ADVERTISEMENT

ಚಾಣಕ್ಯನ ತಂತ್ರ ಕರ್ನಾಟಕದಲ್ಲಿ ನಡೆಯಲ್ಲ: ಪರಮೇಶ್ವರ

ಚುನಾವಣೆ ಗೆಲ್ಲುವ ಭ್ರಮೆಯಲ್ಲಿ ಅಮಿತ್ ಷಾ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2017, 19:30 IST
Last Updated 15 ಆಗಸ್ಟ್ 2017, 19:30 IST
ಚಾಣಕ್ಯನ ತಂತ್ರ ಕರ್ನಾಟಕದಲ್ಲಿ ನಡೆಯಲ್ಲ: ಪರಮೇಶ್ವರ
ಚಾಣಕ್ಯನ ತಂತ್ರ ಕರ್ನಾಟಕದಲ್ಲಿ ನಡೆಯಲ್ಲ: ಪರಮೇಶ್ವರ   

ಬೆಂಗಳೂರು: ‘ಅಮಿತ್ ಷಾ ಅವರ ಚಾಣಕ್ಯ ತಂತ್ರ ಕರ್ನಾಟಕದಲ್ಲಿ ನಡೆಯುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಭವಿಷ್ಯ ನುಡಿದರು.

‘ಕರ್ನಾಟಕದಲ್ಲಿ ಆಡಳಿತಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಷಾ ಇದ್ದಾರೆ. ಉತ್ತರ ಪ್ರದೇಶದಲ್ಲಿ ನಿಮ್ಮ ಆಟ ನಡೆದಿರಬಹುದು. ನೀವು ಬಿಜೆಪಿಗೆ ಚಾಣಕ್ಯನೇ ಇರಬಹುದು. ಆದರೆ, ಕಾಂಗ್ರೆಸ್‌ ಮುಂದೆ ನಿಮ್ಮ ಆಟ ನಡೆಯುವುದಿಲ್ಲ’ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ನಿಮ್ಮ ಹಿನ್ನೆಲೆ ಏನು ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ನಿಮ್ಮ ಮೇಲೆ ಸಿಬಿಐ ದಾಖಲಿಸಿದ್ದ ಪ್ರಕರಣಗಳನ್ನು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ವಜಾ  ಮಾಡಿಸಿಕೊಂಡಿದ್ದೂ ಜನರಿಗೆ ಗೊತ್ತಿದೆ’ ಎಂದರು.

ADVERTISEMENT

‘ಅಮಿತ್ ಷಾ ಬಂದು ಹೋದ ಕೂಡಲೇ ಕಾಂಗ್ರೆಸ್‌ ನಲ್ಲಿ ಭೂಕಂಪ ಆಗಿದೆ ಎಂಬುದು ಸುಳ್ಳು. ನಮ್ಮ ಸರ್ಕಾರದ ಜನಪ್ರಿಯತೆ ಕಂಡು ಹೆದರಿ ಅವರೇ ಓಡಿ ಬಂದಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒಳಗೊಂಡಂತೆ ಎಲ್ಲ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದರೆ ನಮಗೆ ಹೆದರಿದ್ದಾರೆ ಎಂದೇ ಅರ್ಥ’ ಎಂದು ವಿಶ್ಲೇಷಿಸಿದರು.

‘ಭ್ರಷ್ಟಾಚಾರದ ವ್ಯಾಖ್ಯಾನ ಏನೆಂಬುದನ್ನು ಷಾ ಅವರು ಮೊದಲು ವಿವರಿಸಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಮಾರಿದ ನಿಮ್ಮ ಪಕ್ಷದ ಸಚಿವರನ್ನು ಏನೆಂದು ಕರೆಯಬೇಕು. ಅಂದಿನ ಮುಖ್ಯಮಂತ್ರಿ ಚೆಕ್‌ ಮೂಲಕ ಹಣ ಪಡೆದಿದ್ದು ಜಗತ್ತಿಗೆ ಗೊತ್ತಾಗಿದೆ. ಅದನ್ನು ಏನೆಂದು ಹೇಳಬೇಕು’ ಎಂದು ಪರಮೇಶ್ವರ ಪ್ರಶ್ನಿಸಿದರು.

‘ಭ್ರಷ್ಟಾಚಾರದಲ್ಲಿ ತೊಡಗಿದ್ದ ಹಿಂದಿನ ಸಚಿವರ ಮೇಲೆ ಹಲವು ಮೊಕದ್ದಮೆಗಳಿವೆ. ಇನ್ನೂ ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಜೈಲಿಗೆ ಹೋಗಿ ಬಂದವರನ್ನು ನಾಯಕರೆಂದು ಘೋಷಣೆ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುನ್ನ ಷಾ ಅವರು ತಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳಬೇಕು’ ಎಂದು ಟೀಕಿಸಿದರು.

ಐ.ಟಿ ದಾಳಿಗೆ ಜಗ್ಗಲ್ಲ: ಕೇಂದ್ರ ಹಣಕಾಸು ಸಚಿವರ ಸೂಚನೆಯಿಂದಲೇ ರಾಜ್ಯದ ಕಾಂಗ್ರೆಸ್‌ ನಾಯಕರ ಮೇಲೆ ಐ.ಟಿ ದಾಳಿ ನಡೆದಿದೆ. ದಾಳಿ ಎದುರಿಸಿದವರ ವಿರುದ್ಧ ಹೋರಾಟ ನಡೆಸಿ ಎಂದು ತಮ್ಮ ಕಾರ್ಯಕರ್ತರಿಗೆ ಷಾ ಸೂಚನೆ ನೀಡಿದ್ದಾರೆ. ಆ ಮೂಲಕ ಇದು ಉದ್ದೇಶಪೂರ್ವಕ ದಾಳಿ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದರು.

‘ಇದಕ್ಕೆ ಕಾಂಗ್ರೆಸ್‌ ಜಗ್ಗುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪಕ್ಷಕ್ಕೆ ಬಿಜೆಪಿ ವಿರುದ್ಧ ಹೋರಾಟ ಮಾಡುವುದೂ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

ಮತಯಂತ್ರ ದುರುಪಯೋಗದ ಅನುಮಾನ: ‘2018ರ ಚುನಾವಣೆಯಲ್ಲಿ ಬಿಜೆಪಿ, ಮತ ಯಂತ್ರಗಳನ್ನು ದುರುಪಯೋಗ ಮಾಡಿಕೊಳ್ಳುವ ಅನುಮಾನ ಇದೆ’ ಎಂದು ಪರಮೇಶ್ವರ ಹೇಳಿದರು.

‘ಕಾಂಗ್ರೆಸ್‌ ವಿರುದ್ಧ ಹೋರಾಟ ಮಾಡಿ, ಚುನಾವಣೆಯಲ್ಲಿ ಗೆಲ್ಲುವುದು ನಮಗೆ ಗೊತ್ತಿದೆ ಎಂದು ಅಮಿತ್ ಷಾ ಅವರು ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಮತಯಂತ್ರ ದುರುಪಯೋಗ ಮಾಡಿಕೊಳ್ಳುವ ಆಲೋಚನೆ ಇದೆ ಎಂಬ ಅನುಮಾನ ಹುಟ್ಟುತ್ತದೆ. ಕಾಂಗ್ರೆಸ್‌ ಅದಕ್ಕೆ ಅವಕಾಶ ಕೊಡುವುದಿಲ್ಲ. ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸಬೇಕು’ ಎಂದರು.

7 ಶಾಸಕರ ಸೇರ್ಪಡೆ ದೆಹಲಿಯಲ್ಲಿ ತೀರ್ಮಾನ: ಜೆಡಿಎಸ್‌ ಬಂಡಾಯ 7 ಶಾಸಕರನ್ನು ಕಾಂಗ್ರೆಸ್‌ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ದೆಹಲಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ ಹೇಳಿದರು.

‘ಬುಧವಾರ ಸಂಜೆ ಮುಖ್ಯಮಂತ್ರಿ ಅವರೊಂದಿಗೆ ನಾನೂ ದೆಹಲಿಗೆ ತೆರಳುತ್ತಿದ್ದೇನೆ. 7 ಶಾಸಕರು ಪಕ್ಷ ಸೇರ್ಪಡೆ ಬಗ್ಗೆ ಈಗಗಾಲೇ ಚರ್ಚೆಗಳು ನಡೆದಿವೆ. ಹೈಕಮಾಂಡ್ ಜೊತೆ ಮತ್ತೊಮ್ಮೆ ಚರ್ಚಿಸಲಾಗುವುದು’ ಎಂದರು.

‘ಸಚಿವ ಸಂಪುಟಕ್ಕೆ ಹೊಸದಾಗಿ ಮೂವರನ್ನು ಸೇರ್ಪಡೆ ಮಾಡಿಕೊಳ್ಳುವ ವಿಷಯವೂ ಚರ್ಚೆಗೆ ಬರಬಹುದು. ಆ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.