ADVERTISEMENT

ಆನ್‌ಲೈನ್‌ ವಂಚಕರ ಬಂಧನ

ರಾಂಚಿಯಲ್ಲಿ ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:36 IST
Last Updated 21 ಜುಲೈ 2017, 19:36 IST
ಆನ್‌ಲೈನ್‌ ವಂಚಕರ ಬಂಧನ
ಆನ್‌ಲೈನ್‌ ವಂಚಕರ ಬಂಧನ   

ಚಿಕ್ಕಮಗಳೂರು: ಆನ್‌ಲೈನ್ ವಂಚನೆಯ ದೊಡ್ಡ ಜಾಲವೊಂದನ್ನು ಭೇದಿಸಿರುವ ಇಲ್ಲಿನ ನಗರ ಠಾಣೆ ಪೊಲೀಸರು, ಜಾರ್ಖಂಡ್‌ನ ರಾಂಚಿಯಲ್ಲಿ 21 ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. 

ರಾಂಚಿಯಲ್ಲಿನ ಅಪಾರ್ಟ್‌ಮೆಂಟ್‌ವೊಂದರ ಮೂರು ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿ, ಕರ್ನಾಟಕದ 6, ತಮಿಳುನಾಡಿನ 5, ಆಂಧ್ರಪ್ರದೇಶ ಮತ್ತು ತೆಲಂಗಾಣದ 9 ಹಾಗೂ ಬಿಹಾರದ ಒಬ್ಬನನ್ನು ಬಂಧಿಸಿದ್ದಾರೆ. ದಂಧೆಗೆ ಬಳಸುತ್ತಿದ್ದ 65 ಮೊಬೈಲ್‌ ಫೋನುಗಳು, 12 ಎಟಿಎಂ ಕಾರ್ಡುಗಳು, ಲ್ಯಾಪ್‌ಟಾಪ್‌ ಹಾಗೂ ಪ್ರಿಂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಕೆ.ಆರ್‌.ರಘು ನೇತೃತ್ವದ ತಂಡವು ರಾಂಚಿ ಪೊಲೀಸ್‌ ಆಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳನ್ನು ರಾಂಚಿಯಲ್ಲಿ ಕೋರ್ಟ್‌ಗೆ ಹಾಜರುಪಡಿಸಿ, ಚಿಕ್ಕಮಗಳೂರಿಗೆ ಕರೆ ತರಲಾಗುತ್ತಿದೆ.

ADVERTISEMENT

ಏನಿದು ಪ್ರಕರಣ: ನಗರದ ವ್ಯಾಪಾರಿ ಮೋಹನ್ ಭಟ್‌ ಅವರು ಜೂನ್‌ 27ರಂದು ಆನ್‌ಲೈನ್‌ ವಂಚನೆ ದೂರು ದಾಖಲಿಸಿದ್ದರು.

‘ಮೋಹನ್‌ ಅವರ ನ್ಯಾಪ್‌ಟಾಲ್‌ ಶಾಪಿಂಗ್‌ ದತ್ತಾಂಶ ಆಧರಿಸಿ ಈ ಜಾಲದವರು ವಂಚನೆ ಎಸಗಿದ್ದಾರೆ. ಸಫಾರಿ ಕಾರು ಬಹುಮಾನ ಬಂದಿದೆ ಎಂದು ಅವರಿಂದ ₹ 1.62 ಲಕ್ಷ ಹಣವನ್ನು ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ಮೋಹನ್‌ ಅವರಿಗೆ ಕರೆ ಮಾಡಿದ್ದ ಮೊಬೈಲ್‌ ನಂಬರಿನ ಜಾಡು ಆಧರಿಸಿ ಜಾಲವು ರಾಂಚಿಯಲ್ಲಿ ಇರುವುದನ್ನು ಪತ್ತೆ ಮಾಡಿದೆವು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.