ADVERTISEMENT

ಬಾರದ ಆರೋಗ್ಯ ಕವಚ ರಸ್ತೆಯ ಮೇಲೆ ಹೆರಿಗೆ!

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 20:06 IST
Last Updated 24 ಜುಲೈ 2016, 20:06 IST
ಕಾಳಗಿ ಬಸ್‌ನಿಲ್ದಾಣ ಮುಂಭಾಗದ ರಸ್ತೆಯ ಮೇಲೆ ಗರ್ಭಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ಜರುಗಿತು
ಕಾಳಗಿ ಬಸ್‌ನಿಲ್ದಾಣ ಮುಂಭಾಗದ ರಸ್ತೆಯ ಮೇಲೆ ಗರ್ಭಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ಜರುಗಿತು   

ಕಾಳಗಿ: ತವರಿನಿಂದ ಪತಿಯ ಊರಿಗೆ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡು, ರಸ್ತೆ ಮೇಲೆಯೇ ಮಗುವಿಗೆ ಜನ್ಮ ನೀಡಿದ ಘಟನೆ ಇಲ್ಲಿನ ಬಸ್‌ನಿಲ್ದಾಣ ಮುಂಭಾಗದಲ್ಲಿ ಭಾನುವಾರ ನಡೆದಿದೆ.

ಸಮೀಪದ ರಾಜಾಪುರ ಗ್ರಾಮದ ದೇವಕಿ ರಮೇಶ ದೊಡ್ಡಮನಿ ಎಂಬುವರೇ ಗಂಡು ಮಗುವಿಗೆ ಜನ್ಮ ನೀಡಿದವರು.
ಕಾಟಮ್‌ದೇವರಹಳ್ಳಿಯ ತವರು ಮನೆಯಿಂದ ತಮ್ಮ ತಾಯಿ ಚಂದಮ್ಮ, ನಾದಿನಿ ಶಿವಲೀಲಾ ಅವರೊಂದಿಗೆ ರಾಜಾಪುರದ ಪತಿಯ ಮನೆಗೆ ಹೋಗಲು ಇಲ್ಲಿನ ಬಸ್‌ನಿಲ್ದಾಣಕ್ಕೆ ಬಂದಿದ್ದರು.

ಇದ್ದಕ್ಕಿದ್ದಂತೆ ಹೆರಿಗೆ ಬೇನೆ ಶುರುವಾಗಿ ಒದ್ದಾಡಲು ಆರಂಭಿಸಿದರು. ಜತೆಗಿದ್ದ ತಾಯಿ ಚಂದಮ್ಮ ಹಾಗೂ ನಾದಿನಿ ಶಿವಲೀಲಾ ದಿಕ್ಕು ತೋಚದಂತಾದರು.

ಸ್ಥಳೀಯ ಇಬ್ರಾಹಿಂಪಾಶಾ ಗಿರಣಿಕರ್ ಮತ್ತು ಅಕ್ಕಪಕ್ಕದ ಮಹಿಳೆಯರು ಗರ್ಭಿಣಿಯ ನೋವನ್ನು ಗಮನಿಸಿದರು. ಕೂಡಲೇ 108 ಆರೋಗ್ಯ ಕವಚದ ಕಾಳಗಿ, ಸುಲೇಪೇಟ, ಚಂದನಕೇರಾ ಕೇಂದ್ರಕ್ಕೆ ಕರೆ ಮಾಡಿದರು. ಆದರೆ ಯಾವೊಂದು ವಾಹನವೂ ಬರಲಿಲ್ಲ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದವರೂ ಸ್ಪಂದಿಸಲಿಲ್ಲ.

ಸಮಯ ಮೀರಿದಂತೆ ಬೇನೆ ಹೆಚ್ಚಾಗುತ್ತ ಹೋಯಿತು. ಆಗ ಅಕ್ಕಪಕ್ಕದ ಮಹಿಳೆಯರೇ ಗರ್ಭಿಣಿಯ ನೆರವಿಗೆ ಬಂದು ರಸ್ತೆ ಮೇಲೆಯೆ ಹೆರಿಗೆ ಮಾಡಿಸಿದರು.

ನಂತರ ಸ್ಥಳಕ್ಕೆ ಬಂದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಬಾಣಂತಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆತಂದು ಉಪಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.