಕ ಸಿಕ್ಕಿದರೆ ಅದನ್ನು ಫ್ಯಾಕ್ಸ್‌ಗೆ ಸಂಪರ್ಕಿಸುತ್ತಾರೆ. ಅತ್ತಲಿಂದ ಸ್ಪಂದಿಸುವವರು, ಮಾರ್ಗದರ್ಶನ ನೀಡುವವರು ಯಾರೂ ಇಲ್ಲ. ಉದ್ಯೋಗ ಪಡೆಯುವ ಗುರಿ ಇಟ್ಟುಕೊಂಡು ವರ್ಷ ಪೂರ್ತಿ ಓದಿದವರಿಗೆ ಕೆಪಿಎಸ್‌ಸಿ ಈ ಧೋರಣೆಯಿಂದ ಅನ್ಯಾಯವಾಗುತ್ತಿದೆ’ ಎನ್ನುವುದು ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಸಲ್ಲಿಸಬೇಕಿದ್ದ ಪ್ರದೀಪ್ ಅವರ ಅಳಲು.

’ಇಷ್ಟೊಂದು ತಾಂತ್ರಿಕ ಸಮಸ್ಯೆ ಇರುವಾಗ ಆನ್‌ಲೈನ್‌ ಅರ್ಜಿ ಆಹ್ವಾನಿಸಿ ಹೆಚ್ಚು ಸಮಯ ನೀಡದಿರುವುದು ಸರಿಯಲ್ಲ. ಕಡಿಮೆ ಅವಧಿ ನೀಡುವುದಾದರೆ ಕೇಂದ್ರ ಲೋಕಸೇವಾ ಆಯೋಗದಂತೆ (ಯುಪಿಎಸ್‌ಸಿ) ಆಫ್‌ ಲೈನ್‌ನಲ್ಲೂ (ಕಾಗದದ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವ) ಅರ್ಜಿ ಸ್ವೀಕರಿಸುವ ಪದ್ಧತಿ ಜಾರಿಗೊಳಿಸಬೇಕು’ ಎನ್ನುವುದು ನೊಂದ ಅಭ್ಯರ್ಥಿಗಳ ಆಗ್ರಹ.

ಗಮನಕ್ಕೆ ಬಂದಿದೆ
‘ಅಭ್ಯರ್ಥಿಗಳು ಕೊನೆ ದಿನದವರೆಗೂ ಕಾಯುತ್ತಾ ಕುಳಿತರೆ ಇದೇ ಸಮಸ್ಯೆ. ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಕೊನೆ ಗಳಿಗೆಯಲ್ಲಿ ತಾಂತ್ರಿಕ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ರಾಜ್ಯದ ವಿವಿಧ ಕಡೆಗಳಿಂದ ಸಾಕಷ್ಟು ಅಭ್ಯರ್ಥಿಗಳು ದೂರುಗಳನ್ನು ಹೇಳಿಕೊಂಡಿದ್ದಾರೆ. ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗಬಾರದೆಂಬ ದೃಷ್ಟಿಯಿಂದ ಇದೇ 31ರವರೆಗೂ ಅವಧಿ ವಿಸ್ತರಿಸಲು ಚರ್ಚೆಯಾಯಿತು.

ಆದರೆ, ಇನ್ನೂ ಬೇರೆ ಬೇರೆ ಹುದ್ದೆಗಳಿಗೆ ಪರೀಕ್ಷೆ ನಡೆಸಬೇಕಿರುವುದರಿಂದ ಅರ್ಜಿ ಸ್ವೀಕರಿಸುವ ದಿನಾಂಕ ವಿಸ್ತರಿಸಲು ಅಡ್ಡಿಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಕೆಪಿಎಸ್‌ಸಿ ಉಪ ಕಾರ್ಯದರ್ಶಿ ಎಲ್‌.ಎಸ್‌.ಕುಕ್ಕೆನ್‌ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.