ADVERTISEMENT

ಇಂಧನ ಸಚಿವ ಶಿವಕುಮಾರ್ ಆಸ್ತಿ ಘೋಷಣಾ ಪ್ರಮಾಣ ಪತ್ರ ಅಲಭ್ಯ

ವೈ.ಗ.ಜಗದೀಶ್‌
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಇಂಧನ ಸಚಿವ ಶಿವಕುಮಾರ್ ಆಸ್ತಿ ಘೋಷಣಾ ಪ್ರಮಾಣ ಪತ್ರ ಅಲಭ್ಯ
ಇಂಧನ ಸಚಿವ ಶಿವಕುಮಾರ್ ಆಸ್ತಿ ಘೋಷಣಾ ಪ್ರಮಾಣ ಪತ್ರ ಅಲಭ್ಯ   

ಬೆಂಗಳೂರು: ‘ಇಂಧನ ಸಚಿವ ಡಿ.ಕೆ. ಶಿವಕುಮಾರ್‌ 2008ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ ಪ್ರಮಾಣಪತ್ರ ಕಚೇರಿಯಲ್ಲಿ ಲಭ್ಯವಿಲ್ಲ’ ಎಂದು ಕನಕಪುರ ತಹಶೀಲ್ದಾರ್‌ ರಾಜ್ಯ ಮಾಹಿತಿ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

2008 ಮತ್ತು 2013ರ ಚುನಾವಣೆಗೆ ಸ್ಪರ್ಧಿಸುವಾಗ ಡಿ.ಕೆ. ಶಿವಕುಮಾರ್‌ ಸಲ್ಲಿಸಿದ ಆಸ್ತಿ ಮತ್ತು ಋಣಭಾರ ಘೋಷಣಾ ಪ್ರಮಾಣ ಪತ್ರದ ಪ್ರತಿ  ನೀಡುವಂತೆ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ಎಸ್‌. ಭಾಸ್ಕರನ್‌ 2014ರ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ನಮ್ಮ ಕಚೇರಿಯಲ್ಲಿ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ, ಈ ಅರ್ಜಿಯನ್ನು ರಾಮನಗರ ಜಿಲ್ಲಾಧಿಕಾರಿಗೆ ರವಾನಿಸಿತು. ಅವರು ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಕನಕಪುರ ತಹಶೀಲ್ದಾರ್‌ ಕಚೇರಿಗೆ ಹೊತ್ತು ಹಾಕಿದ್ದರು.

ADVERTISEMENT

ಆರ್‌ಟಿಐ ಕಾಯ್ದೆ ಪ್ರಕಾರ 30 ದಿನದೊಳಗೆ ಮಾಹಿತಿಯನ್ನು ನೀಡಬೇಕಿತ್ತು. ಅದನ್ನು ತಹಶೀಲ್ದಾರ್‌ ಮತ್ತು ಚುನಾವಣೆ ಆಯೋಗ ನೀಡದೇ ಇದ್ದಾಗ ಮೇಲ್ಮನವಿ ಪ್ರಾಧಿಕಾರಕ್ಕೆ ಭಾಸ್ಕರನ್‌ ದೂರು ಸಲ್ಲಿಸಿದರು. ಅಲ್ಲಿಯೂ ನಿಗದಿತ ಅವಧಿಯಲ್ಲಿ  ಮಾಹಿತಿ ಸಿಗದಿದ್ದಾಗ, ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಮೊರೆ ಹೋದರು.
ಅರ್ಜಿ ಸಲ್ಲಿಸಿದ 2 ವರ್ಷಗಳ ಬಳಿಕ,   ಶಿವಕುಮಾರ್‌ 2013ರಲ್ಲಿ ಸಲ್ಲಿಸಿದ ಪ್ರಮಾಣಪತ್ರದ ದೃಢೀಕೃತ ಪ್ರತಿಯನ್ನು ಕನಕಪುರ ತಹಶೀಲ್ದಾರ್‌ ಒದಗಿಸಿದರು. ಆದರೆ, ಅವರು 2008ರ ಮಾಹಿತಿ ನೀಡಲಿಲ್ಲ.

2016ರ ಡಿಸೆಂಬರ್‌ನಲ್ಲಿ ಮಾಹಿತಿ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ ತಹಶೀಲ್ದಾರ್‌, ‘ಡಿ.ಕೆ. ಶಿವಕುಮಾರ್‌ 2008ರಲ್ಲಿ ಕನಕಪುರ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಸ್ಫರ್ಧಿಸುವಾಗ ಸಲ್ಲಿಸಿದ ಘೋಷಣಾ ಪತ್ರ, ನಾಮಪತ್ರ ಮತ್ತು ಅದಕ್ಕೆ ಸಂಬಂಧಿಸಿದ ಯಾವ ದಾಖಲೆಗಳೂ ಈ ಕಚೇರಿಯಲ್ಲಿ ಲಭ್ಯವಿಲ್ಲ’ ಎಂದು ತಿಳಿಸಿದ್ದಾರೆ. ಹೀಗಾಗಿ ಇದೇ ವರ್ಷದ ಫೆಬ್ರುವರಿಯಲ್ಲಿ ಮಾಹಿತಿ ಆಯೋಗ ಅರ್ಜಿಯನ್ನು ಮುಕ್ತಾಯಗೊಳಿಸಿದೆ.

ಆರ್‌ಟಿಐ ಕಾರ್ಯಕರ್ತನ ಆಕ್ಷೇಪ: ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಎಸ್‌. ಭಾಸ್ಕರನ್‌, ‘ಆಸ್ತಿ ಘೋಷಣಾ ಪತ್ರವು ಚುನಾಯಿತ ಪ್ರತಿನಿಧಿಗಳ ಆಸ್ತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿರುವುದರ ಅಧಿಕೃತ ದಾಖಲೆ. ಇದನ್ನು ಸಂರಕ್ಷಿಸಬೇಕಾದುದು ಆಯೋಗ ಮತ್ತು ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್‌ ಜವಾಬ್ದಾರಿ. ಅದು ಇಲ್ಲವೆಂದು ಹೇಳುವ ಮೂಲಕ ತಹಶೀಲ್ದಾರ್‌ ಏನನ್ನೋ ಮುಚ್ಚಿಡುತ್ತಿದ್ದಾರೆ’ ಎಂದು ಆಪಾದಿಸಿದರು.

‘2008ರ ಆಸ್ತಿ  ಘೋಷಣಾ ಪತ್ರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಂತರ್ಜಾಲದಲ್ಲಿದೆ. ಆದರೆ, ಅದನ್ನು ಕಚೇರಿ ಒದಗಿಸಲಿಲ್ಲ. 2008 ಮತ್ತು 2013ರಲ್ಲಿ ಶಿವಕುಮಾರ್‌ ಸಲ್ಲಿಸಿದ ಆಸ್ತಿ ಘೋಷಣಾ ಪತ್ರ ಹೋಲಿಕೆ ಮಾಡಿದರೆ ಅವರ ಆಸ್ತಿ ಪ್ರಮಾಣ ₹150  ಕೋಟಿ ಹೆಚ್ಚಳವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ’ ಎಂದು ಅವರು ವಿವರಿಸಿದರು.

‘ಬೆನ್ನಿಗಾನಹಳ್ಳಿಯಲ್ಲಿ 2003ರಲ್ಲಿ 4 ಎಕರೆ 20 ಗುಂಟೆ ಜಮೀನನ್ನು ₹1.77 ಕೋಟಿ ನೀಡಿ  ಖರೀದಿಸಿದ್ದು, ಅದರ ಮಾರುಕಟ್ಟೆ ಮೌಲ್ಯ ₹23.62 ಕೋಟಿಯಾಗಿದೆ. ಓಕಳೀಪುರದಲ್ಲಿ 2004ರಲ್ಲಿ 1,17,821 ಚದರ ಅಡಿ ಭೂಮಿಯನ್ನು ₹8.59 ಕೋಟಿ ಕೊಟ್ಟು ಖರೀದಿಸಿದ್ದು, ಇದರ ಬೆಲೆ ₹38.76 ಕೋಟಿ ಆಗಿದೆ ಎಂಬ ಮಾಹಿತಿಯನ್ನು 2013ರಲ್ಲಿ ಶಿವಕುಮಾರ್‌ ಘೋಷಿಸಿದ್ದಾರೆ.

2008ರಲ್ಲಿ ಆಸ್ತಿ ಖರೀದಿ ಮೌಲ್ಯ ಮಾತ್ರ ಉಲ್ಲೇಖಿಸಿದ್ದ ಅವರು, 2013ರಲ್ಲಿ ಮಾರುಕಟ್ಟೆ ಮೌಲ್ಯವನ್ನೂ ಘೋಷಿಸಿದ್ದಾರೆ. ಪಂತರಪಾಳ್ಯ, ರಾಮಚಂದ್ರಾಪುರದ ಆಸ್ತಿಗಳ ಮೌಲ್ಯದಲ್ಲಿಯೂ ಇದೇ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಭಾಸ್ಕರನ್‌ ತಿಳಿಸಿದರು.

**
ತಹಶೀಲ್ದಾರ್‌ಗೆ ₹10 ಸಾವಿರ ದಂಡ

ಮಾಹಿತಿ ನೀಡಲು ವಿಫಲರಾಗಿದ್ದ ಕನಕಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್ ದಾಕ್ಷಾಯಿಣಿಗೆ  ಮಾಹಿತಿ ಆಯೋಗ ₹10 ಸಾವಿರ ದಂಡ ವಿಧಿಸಿದೆ.
2016ರ ಅಕ್ಟೋಬರ್‌ 25ರಂದು ವಿಚಾರಣೆ ನಡೆಸಿದ್ದ ಮಾಹಿತಿ ಆಯುಕ್ತ ಎನ್‌.ಪಿ. ರಮೇಶ್, 2 ವರ್ಷ 2 ತಿಂಗಳು ಕಳೆದರೂ ಮಾಹಿತಿ ನೀಡಿಲ್ಲ. ಹೀಗಾಗಿ ದಾಕ್ಷಾಯಿಣಿ ಅವರ ವೇತನದಿಂದ ಕಡಿತ  ಮಾಡಿ, ಆಯೋಗಕ್ಕೆ ಸಂದಾಯ ಮಾಡುವಂತೆ ಆದೇಶಿಸಿದ್ದರು.

**

ಡಿ.ಕೆ. ಶಿವಕುಮಾರ್ ಆಸ್ತಿ ಮೂರು ಪಟ್ಟು ಹೆಚ್ಚಿದೆ ಎಂಬ ಮಾಹಿತಿ ಇತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲು ದೃಢೀಕೃತ ದಾಖಲೆಗೆ ಅರ್ಜಿ ಸಲ್ಲಿಸಿದ್ದೆ
-ಎಸ್‌. ಭಾಸ್ಕರನ್‌
ಆರ್‌ಟಿಐ ಕಾರ್ಯಕರ್ತ

**

ಘೋಷಣಾ ಪತ್ರಗಳನ್ನು  ಚುನಾವಣಾಧಿಕಾರಿ ಕಚೇರಿಯಲ್ಲಿ  ಇಡಬೇಕು. 2008ರಲ್ಲಿ ನಾನು ಈ ಹುದ್ದೆಯಲ್ಲಿ ಇರಲಿಲ್ಲ. ಈ ಕುರಿತ ಮಾಹಿತಿ ತರಿಸಿಕೊಳ್ಳುತ್ತೇನೆ
-ಅನಿಲ್‌ಕುಮಾರ್‌ ಝಾ
ರಾಜ್ಯದ ಮುಖ್ಯ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.