ADVERTISEMENT

ಜಲಸಾರಿಗೆ ಮಂಡಳಿ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 20:03 IST
Last Updated 27 ನವೆಂಬರ್ 2015, 20:03 IST

ಬೆಂಗಳೂರು: ರಾಜ್ಯದಲ್ಲಿ ಜಲಸಾರಿಗೆ ಮಂಡಳಿ ರಚನೆ ಹಾಗೂ ಕಾರ್ಯನಿರ್ವಹಣೆಗೆ ಅನುಕೂಲ ಕಲ್ಪಿಸುವ ಸಲುವಾಗಿ ‘ಕರ್ನಾಟಕ ಜಲಸಾರಿಗೆ ಮಂಡಳಿ ಮಸೂದೆ–2015’ನ್ನು ವಿಧಾನಸಭೆಯಲ್ಲಿ ಗುರುವಾರ ಚರ್ಚೆ ಇಲ್ಲದೆಯೇ ಅಂಗೀಕರಿಸಲಾಯಿತು.

ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು 56 ಪುಟಗಳ ಮಸೂದೆಯನ್ನು ಪರ್ಯಾಲೋಚನೆಗಾಗಿ ಮಂಡಿಸಿದರು. ಈ ಸಲುವಾಗಿ 2011ರ  ಕರ್ನಾಟಕ ಜಲಸಾರಿಗೆ ಮಂಡಳಿ ಮಸೂದೆಯನ್ನು ಹಿಂದಕ್ಕೆ ಪಡೆಯಲಾಯಿತು.

ಕಾರವಾರ, ಮಲ್ಪೆ, ತದಡಿ, ಹಳೆಮಂಗಳೂರು ಬಂದರುಗಳನ್ನು ಲೋಕೋಪಯೋಗಿ ಇಲಾಖೆಯು ಬಂದರುಗಳು ಮತ್ತು ಒಳನಾಡು ಜಲಸಾರಿಗೆ ನಿರ್ದೇಶಕರ ಮೂಲಕ ನಿರ್ವಹಿಸುತ್ತಿದೆ. ಇವುಗಳಲ್ಲಿ ಸಂಗ್ರಹವಾಗುವ  ರಾಜಸ್ವಗಳನ್ನು ರಾಜ್ಯದ ಸಂಚಿತ ನಿಧಿಯಲ್ಲಿ ಜಮೆ ಮಾಡಲಾಗುತ್ತಿದೆ.  ಈ ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ವೆಚ್ಚವನ್ನು ಆಯವ್ಯಯದ ಅನುದಾನದ ಮೂಲಕ ಭರಿಸಲಾಗುತ್ತಿದೆ.  ಅಭಿವೃದ್ಧಿ ಚಟುವಟಿಕೆಗೆ ಮಾರುಕಟ್ಟೆಯಿಂದ ನೇರವಾಗಿ ಹಣಕಾಸು ಪಡೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಈ ಹಿಂದಿನ ಜಲಸಾರಿಗೆ ಮಂಡಳಿ ಕಾಯ್ದೆಯನ್ನು  ಹಿಂದಕ್ಕೆ ಪಡೆದು, ಪರಿಷ್ಕೃತ ಕಾಯ್ದೆ ರೂಪಿಸುವಂತೆ ಕೇಂದ್ರ ಗೃಹಸಚಿವಾಲಯವು ಸಲಹೆ ನೀಡಿತ್ತು. ಗುಜರಾತ್‌, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಈಗಾಗಲೇ ಜಲಸಾರಿಗೆ ಮಂಡಳಿಯನ್ನು ಸ್ಥಾಪಿಸಿ ಬಂದರು ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿವೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಮಂಡಳಿನಿರ್ಮಿಸಲು ಸರ್ಕಾರ ಮುಂದಾಗಿದೆ.
*
ಕೊನೆಯ ದಿನ ಮಸೂದೆ ಮಂಡನೆ: ಬಿಜೆಪಿ ಆಕ್ಷೇಪ
‘ಸದನದ ಕಲಾಪ ಸುಗಮವಾಗಿ ನಡೆಯುತ್ತಿಲ್ಲ. ಕೊನೆ ದಿನ ಸರ್ಕಾರ ತರಾತುರಿಯಲ್ಲಿ ಯಾವುದೇ ಮಸೂದೆ ಮಂಡಿಸಬಾರದು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಇಷ್ಟಾಗಿಯೂ ಸಭಾಧ್ಯಕ್ಷರು ಮಸೂದೆ ಅಂಗೀಕರಿಸಲು ಅವಕಾಶ ನೀಡಿದರೆ, ಇನ್ನು ಮುಂದೆ ಕಲಾಪ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸಬೇಕಾಗುತ್ತದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.