ADVERTISEMENT

ಕೆಪಿಸಿಸಿ ಸಾರಥ್ಯ: ಮತ್ತಷ್ಟು ಹೆಚ್ಚಿದ ಲಾಬಿ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:29 IST
Last Updated 26 ಮೇ 2017, 20:29 IST
ಎಸ್‌.ಆರ್‌. ಪಾಟೀಲ
ಎಸ್‌.ಆರ್‌. ಪಾಟೀಲ   

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮತ್ತಷ್ಟುತೀವ್ರಗೊಂಡಿದೆ.

ಹಾಲಿ ಅಧ್ಯಕ್ಷ ಜಿ. ಪರಮೇಶ್ವರ್‌ ಹುದ್ದೆಯಲ್ಲಿ ಮುಂದುವರಿಯಲು ಯತ್ನಿಸುತ್ತಿರುವ ಮಧ್ಯೆಯೇ, ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಹೆಸರು  ಪ್ರಬಲವಾಗಿ ಕೇಳಿಬರುತ್ತಿದೆ.

‘2018ರ ವಿಧಾನಸಭಾ ಚುನಾವಣೆಗೆ ಒಂಬತ್ತು ತಿಂಗಳು ಮಾತ್ರ ಉಳಿದಿವೆ. ಈ ಸಂದರ್ಭದಲ್ಲಿ ಪಕ್ಷದ ಚುಕ್ಕಾಣಿಯನ್ನು ಹೊಸಬರಿಗೆ ನೀಡಿದರೆ ರಾಜಕೀಯವಾಗಿ ಯಾವ ರೀತಿ ಲಾಭ ಆಗಬಹುದು’ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್‌ ಇದೆ.

ರಾಜ್ಯದ ಪ್ರಮುಖರೊಂದಿಗೆ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಕೆಪಿಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಿರುವ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, 2–3 ದಿನಗಳ ಒಳಗೆ ಈ ಕುರಿತು ಗೊಂದಲ ಪರಿಹರಿಸುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ಆದರೆ, ಹೊಸ ನಾಯಕನನ್ನು ಆಯ್ಕೆ ಮಾಡುವ ಅಥವಾ ಪರಮೇಶ್ವರ್‌ ಅವರನ್ನು ಮುಂದುವರಿಸುವ ಕುರಿತು ಯಾವುದೇ ಸ್ಪಷ್ಟ ಸುಳಿವು ನೀಡದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೊರಗಿನಿಂದ ಬಂದವರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ವಿರೋಧಿಸುತ್ತಿರುವ ಅನೇಕ ನಾಯಕರು ಪರಮೇಶ್ವರ್‌ ಅವರನ್ನೇ ಸದ್ಯಕ್ಕೆ ಮುಂದುವರಿಸುವಂತೆ ವೇಣುಗೋಪಾಲ್‌ ಅವರ ಮೇಲೆ ಒತ್ತಡ ಹಾಕಿದ್ದಾರೆ.

ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್‌, ಪಕ್ಷದ ಆಂತರಿಕ ವಲಯದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ಪರವಾಗಿರುವ ನಾಯಕರ ಮೂಲಕ ವರಿಷ್ಠರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ.

ಆದರೆ, ಎಸ್‌.ಆರ್‌. ಪಾಟೀಲ ಪರ ಬಲವಾಗಿ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಮತ್ತು ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಪಾಟೀಲರೇ ಸೂಕ್ತ’ ಎಂದು ಬಿಂಬಿಸಿದ್ದಾರೆ.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೆಸರೂ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ಆದರೆ, ಅವರಿಗೆ ಆ ಸ್ಥಾನದ ಮೇಲೆ ಆಸಕ್ತಿ ಇದ್ದಂತಿಲ್ಲ.
ಇದೇ 29ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಸೇರಿದಂತೆ ವರಿಷ್ಠರನ್ನು ದೆಹಲಿಯಲ್ಲಿ ಭೇಟಿ ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಚರ್ಚೆ ನಡೆಸಲಿದ್ದಾರೆ.

ವೇಣುಗೋಪಾಲ್‌– ವಿಶ್ವನಾಥ್‌ ಭೇಟಿ
ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಎಚ್‌. ವಿಶ್ವನಾಥ್‌ ಅವರು ಶುಕ್ರವಾರ ಸಂಜೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಶ್ವನಾಥ್‌, ‘ನಾನು ಕಾಂಗ್ರೆಸ್‌ ಪಕ್ಷ ತ್ಯಜಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆ ಪಕ್ಷದಲ್ಲೇ ಇರುತ್ತೇನೆ. ಇಲ್ಲಿ ಇದ್ದುಕೊಂಡು ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.