ADVERTISEMENT

ಬಡ್ತಿ ಮೀಸಲು ಕಾಯ್ದೆ : ಪರಿಶಿಷ್ಟರ ಹಿತಕ್ಕೆ ಕಸರತ್ತು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 19:44 IST
Last Updated 3 ಏಪ್ರಿಲ್ 2018, 19:44 IST
ಬಡ್ತಿ ಮೀಸಲು ಕಾಯ್ದೆ : ಪರಿಶಿಷ್ಟರ ಹಿತಕ್ಕೆ ಕಸರತ್ತು
ಬಡ್ತಿ ಮೀಸಲು ಕಾಯ್ದೆ : ಪರಿಶಿಷ್ಟರ ಹಿತಕ್ಕೆ ಕಸರತ್ತು   

ಬೆಂಗಳೂರು: ಬಡ್ತಿ ಮೀಸಲು ಕಾಯ್ದೆ ರದ್ದು‍ಪಡಿಸಿ ಸುಪ್ರೀಂ ಕೋರ್ಟ್‌ 2017ರ ಫೆ. 9ರಂದು ನೀಡಿದ ಆದೇಶ ಪಾಲನೆಯಿಂದ ಹಿಂಬಡ್ತಿಗೆ ಒಳಗಾಗುವ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ಕಸರತ್ತು ನಡೆಸುತ್ತಿದೆ.

ಜೊತೆಗೆ, ಮುಂಬಡ್ತಿ– ಹಿಂಬಡ್ತಿ ಕ್ರಮ ತೆಗೆದುಕೊಳ್ಳಲು ಎರಡು ತಿಂಗಳ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಕೂಡಾ ಸರ್ಕಾರ ಚಿಂತನೆ ನಡೆಸಿದೆ.

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅಂತಿಮಗೊಳಿಸಿ ಹಿಂಬಡ್ತಿಗೆ ಒಳಗಾಗುವವರ ಸಮಗ್ರ ಚಿತ್ರಣ ಸಿಕ್ಕಿದ ಬಳಿಕ, ಅಂಥ ನೌಕರರ ಬಗ್ಗೆ ಯಾವ ರೀತಿ ಕ್ರಮ ವಹಿಸಬಹುದೆಂದು ತೀರ್ಮಾನಿಸಲಾಗುವುದು ಎಂದು ಎಲ್ಲ ಇಲಾಖೆಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ.

ADVERTISEMENT

ಆದರೆ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌)ದ ನಿರ್ದೇಶಕರು ಈ ಸುತ್ತೋಲೆಯನ್ನೇ ಉಲ್ಲೇಖಿಸಿ, ‘ಸಿ’ ಮತ್ತು ‘ಡಿ’ ಗುಂಪಿನ ನೌಕರರಿಗೆ ಮುಂಬಡ್ತಿ ಹಿಂಬಡ್ತಿ ನೀಡಿದ ಕ್ರೋಡೀಕೃತ ಪಟ್ಟಿಯನ್ನು ನಿಗಮಕ್ಕೆ ಸಲ್ಲಿಸುವಂತೆ ಎಲ್ಲ ಎಸ್ಕಾಂಗಳ (ವಿದ್ಯುತ್‌  ಸರಬರಾಜು ಕಂಪನಿ) ಪ್ರಧಾನ ವ್ಯವಸ್ಥಾಪಕರಿಗೆ ಮತ್ತು ಪ್ರಸರಣ ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಮಧ್ಯೆ, ಹಿಂಬಡ್ತಿ ಆತಂಕದ ಭೀತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರು ಸಾಮೂಹಿಕ ಸ್ವಯಂ ನಿವೃತ್ತಿ ಅಥವಾ ದೀರ್ಘ ಅವಧಿಗೆ ರಜೆ ಪಡೆದು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಲು ಚಿಂತನೆ ನಡೆಸಿದ್ದಾರೆ. ಡಿಪಿಎಆರ್‌ ಸುತ್ತೋಲೆಗೆ ವ್ಯತಿರಿಕ್ತವಾಗಿ ನಿಗಮ ನೀಡಿದ ನಿರ್ದೇಶನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘ, ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದೆ.

ಮುಂದಿನ ನಡೆ: ಏ. 14ರಂದು ಘೋಷಣೆ

ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸೆಟೆದು ನಿಂತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಸಂಘ, ಇದೇ 14ರಂದು ಮುಂದಿನ ಹೋರಾಟದ ನಡೆಯನ್ನು ಘೋಷಿಸಲು ನಿರ್ಧರಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕರ್ನಾಟಕ ವಿದ್ಯುತ್‌ ಮಂಡಳಿಯ (ಕೆಇಬಿ) ಎಸ್‌.ಸಿ, ಎಸ್‌.ಟಿ ವೆಲ್ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಕೆ. ದಾಸಪ್ರಕಾಶ್‌, ಯಾವುದೇ ಕಾರಣಕ್ಕೂ ಹಿಂಬಡ್ತಿ ನೀಡದಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

‘ಚುನಾವಣೆ ಹತ್ತಿರದಲ್ಲಿರುವಾಗ ಯಾವ ಕ್ರಮ ತೆಗೆದುಕೊಳ್ಳಬೇಕು. ಸಾಮೂಹಿಕವಾಗಿ ನಿವೃತ್ತಿ ಅಥವಾ ರಜೆ ತೆಗೆದುಕೊಳ್ಳಬೇಕಾ ಅಥವಾ ಪ್ರತಿಭಟನೆ ಹಮ್ಮಿಕೊಳ್ಳಬೇಕಾ ಎಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸುತ್ತೇವೆ’ ಎಂದೂ ತಿಳಿಸಿದರು.

ಚುನಾವಣೆ ಮೇಲೆ ಪರಿಣಾಮ?

ಹಿಂಬಡ್ತಿ ಆದೇಶ ಅನುಷ್ಠಾನವಾದರೆ 20 ಸಾವಿರಕ್ಕೂ ಹೆಚ್ಚು ಎಸ್‌.ಸಿ, ಎಸ್‌.ಟಿ  ನೌಕರರ ಮೇಲೆ ಪರಿಣಾಮ ಬೀರಲಿದೆ. ಇದು ಚುನಾವಣೆ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ ಎಂಬ ಕಾರಣವನ್ನು ಸುಪ್ರೀಂಕೋರ್ಟ್‌ಗೆ ಸರ್ಕಾರ ಸಲ್ಲಿಸಲಿರುವ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಿದೆ ಎಂದು ಗೊತ್ತಾಗಿದೆ.

ಇದೇ ಕಾರಣ ಮುಂದಿಟ್ಟು, ಲೋಕೋಪಯೋಗಿ ಇಲಾಖೆ 275 ಸಹಾಯಕ ಎಂಜಿನಿಯರ್‌ಗಳ (ಎಇ) ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಹುದ್ದೆಗೆ ಮುಂಬಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.