ADVERTISEMENT

ಜಾಲತಾಣದ ಮೂಲಕ ಸಂಭ್ರಮ ವೀಕ್ಷಣೆ

ಧಾರವಾಡ ಸಾಹಿತ್ಯ ಸಂಭ್ರಮ 2017

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಧಾರವಾಡ: ಇಲ್ಲಿ ನಡೆಯುತ್ತಿರುವ ಧಾರವಾಡ ಸಾಹಿತ್ಯ ಸಂಭ್ರಮವನ್ನು ಜಾಲತಾಣದ (www.vividlipi.com) ಮೂಲಕ ದೇಶ ವಿದೇಶಗಳ ಸಾಹಿತ್ಯಾಸಕ್ತರು ವೀಕ್ಷಿಸುತ್ತಿದ್ದಾರೆ.

ಸಂಭ್ರಮದ ಮೊದಲ ದಿನ ಶುಕ್ರವಾರ ರಾತ್ರಿವರೆಗೆ 20,200  ಮಂದಿ ನೇರ ವೀಕ್ಷಣೆ ಮಾಡಿದ್ದಾರೆ. ಎರಡನೇ ದಿನ ಶನಿವಾವೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

ವೇದಿಕೆಯಲ್ಲಿ ನಡೆಯುವ ಎಲ್ಲ ಗೋಷ್ಠಿಗಳು ಮತ್ತು ಕಾರ್ಯಕ್ರಮಗಳನ್ನು ಅಮೆರಿಕ, ಕೆನಡಾ ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪುರ ಸೇರಿದಂತೆ ಹಲವು ದೇಶಗಳಲ್ಲಿನ ಕನ್ನಡ ಸಾಹಿತ್ಯಾಸಕ್ತ ಸಂಭ್ರಮವನ್ನು ನೋಡಿ ಆನಂದಿಸುತ್ತಿದ್ದಾರೆ.
*
ಎಡ–ಬಲಗಳ  ಗೋಷ್ಠಿ : ತಿದ್ದುಪಡಿ
ಧಾರವಾಡ:
 ಶನಿವಾರದ ಸಂಚಿಕೆಯಲ್ಲಿ, ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮೊದಲ ದಿನ ನಡೆದ ಎಡ–ಬಲಗಳ ನಡುವೆ? ಗೋಷ್ಠಿಯ ವರದಿಯಲ್ಲಿ ಕೆಲ ಅಂಶಗಳು ತಪ್ಪಾಗಿ ಪ್ರಕಟವಾಗಿವೆ.

ಲೇಖಕ ಮಂಜುನಾಥ ಅಜ್ಜಂಪುರ ಅವರು ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಹತ್ಯೆಗೆ ಆಸ್ತಿ ವಿವಾದ ಕಾರಣ ಎಂದು ಹೇಳಿದ್ದನ್ನು ಖಂಡಿಸಿದ ಸಭಿಕರು, ತೀವ್ರವಾಗಿ  ಪ್ರತಿಭಟಿಸಿದ್ದರಿಂದ ಕೋಲಾಹಲದ ವಾತಾವರಣ ಉಂಟಾಯಿತು.

ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ಮಂಜುನಾಥ, ‘ಆಸ್ತಿ ವಿವಾದವೇ ಕಲಬುರ್ಗಿ ಹತ್ಯೆಗೆ ಕಾರಣ ಎಂದು ಸಿಐಡಿ ವರದಿ ನೀಡಿದೆ’ ಎಂದರು. ಅವರ ಈ ಹೇಳಿಕೆಯಿಂದ ಕೆರಳಿದ ಸಭಿಕರು, ‘ಯಾವ ಆಧಾರದಲ್ಲಿ ನೀವು ಈ ರೀತಿ ಹೇಳುತ್ತಿದ್ದೀರಿ? ಪುರಾವೆ ನೀಡಿ’ ಎಂದು ಒತ್ತಾಯಿಸಿ, ಏರಿದ ಧ್ವನಿಯಲ್ಲಿ ವಾಗ್ವಾದಕ್ಕಿಳಿದರು.

ಅದಕ್ಕೆ ಮಂಜುನಾಥ ಅವರು, ‘ಇದು ನನ್ನ ಹೇಳಿಕೆಯಲ್ಲ. ಮಾಧ್ಯಮಗಳಲ್ಲಿ ಬಂದಿರುವುದನ್ನು ಹೇಳಿದ್ದೇನೆ’ ಎಂದು ಸಮಜಾಯಿಷಿ ನೀಡಿದರು. ‘ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿ ಆಧರಿಸಿ ಮಾತನಾಡುವ ಮೂಲಕ ತನಿಖೆಯ ಹಾದಿ ತಪ್ಪಿಸಲು ನೀವು ಯತ್ನಿಸಿದ್ದೀರಿ’ ಎಂದು ಸಭಿಕರು ಟೀಕಿಸಿದ್ದರು. ಈ ಪ್ರಮಾದಕ್ಕಾಗಿ ವಿಷಾದಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT