ADVERTISEMENT

ನಿಗಮ, ಮಂಡಳಿ ನೇಮಕ ಮೊದಲ ಪಟ್ಟಿ ಇಂದು?

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ನಿಗಮ, ಮಂಡಳಿಗಳ ನೇಮ­ಕಾತಿ ಕುರಿತು ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಅವರು ಸೋಮವಾರ ಸಭೆ ಸೇರುತ್ತಿ­ದ್ದಾರೆ. ಸುಮಾರು 50 ಜನರ ಮೊದಲ ಪಟ್ಟಿ ಈ ಸಭೆಯಲ್ಲೇ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಸಚಿವ ಸಂಪುಟ ವಿಸ್ತರಣೆಗೂ ಮೊದಲೇ ನಿಗಮ ಮತ್ತು ಮಂಡಳಿ­ಗಳಿಗೆ ನೇಮಕಾತಿ ಪೂರ್ಣ­ಗೊಳಿಸು­ವಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದೆ. ಸೆಪ್ಟೆಂಬರ್‌ ಅಂತ್ಯದೊಳಗೆ ನಾಮ­ಕರಣ ಪ್ರಕ್ರಿಯೆ ಮುಗಿಸಲು ಮುಂದಾ­ಗಿರುವ ಉಭಯ ನಾಯಕರು, ಪಟ್ಟಿಯನ್ನು ಅಂತಿಮ­ಗೊಳಿಸುವ ಕಸರತ್ತಿಗೆ ಕೈ ಹಾಕಿದ್ದಾರೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಸೋಮವಾರ ಇಡೀ ದಿನ­­ವನ್ನು ಈ ಕೆಲಸಕ್ಕಾಗಿ ಕಾಯ್ದಿರಿ­ಸಿ­ಕೊಂ­ಡಿದ್ದು, ಮೊದಲ ಪಟ್ಟಿಯನ್ನು ಅಂತಿಮ­ಗೊಳಿಸುವ ಯೋಚನೆ­ಯಲ್ಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿ­ಕಾರಕ್ಕೆ ಬಂದು ಒಂದೂ ಕಾಲು ವರ್ಷ ಕಳೆದಿದೆ. ಈವರೆಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕೆಲವು ಸ್ಥಾನಗಳಿಗೆ ಮಾತ್ರ ನಾಮಕರಣ ನಡೆದಿದೆ. ರಾಜ್ಯ­ಮಟ್ಟದ ನಿಗಮ, ಮಂಡಳಿಗಳು, ನಗರಾ­ಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಪ್ರಾಧಿಕಾರಗಳಿಗೆ ಈವ­ರೆಗೂ ನೇಮಕಾತಿ ನಡೆದಿಲ್ಲ. 70 ನಿಗಮ ಮಂಡಳಿಗಳು ಮತ್ತು 30 ನಗರಾ­ಭಿವೃದ್ಧಿ/ ನಗರ ಯೋಜನಾ ಪ್ರಾಧಿ­ಕಾರಗಳಲ್ಲಿ ಸ್ಥಾನ ಪಡೆಯಲು ಕಾಂಗ್ರೆಸ್‌ ಶಾಸಕರು, ಕಾರ್ಯಕರ್ತರು ಭಾರಿ ಪೈಪೋಟಿ ನಡೆಸುತ್ತಿದ್ದಾರೆ.

ಹಂಚಿಕೆಗೆ ಸೂತ್ರ: ಸಚಿವ ಸಂಪುಟ ಸೇರಲು ಒತ್ತಡ ತರುತ್ತಿರುವ ಹಲವು ಶಾಸಕರಿಗೆ ಪ್ರಮುಖ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಮನ­ವೊಲಿಸಲು ಸಿದ್ದರಾಮಯ್ಯ ಯೋಚಿಸಿ­ದ್ದಾರೆ. ಕೆಲವು ಶಾಸಕರ ಜೊತೆ ಈಗಾ­ಗಲೇ ಒಂದು ಸುತ್ತಿನ ಚರ್ಚೆಯನ್ನೂ ನಡೆಸಿದ್ದಾರೆ.

ಆದರೆ, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯ­ಕರ್ತರಿಗೆ ಮಂಡಳಿಗಳ ನೇಮಕಾತಿಯಲ್ಲಿ ಆದ್ಯತೆ ನೀಡ­ಬೇಕೆಂಬ ಕೂಗು ಬಲ­ವಾಗಿದೆ. ಶಾಸಕರು ಮತ್ತು ಕಾರ್ಯ­­ಕರ್ತರ ನಡುವೆ ಸ್ಥಾನ ಹಂಚಿಕೆಗೆ ಸೂತ್ರ­ವೊಂದನ್ನು ರೂಪಿ­ಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

50:50 ಸೂತ್ರ: ಶೇಕಡ 50ರಷ್ಟು ಸ್ಥಾನಗಳನ್ನು ಶಾಸಕರಿಗೆ ಮತ್ತು ಶೇ 50ರಷ್ಟು ಸ್ಥಾನಗಳನ್ನು ಕಾರ್ಯ­ಕರ್ತರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಹೈಕಮಾಂಡ್‌ ನಾಯಕರ ಜೊತೆ ಸಮಾಲೋಚನೆ ನಡೆಸಿ ಹಂಚಿಕೆ ಸೂತ್ರ­ವನ್ನು ನಿರ್ಧರಿಸ­ಲಾಗುತ್ತದೆ. ಆ ಬಳಿ­ಕವೇ ನೇಮಕಾತಿ ಪಟ್ಟಿ ಕುರಿತು ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ.

ಪಟ್ಟಿ ವಿನಿಮಯ: ಕಾಂಗ್ರೆಸ್‌ನ ಸುಮಾರು ಆರು ಸಾವಿರ ಕಾರ್ಯ­ಕರ್ತರು ನಿಗಮ, ಮಂಡಳಿಗಳಲ್ಲಿ ಸ್ಥಾನ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ­ಗಳಿಂದಲೂ ಈ ಸಂಬಂಧ ಶಿಫಾರಸುಗಳು ಬಂದಿವೆ. ಅವುಗಳ ಪರಿಶೀಲನೆ ನಡೆಸಿರುವ ಕೆಪಿಸಿಸಿ ಅಧ್ಯಕ್ಷರು ನೇಮಕಾತಿಗೆ ಪರಿಗಣಿಸಲು ಸೂಕ್ತವಾದವರ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದ್ದಾರೆ. ಇದೇ ರೀತಿ ಮುಖ್ಯಮಂತ್ರಿಯವರ ಕಚೇರಿಗೂ ಹಲವು ಅರ್ಜಿಗಳು ಬಂದಿವೆ. ಕೆಲವು ಶಾಸಕರು ನೇರವಾಗಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ. ಮುಖ್ಯಮಂತ್ರಿಯವರ ಆಪ್ತ ಶಾಖೆ ಕೂಡ ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ.

ಜಾತಿವಾರು ಪ್ರಾತಿನಿಧ್ಯ, ಪ್ರಾದೇಶಿಕತೆ, ಹಿರಿತನ ಮತ್ತಿತರ ಅಂಶಗಳನ್ನು ಆಧರಿಸಿ ಈ ಪಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಎರಡೂ ಪಟ್ಟಿಗಳನ್ನು ಸೋಮವಾರದ ಸಭೆಯ ವೇಳೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ವಿನಿಮಯ ಮಾಡಿಕೊಳ್ಳುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್‌ಗೆ ಪಟ್ಟಿ: 50 ಸ್ಥಾನಗಳನ್ನು ಮೊದಲ ಹಂತ­ದಲ್ಲಿ ಭರ್ತಿ ಮಾಡಲು ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಯೋಚಿಸಿದ್ದಾರೆ. ಪಟ್ಟಿ ಅಂತಿಮಗೊಂಡ ಬಳಿಕ ಹೈಕಮಾಂಡ್‌ ವರಿಷ್ಠರ ಜೊತೆ ಸಮಾಲೋಚಿಸಿ, ಪ್ರಕಟಿಸಲು ನಿರ್ಧರಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಮನವೊಲಿಸಲು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಮತ್ತು ರಾಜಕೀಯ ಕಾರ್ಯದರ್ಶಿಗಳ ಹುದ್ದೆ ಸೃಷ್ಟಿಸುವ ಬಗ್ಗೆಯೂ ಮಾತುಕತೆ ವೇಳೆ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಅಸಮರ್ಥ ಸಚಿವರ ಕುರಿತು ತೀರ್ಮಾನ: ಪರಮೇಶ್ವರ
ತುಮಕೂರು: ಅಸಮರ್ಥ ಸಚಿವರ ಕುರಿತು ಆಂತರಿಕ ಮಾತು­ಕತೆಯಲ್ಲಿ ತೀರ್ಮಾನ ತೆಗದುಕೊಳ್ಳಲಾ­ಗು­ವುದು. ಸಚಿವರ ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ  ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೇಳಿದರು.

ADVERTISEMENT

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತ­ನಾಡಿದ ಅವರು, ಡಿಸಿಎಂ ಹುದ್ದೆ ಕುರಿತು ಗೊಂದಲ ಇದೆ ಎಂಬುದು ಮಾಧ್ಯಮಗಳ ಊಹಾಪೋಹ ವರದಿ ಎಂದರು.ಇದಕ್ಕೆ ಮುನ್ನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬರುವಲ್ಲಿ ನನ್ನ ಶ್ರಮವೂ ಇದೆ. ಜನಸೇವೆ ಮಾಡಲು ಸಂಪುಟದಲ್ಲಿ ನನಗೆ ಅವಕಾಶ ಕೊಡಬೇಕಾಗಿತ್ತು ಎಂದು ಹೇಳಿದರು.

ಈ ತಿಂಗಳೊಳಗೆ ನಿಗಮ, ಮಂಡಳಿಗೆ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು. ಪ್ರತ್ಯೇಕ ರಾಜ್ಯ ಸ್ಥಾಪನೆಯ ಕುರಿತು ಶಾಸಕ ಉಮೇಶ್‌ ಕತ್ತಿ ಹೇಳಿಕೆ ಸರಿಯಲ್ಲ. ಭಾಷೆ, ಸಂಸ್ಕೃತಿ ಆಧಾರದ ಮೇಲೆ ರಾಜ್ಯ ರಚನೆಯಾ­ಗಿದೆ. ಯಾವುದೇ ಕಾರಣಕ್ಕೂ ರಾಜ್ಯ ಒಡೆಯುವ ಮಾತನಾಡಬಾರದು ಎಂದರು.

ಕುತೂಹಲ ಕೆರಳಿಸಿದ ಭೇಟಿ
ಸಂಪುಟ ವಿಸ್ತರಣೆ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಅವರು ಈ ತಿಂಗಳ ಮೊದಲ ವಾರ ದೆಹಲಿಗೆ ತೆರಳಿ­ದ್ದರು. ಆದರೆ, ಕೆಲ ದಿನಗಳವರೆಗೂ ಸಂಪುಟ ವಿಸ್ತರಣೆ ಬೇಡ ಎಂಬ ಮುಖ್ಯ­ಮಂತ್ರಿಯವರ ಕೋರಿಕೆಗೆ ಹೈಕಮಾಂಡ್‌ ಒಪ್ಪಿಗೆ ಸೂಚಿಸಿತ್ತು.

ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆಯೂ ಕಾಂಗ್ರೆಸ್‌ ಹೈಕಮಾಂಡ್‌ ನಕಾರಾತ್ಮಕ ಧೋರಣೆ ತಳೆದಿದೆ. ಇದರಿಂದ ಸ್ವತಃ ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ­ಯಾದ ಪರಮೇಶ್ವರ್‌ ಅವರಿಗೆ ಹಿನ್ನಡೆ ಆಗಿತ್ತು. ದೆಹಲಿ ಭೇಟಿಯ ಬಳಿಕ ಇಬ್ಬರೂ ನಾಯಕರು ಮೊದಲ ಬಾರಿಗೆ ಮುಖಾಮುಖಿ ಆಗುತ್ತಿದ್ದಾರೆ. ಹೀಗಾಗಿ ಈ ಭೇಟಿ ಬಗ್ಗೆ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.