ADVERTISEMENT

ಮಂಡ್ಯ: ಮರಳು ಗಣಿಗಾರಿಕೆ ನಿಷೇಧ ಲೆಕ್ಕಕ್ಕಿಲ್ಲ

ಅಕ್ರಮ ಮರಳು ಗಣಿಗಾರಿಕೆ 7

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಮಂಡ್ಯ: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮರಳಿಗೆ ಸಿಗುವ ಚಿನ್ನದಂಥ ಬೆಲೆಯಿಂದಾಗಿ ಅಕ್ರಮ ಮರಳು ದಂಧೆ ಜಿಲ್ಲೆಯಲ್ಲಿ ಜೋರಾಗಿದೆ. ಜಿಲ್ಲೆಯಲ್ಲಿ ಮರಳನ್ನು ಮಾರಿದರೆ ಸಿಗುವ ಲಾಭದ ಎರಡು ಪಟ್ಟು ದುಡ್ಡು ಬೆಂಗಳೂರಿಗೆ ಮಾರಾಟ ಮಾಡಿದರೆ ಸಿಗುತ್ತದೆ. ಹೀಗಾಗಿ, ಮರಳು ದಂಧೆ `ಚಿನ್ನ'ದ ಮೊಟ್ಟೆ ಇಡುವ ಕೋಳಿಯಾಗಿದೆ.

ರಾಜಕೀಯ ನಾಯಕರ ಒತ್ತಡ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೂ ಸೇರಿಕೊಂಡ ಪರಿಣಾಮ ಕಾವೇರಿ ಸೇರಿದಂತೆ ಜಿಲ್ಲೆಯಲ್ಲಿನ ಹೇಮಾವತಿ, ಶಿಂಷಾ, ಲೋಕಪಾವನಿ ನದಿಗಳ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಲೇ ಸಾಗಿವೆ.

ನಿತ್ಯ 200ಕ್ಕೂ ಹೆಚ್ಚು ಲಾರಿ ಮರಳು ಮಳವಳ್ಳಿ ಹಾಗೂ ಮದ್ದೂರು ಭಾಗದಿಂದ ಬೆಂಗಳೂರಿನತ್ತ ಸಾಗುತ್ತವೆ. ಇನ್ನೊಂದೆಡೆ ಕೆ.ಆರ್. ಪೇಟೆ ಕಡೆಯಿಂದ ಮೈಸೂರಿಗೂ ಕಳುಹಿಸಲಾಗುತ್ತದೆ. ಅಕ್ರಮ ಮರಳು ಸಾಗಾಣಿಕೆ ತಡೆಗೆ ಚೆಕ್‌ಪೋಸ್ಟ್ ಹಾಗೂ ಸಂಚಾರ ತಂಡಗಳನ್ನು ರಚಿಸಲಾಗಿದೆಯಾದರೂ, ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಬಿದ್ದಿಲ್ಲದಿರುವುದು ಜಿಲ್ಲೆಯ ನದಿಪಾತ್ರದಲ್ಲಿ ಸಂಚರಿಸಿದಾಗ ಕಂಡುಬರುತ್ತದೆ.

ಜಿಲ್ಲೆಯಲ್ಲಿ ಒಂದು ಲಾರಿ ಮರಳಿಗೆ ರೂ10 ಸಾವಿರ  ಲಭಿಸಿದರೆ, ಬೆಂಗಳೂರಿನಲ್ಲಿ ರೂ 20ರಿಂದ ರೂ25 ಸಾವಿರಕ್ಕೆ ಮಾರಾಟ ಆಗುತ್ತದೆ. ಸಾಗಾಣಿಕೆ ವೆಚ್ಚ ಕಳೆದರೂ ಲಾಭಕ್ಕೇನು ಕೊರತೆಯಿಲ್ಲ. ಪರಿಣಾಮ ಮರಳು ಗಣಿಗಾರಿಕೆಯ ಮೇಲೆ ರಾಜಕೀಯ ಮುಖಂಡರ ಕಣ್ಣೂ ಬಿದ್ದಿದೆ. ಜಿಲ್ಲೆಯಲ್ಲಿ ಅಧಿಕೃತವಾಗಿ ಮರಳು ತೆಗೆಯಲು ಅನುಮತಿ ನೀಡಿರುವುದು ಮಳವಳ್ಳಿ ಹಾಗೂ ಕೆ.ಆರ್. ಪೇಟೆಯ ಕೆಲವು ಕಡೆಗಳಲ್ಲಿ ಮಾತ್ರ. ಆದರೆ, ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಲೇ ಇದೆ. ಪ್ರಕರಣಗಳೂ ದಾಖಲಾಗುತ್ತಲೇ ಇವೆ.

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಮರಳು ತೆಗೆಯಲು ಲೋಕೋಪಯೋಗಿ ಹಾಗೂ ಬಂದರು ಇಲಾಖೆಯು ಯಾವುದೇ ಅನುಮತಿ ನೀಡಿಲ್ಲ. ಕಾವೇರಿ ನದಿ ಹರಿಯುವ ಗಂಜಾಂ ಹಾಗೂ ಮಹದೇವಪುರ ಸಮೀಪದಲ್ಲಿ ಮತ್ತು ಲೋಕಪಾವನಿ ನದಿಯ ಹರಿಯುವ ಚಂದನಗಿರಿಕೊಪ್ಪಲು ಬಳಿ ನದಿಯಿಂದ ಮರಳು ತೆಗೆದು ಸಾಗಿಸುವ ಕೆಲಸ ನಡೆದಿದೆ. ಮಳವಳ್ಳಿ ತಾಲ್ಲೂಕಿನ ಕಾವೇರಿ ನದಿಯ ಪೂರಿಗಾಲಿ, ಬಿಳಿಜಗಲಿ, ಮೊಳೆ ಗ್ರಾಮಗಳ ಬಳಿ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಅಲ್ಲಿಯೇ ಸಂಗ್ರಹಿಸಲು ಯಾರ್ಡ್ ಕೂಡ ಮಾಡಲಾಗಿದೆ. ಜತೆಗೆ, ಬೇರೆಡೆಯೂ ಮರಳು ತೆಗೆಯುವ ಕೆಲಸ ನಡೆದೇ ಇದೆ.

ನಿಷೇಧ ಲೆಕ್ಕಕ್ಕಿಲ್ಲ:  ಜಿಲ್ಲೆಯ ಶಿಂಷಾ ನದಿ ಪಾತ್ರದಲ್ಲಿ ನಿಷೇಧ ವಿಧಿಸಿದ್ದರೂ ಲೆಕ್ಕಕ್ಕೇ ಇಲ್ಲ ಎಂಬ ಸ್ಥಿತಿ ಇದೆ. ನದಿಯ ಒಡಲನ್ನು ಬಗೆದು ಅಕ್ರಮವಾಗಿ ಮರಳನ್ನು ಎತ್ತುವ ಕೆಲಸ ನಿರಾಂತಕವಾಗಿ ನಡೆದಿದೆ. ದಾಳಿ ನಡೆಸಿದರೂ, ನಿರಾಂತಕವಾಗಿ ದಂಡ ಕಟ್ಟಿ ಬಂದು ಮತ್ತೆ ಅದೇ ಕೆಲಸ  ಮುಂದುವರಿಸಲಾಗುತ್ತಿದೆ. ನದಿಯ ಪಾತ್ರದ ಬಹುತೇಕ ಕಡೆಗಳಲ್ಲಿ ಗುಂಡಿಗಳನ್ನು ಕಾಣಬಹುದಾಗಿದೆ. ನಿತ್ಯವೂ ಹತ್ತಾರು ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಾಟವಾಗುತ್ತಲೇ ಇದೆ.

ವೈದ್ಯನಾಥಪುರ ಬಳಿ 1994ರಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಮರಳು ಗಣಿಕಾರಿಕೆಯೂ ಸೇರಿ ಕಳಪೆ ಕೆಲಸದ ಪರಿಣಾಮವಾಗಿ ಕೆಲವೇ ವರ್ಷಗಳಲ್ಲಿ ಸೇತುವೆ ಕುಸಿದು ಬಿತ್ತು. ಎರಡು ವರ್ಷಗಳ ಹಿಂದೆ ರೂ 20 ಲಕ್ಷ   ಖರ್ಚು ಮಾಡಿ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳು ತಿರುಗಾಡಲು ಕಬ್ಬಿಣದ ಸಣ್ಣ ಸೇತುವೆ ನಿರ್ಮಿಸಲಾಗಿದೆ. ಇಲ್ಲಿ ಮರಳು ಗಣಿಗಾರಿಕೆ ಮಾಡುವುದನ್ನು 2000ನೇ ಇಸವಿಯಲ್ಲಿಯೇ ನಿಷೇಧಿಸಲಾಗಿದೆ. ಆದರೆ, ಮರಳು ತೆಗೆಯುವ ಕೆಲಸ ಮಾತ್ರ ಇಂದಿಗೂ ನಿಂತಿಲ್ಲ.

ರೈತರ ದೂರು: ಶಿಂಷಾ ಹಾಗೂ ಲೋಕಪಾವನಿ ಸಣ್ಣ ನದಿಗಳಾಗಿವೆ. ಅಲ್ಲಿ ಮರಳು ಗಣಿಗಾರಿಕೆ ಮಾಡುತ್ತಿರುವುದರಿಂದ ಸುತ್ತಲಿನ ಅಂತರ್ಜಲ ಮಟ್ಟದಲ್ಲಿ ಕುಸಿತ ಉಂಟಾಗಿದೆ. ನದಿ ದಡಗಳನ್ನು ಕೊರೆಯುವುದರಿಂದ ಮಳೆಗಾಲದಲ್ಲಿ ನದಿ ನೀರು ಜಮೀನುಗಳಿಗೂ ನುಗ್ಗುತ್ತದೆ. ನದಿಯ ಹರಿವೂ ಸಣ್ಣಗೆ ಬದಲಾಗುತ್ತದೆ ಎಂದು ದೂರುತ್ತಾರೆ ರೈತರು.

ತಹಶೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಆಗಾಗ ಶಿಂಷಾ ನದಿಯಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಯ ತಾಣಗಳ ಮೇಲೆ ದಾಳಿ ನಡೆಸಿ, ಕೊಪ್ಪರಿಕೆ ಹಾಗೂ ಮರಳನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ, ಪ್ರಯೋಜನ ಮಾತ್ರ ಶೂನ್ಯ.

30 ಕೋಟಿ ವರಮಾನ
ಕಳೆದ ಸಾಲಿನಲ್ಲಿ 3,42,639 ಕ್ಯೂಬಿಕ್ ಮೀಟರ್ ಮರಳು ಮಾರಾಟ ಮಾಡಿದ್ದರಿಂದ ್ಙ 30 ಕೋಟಿ ವರಮಾನ ಬಂದಿದೆ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ತಂಡಗಳನ್ನೂ ರಚಿಸಲಾಗಿದೆ. ಜಿಲ್ಲೆಯ ಮಳವಳ್ಳಿ ಹಾಗೂ ಕೆ.ಆರ್. ಪೇಟೆಯಲ್ಲಿ ಮಾತ್ರ ಅನುಮತಿ ನೀಡಲಾಗಿದೆ
ಕೆ. ಕುಮಾರ್.
(ಲೋಕೋಪಯೋಗಿ ಹಾಗೂ ಬಂದರು ಒಳಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್
)

ಪ್ರಕರಣ ದಾಖಲು
2012-13ನೇ ಸಾಲಿನಲ್ಲಿ ಅಕ್ರಮ ಮರಳು ತೆಗೆಯುತ್ತಿರುವವರ ವಿರುದ್ಧ 75ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು ್ಙ 1.65 ಕೋಟಿ   ದಂಡ ವಸೂಲಿ ಮಾಡಲಾಗಿದೆ. ವಶಪಡಿಸಿಕೊಂಡಿರುವ ಮರಳು ಮಾರಾಟ ಮಾಡಿದ್ದರಿಂದ ಆ ಲೆಕ್ಕ ಇದರಲ್ಲಿ ಸೇರಿಲ್ಲ. ಈ ವರ್ಷ ಈಗಾಗಲೇ 15 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ
ಲಕ್ಷ್ಮಮ್ಮ,
( ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ)


ಕಠಿಣ ಶಿಕ್ಷೆ ಅಗತ್ಯ
ಶಿಂಷಾ ನದಿಯಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಿ ದಶಕವೇ ಕಳೆದು ಹೋಗಿದೆ. ಇಂದಿಗೂ ಮರಳು ಗಣಿಗಾರಿಕೆ ನಡೆಯುತ್ತಲೇ ಇದೆ. ಇದರಿಂದಾಗಿ ಶಿಂಷಾ ನದಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ಈ ನದಿ ನಂಬಿಕೊಂಡು ಮಾಡಲಾಗಿದ್ದ ಏತ ನೀರಾವರಿ ಯೋಜನೆಗಳು ಹಾಳಾಗಿವೆ. ಅಧಿಕಾರಿಗಳು ಆಗೊಮ್ಮೆ, ಈಗೊಮ್ಮೆ ದಾಳಿ ನಡೆಸುತ್ತಾರೆ. ದಂಡ ಕಟ್ಟಿಸಿಕೊಂಡು ಬಿಡುವುದರಿಂದ ಮತ್ತೆ ಅದನ್ನೇ ಮಾಡುತ್ತಾರೆ. ನದಿ ಸಂರಕ್ಷಿಸುವ ನಿಟ್ಟಿನಲ್ಲಿ ಕಠಿಣ ಶಿಕ್ಷೆ ವಿಧಿಸಬೇಕಿದೆ
-  ಕೃಷ್ಣಪ್ಪ, ವೈದ್ಯನಾಥಪುರದ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.