ADVERTISEMENT

ಡೊನೇಷನ್‌: ಶಾಲೆಗಳಿಗೆ ₹10 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 19:46 IST
Last Updated 28 ಮಾರ್ಚ್ 2017, 19:46 IST
ಡೊನೇಷನ್‌: ಶಾಲೆಗಳಿಗೆ  ₹10 ಲಕ್ಷ ದಂಡ
ಡೊನೇಷನ್‌: ಶಾಲೆಗಳಿಗೆ ₹10 ಲಕ್ಷ ದಂಡ   

ಬೆಂಗಳೂರು: ಅತಿ ಹೆಚ್ಚಿನ ಶುಲ್ಕ ಅಥವಾ ಡೊನೇಷನ್ ಸಂಗ್ರಹಿಸುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಿಗೆ ₹10 ಲಕ್ಷ ದಂಡ ವಿಧಿಸಬಹುದಾದ ಮಸೂದೆ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಯಿತು.

ಕರ್ನಾಟಕ ಶಿಕ್ಷಣ (ಎರಡನೇ ತಿದ್ದುಪಡಿ) ಮಸೂದೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌  ಮಂಡಿಸಿದರು.

ಕರ್ನಾಟಕ ಶಿಕ್ಷಣ ಕಾಯ್ದೆಯು ಸರ್ಕಾರಿ ಶಾಲೆಗಳು, ರಾಜ್ಯ ಸರ್ಕಾರ ಅನುಮತಿ ನೀಡುವ ಖಾಸಗಿ ಸಂಸ್ಥೆಗಳ ಮೇಲೆ ಮಾತ್ರ ನಿಯಂತ್ರಣ
ಹೊಂದಿದೆ.

ADVERTISEMENT

ಕೇಂದ್ರದ ಮಂಡಳಿಗಳಿಂದ ಅನುಮತಿ ಪಡೆಯುವ ಶಾಲೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲ.

ಈ ಶಾಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಅಧಿಕ ಶುಲ್ಕ  ಸಂಗ್ರಹ ತಡೆಯಲು ತಿದ್ದುಪಡಿ ತರಲಾಗುತ್ತಿದೆ ಎಂದು ತನ್ವೀರ್‌ ಸೇಠ್‌ ಹೇಳಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ ರಚಿಸಲಾಗುವುದು. ಶಾಲೆಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶುಲ್ಕ ಸಂಗ್ರಹ ಅಥವಾ ವರ್ಷಾಂತ್ಯದಲ್ಲಿ ಮರುಪಾವತಿ ಮಾಡುವುದಾಗಿ ಬೇರೆ ಯಾವುದೇ ರೀತಿಯಲ್ಲಿ ಹಣ ಸಂಗ್ರಹಿಸಿದಲ್ಲಿ ಪೋಷಕರು ಈ ಸಮಿತಿ ಮುಂದೆ ದೂರು ದಾಖಲಿಸಬಹುದು. ವಿಚಾರಣೆ ನಡೆಸಿದ ನಂತರ ಆರೋಪ ಸಾಬೀತಾದಲ್ಲಿ ₹ 10 ಲಕ್ಷ ದಂಡ ವಿಧಿಸಬಹುದಾಗಿದೆ ಎಂದರು.

ಶಾಲೆಯ ಯಾವುದೇ ಸಿಬ್ಬಂದಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದರೆ 6 ತಿಂಗಳ ಸೆರೆವಾಸ ಮತ್ತು ₹1 ಲಕ್ಷ ದಂಡ ವಿಧಿಸಬಹುದು. ಅಲ್ಲದೆ, ಶಿಕ್ಷಣ ಸಂಸ್ಥೆಯ ಮಾನ್ಯತೆ ರದ್ದುಪಡಿಸುವುದಕ್ಕೂ ಅವಕಾಶ ಇದೆ ಎಂದು  ಸೇಠ್‌ ವಿವರಿಸಿದರು.

ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ತರಲಾಗಿರುವ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಮಸೂದೆಯನ್ನೂ ವಿಧಾನಮಂಡಲ ಉಭಯ ಸದನಗಳಲ್ಲಿ ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.