ADVERTISEMENT

ದಕ್ಷಿಣದ ಜಿಲ್ಲೆಗಳಿಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 20:06 IST
Last Updated 16 ಏಪ್ರಿಲ್ 2017, 20:06 IST
ದಕ್ಷಿಣದ ಜಿಲ್ಲೆಗಳಿಗೆ ತಂಪೆರೆದ ಮಳೆ
ದಕ್ಷಿಣದ ಜಿಲ್ಲೆಗಳಿಗೆ ತಂಪೆರೆದ ಮಳೆ   

ಮೈಸೂರು:  ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಕೂಡಿದ ಮಳೆಯು ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ  ತಂಪೆರೆದಿದೆ.

ಮಂಡ್ಯದಲ್ಲಿ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ವಿದ್ಯುತ್‌ ಕಂಬ ಹಾಗೂ ಮರದ ರೆಂಬೆಗಳು ಮುರಿದು ಬಿದ್ದಿವೆ. ಅಶೋಕನಗರ, ರೈಲು ನಿಲ್ದಾಣದ ಬಳಿ ಹಾಗೂ ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಮರದ ರೆಂಬೆಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಶ್ರೀರಂಗಪಟ್ಟಣ, ಕೆರಗೋಡು, ಕೊಪ್ಪ ಪಟ್ಟಣ ಸೇರಿದಂತೆ ಬಹುಪಾಲು ಕಡೆ ಗುಡುಗು–ಸಿಡಿಲಿನಿಂದ ಕೂಡಿದ ಮಳೆ ಸುರಿಯಿತು.

ನಂಜನಗೂಡಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ  ಗುಡುಗು, ಮಿಂಚಿನಿಂದ ಕೂಡಿದ ಮಳೆ ಸುರಿಯಿತು. ಮೈಸೂರು ತಾಲ್ಲೂಕಿನ ಹಂಪಾಪುರ ಹೋಬಳಿ, ಚಾಮರಾಜನಗರ ಜಿಲ್ಲಾ ಕೇಂದ್ರ, ಮಲೆಮಹದೇಶ್ವರ ಬೆಟ್ಟ, ಯಳಂದೂರು ಪಟ್ಟಣ ಸೇರಿದಂತೆ ಹಲವೆಡೆ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.
ಉರುಳಿದ ಬಾಳೆಗಿಡ, ತೆಂಗಿನಮರ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಭಾನುವಾರ  ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿದೆ.
ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲಕೆರೆಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಬಿರುಗಾಳಿ ಬೀಸಿದ್ದರಿಂದ ಕೆಲವು ಬಾಳೆಗಿಡಗಳು ಹಾಗೂ ತೆಂಗಿನಮರಗಳು ಉರುಳಿಬಿದ್ದಿವೆ. ಕೆಲ್ಲೋಡು ಎಂಬಲ್ಲಿನ ಎ.ಕೆ.ಕಾಲೊನಿಯ ಹನುಮಣ್ಣ ಅವರ ಮನೆಯ ಶೀಟ್ ಹಾರಿಹೋಗಿದೆ.

ADVERTISEMENT

ವಾಯುಭಾರ ಕುಸಿತ: ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವೆಡೆ ಸೋಮವಾರ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ.

‘ಉತ್ತರ ತೆಲಂಗಾಣದಿಂದ ಅರಬ್ಬಿ ಸಮುದ್ರದವರೆಗೆ ವಾಯುಭಾರ ಕುಸಿತ ಉಂಟಾಗಿದೆ. ಇದರ ಸಾಲು ರಾಜ್ಯದ ಒಳನಾಡಿನಲ್ಲಿ ಹಾದು ಹೋಗಿದೆ. ಹೀಗಾಗಿ ಬೆಂಗಳೂರು, ಕೋಲಾರ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ  ಹಾಗೂ ಚಿತ್ರದುರ್ಗದ ಜಿಲ್ಲೆಗಳಲ್ಲಿ ಮಳೆ ಬೀಳುತ್ತಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಮೇತ್ರಿ ತಿಳಿಸಿದರು.

‘ಈ ಜಿಲ್ಲೆಗಳಲ್ಲಿ ಸೋಮವಾರವೂ ಮಳೆ ಬೀಳಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.